Advertisement

UV Fusion: ಪ್ರಕೃತಿಯ ಶಾಪವೋ… ಮಾನವನ ಕರ್ಮವೋ?

11:44 AM Sep 08, 2024 | Team Udayavani |

“ಪ್ರಕೃತಿ’ ಮಾನವನ ಜೀವನಕ್ಕೆ ಜೀವಕಲೆ ತುಂಬುವ ಚೇತನ. ನಿಸರ್ಗಕ್ಕೆ ನಾನಾ ಹೆಸರಿದ್ದರೂ ಅರ್ಥ, ಆಂತರ್ಯ ಒಂದೇ. ಮಾನವನ ಜೀವನ ಆರಂಭವಾಗುವುದರಿಂದ ಹಿಡಿದು ಆತನ ಏಳು-ಬೀಳು, ದುಃಖ-ಖುಷಿ, ಕೊನೆಗೆ ಈ ಲೋಕದ ಎಲ್ಲ ಕರ್ಮ ಮುಗಿಸಿ ಪರಲೋಕಕ್ಕೆ ಸಾಗುವ ತನಕ ನಮ್ಮನ್ನು ಪೊರೆಯುವ ಶಕ್ತಿ ಇರುವುದು ಆ ಮಹಾತಾಯಿಗಷ್ಟೇ.

Advertisement

ಮನುಷ್ಯನ ಏಳಿಗೆಗಾಗಿ ತನ್ನ ಸರ್ವಸ್ವವನ್ನು ಕರಗಿಸಿಕೊಳ್ಳುವ ಮಾತೃಹೃದಯಿ, ಕರುಣಾಮಯಿ ಆಕೆ. ಆದರೆ ಮಾನವ ತನ್ನ ಇತಿ-ಮಿತಿಗಳನ್ನು ದಾಟಿ ಅವಳ ಒಡಲನ್ನೇ ಬಗೆಯುತ್ತಿದ್ದಾನೆ. ಅವಳಾದರು ಮಾಡುವುದನೇನನ್ನು? ತಾನು ಮಿತಿಯಿಲ್ಲದೆ ಕೊಟ್ಟದಕ್ಕಾಗಿ ಅನುಭವಿರಬೇಕಷ್ಟೆ! ಎಲ್ಲವನ್ನು ಕೊಟ್ಟ ತಾಯಿ, ತನ್ನ ಮಕ್ಕಳ ತಪ್ಪನ್ನೆಲ್ಲ ಮನ್ನಿಸುವುದು ಅಸಾಧ್ಯವೇ.

ಸಾಧ್ಯವಿದ್ದರೂ ಸಹನೆಗೆ ಮಿತಿ ಎಂಬುದಿದೆ ಅಲ್ಲವೇ? ಆಕೆ ಕೆಲವೊಮ್ಮೆ ತನ್ನ ಭೂಗರ್ಭದಿಂದ ಭಯ ಹುಟ್ಟಿಸಿದರೆ, ಇನ್ನೂ ಕೆಲವೊಮ್ಮೆ ಗಂಭೀರ ಹಾನಿಯನ್ನೇ ಮಾಡಿಬಿಡುತ್ತಾಳೆ. ಇದಕ್ಕೆಲ್ಲ ಮಾನವರು ದೂರುವುದು ಪ್ರಕೃತಿಯನ್ನಾದರೂ ಆಗಿರುವ ಅನಾಹುತಕ್ಕೆ ತಾವೇ ಕಾರಣಿಗರು ಎಂಬುವುದನ್ನು ಮರೆತಿದ್ದಾರೆ.

ಒಂದು ಹೆಣ್ಣು ತನ್ನ ಮೇಲಾಗುವ ದೌರ್ಜನ್ಯವನ್ನು ಹೆಚ್ಚು ಕಾಲ ಸಹಿಸಲಾರಳು. ತಾಳ್ಮೆಗೆಟ್ಟು ಕೊನೆಗೊಂದು ದಿನ ಅವಳಿಗವಳೇ ಧ್ವನಿಯಾಗುವಳು. ಅಂತೆಯೇ ಪ್ರಕೃತಿಮಾತೆ; ಆಕೆಯೂ ಹೆಣ್ಣಿನ ಪ್ರತಿರೂಪವಲ್ಲವೇ. ಆಕೆಯನ್ನು ಧಿಕ್ಕರಿಸಿ, ಅವಳಿಗೆ ವಿರುದ್ಧವಾಗಿ ನಡೆದರೆ ಏನಾಗಬಹುದು ಎಂಬುದಕ್ಕೆ ಇತ್ತೀಚಿನ ಘಟನೆಗಳೇ ಸಾಕ್ಷಿ.

ಇದೆಲ್ಲವೂ ಮಾನವನ ಅತೀ ಬುದ್ಧಿವಂತಿಕೆಯ ಫಲ. ವೈಜ್ಞಾನಿಕ ಯಂತ್ರ-ತಂತ್ರಗಳು ಭೂ ತಾಯಿಗೆ ತಡೆಯಾಗಿ ನಿಲ್ಲುವುದೆಂದರೆ ಅಪಹಾಸ್ಯವೇ ಸರಿ. ಪ್ರಕೃತಿಗೆ ಇವುಗಳನ್ನೆಲ್ಲ ಕ್ಷಣದಲ್ಲೇ ಕೊನೆ ಮಾಡುವ ಶಕ್ತಿಯಿದೆ. ಹಾಗಿದ್ದರೂ ಆಕೆ ಮೌನವಾಗಿರುತ್ತಾಳೆ. ಆದರೆ ಆಕೆ ಮೌನ ಮುರಿದು ರೌದ್ರಾವತಾರ ತಾಳಿದರೆ ಯಾರಿಂದಲೂ ಎದುರಿಸಲಾಗದು. ಆಕೆ ತಾನು ನೀಡಿದ್ದೆಲ್ಲವನ್ನೂ ಪಂಚಭೂತಗಳಲ್ಲಿ ಸೇರಿಸಿಕೊಂಡು ತನಗಾದ ದೌರ್ಜನ್ಯದ ನೋವನ್ನು ಮಾನವರೂ ಅನುಭವಿಸುವಂತೆ ಮಾಡುವಳು. ಈ ಮೂಲಕ ಆಕೆಯ ಭೂ ಗರ್ಭದ ವೇದನೆಯನ್ನು ಶಮನಮಾಡಿಕೊಳ್ಳುತ್ತಾಳೆ.

Advertisement

ಇತ್ತೀಚೆಗೆ ನಡೆದ ಸಾವು-ನೋವುಗಳನ್ನು ನೆನಪಿಸಿಕೊಂಡರೆ ಮನ ಕದಡುತ್ತದೆ. ಇದು ಮಾನವನ ಸಹಜ ಗುಣ. ಹಾಗೆಯೇ “ಪ್ರಕೃತಿ’ ಎಂಬವಳಿಗೂ ಮನಸೆಂಬುದು ಇರಲೇಬೇಕಲ್ಲಾ! ಏಕೆಂದರೆ ಆಕೆಯೇ ನಮ್ಮನ್ನೆಲ್ಲ ಪೊರೆದ ತಾಯಿ. ಆಕೆ ತನ್ನೊಡಲಿಗೆ ಕೊಡಲಿಪೆಟ್ಟು ಬೀಳುತ್ತಿರುವುದನ್ನು ನೋಡಿಯೂ ಸುಮ್ಮನಿರಬೇಕೇ? ಆಕೆಗೂ ಬದುಕಬೇಕು, ಉಸಿರಾಡಬೇಕು, ಜೀವಸಂಕುಲಕ್ಕೆ ಉಸಿರಾಗಬೇಕಿದೆ.

ಹೀಗಾಗಿ ಮನುಷ್ಯ ಈಗಾಗಲೇ ನಡೆದಿರುವ ಅನಾಹುತಗಳಿಂದ ಪಾಠ ಕಲಿಯಬೇಕಿದೆ. ತಪ್ಪೇ ಮಾಡದೆ ಅವಗ‌ಡಗಳಲ್ಲಿ ಜೀವ ಕಳೆದುಕೊಂಡಿರುವ ಮುಗ್ಧ ಪ್ರಾಣಗಳಿಗೆ ಹೊಣೆ ಯಾರು? ಪರಿಸರವನ್ನು ನಾವು ರಕ್ಷಿಸದ ಹೊರತು, ಪ್ರಕೃತಿ ನಮ್ಮನ್ನು ರಕ್ಷಿಸದು. ಇನ್ನಾದರೂ ಎಚ್ಚೆತ್ತುಕೊಂಡು ಪರಿಸರ ಸ್ನೇಹಿಯಾಗಿ ಬಾಳ್ವೆ ಮಾಡೋಣ.

-ವಿನುತಾ ಕೆಯ್ಯೂರು

ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next