ನನ್ನನ್ನು ಆಗಾಗ ಈ ಪ್ರಶ್ನೆಯೊಂದು ಯಾವಾಗಲೂ ಕಾಡುತ್ತಲೇ ಇರುತ್ತದೆ. ನಮ್ಮ ಬದುಕಿನ ಭಾರವನ್ನೆಲ್ಲಾ ಹೊರುವುದು ನನ್ನ ಅಪ್ಪ ಆದರೆ, ನನ್ನ ಅಪ್ಪನ ಭಾರವನ್ನೆಲ್ಲಾ ಹೊರುವುದು ಯಾರು ಎಂದು. ಅದಕ್ಕೆ ಉತ್ತರ ಹೊಳೆದಿಲ್ಲಾ ಎಂದಲ್ಲ. ನನ್ನ ಮಟ್ಟಿಗೆ ಅನ್ನಿಸುವುದು ಅದು ಚಪ್ಪಲಿ ಎಂದು.
ಚಪ್ಪಲಿ ಎಂದು ಮೂಗು ಮುರಿಯಬಹುದು. ಇಲ್ಲವೇ ತಮಾಷೆ ಎಂದು ನಕ್ಕು ಬಿಡಬಹುದು. ವಾಸ್ತವವಾಗಿ ನಮ್ಮ ಜೀವನದಲ್ಲಿ ಚಪ್ಪಲಿ ಅದೆಷ್ಟರ ಮಟ್ಟಿಗೆ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎಂದು ಒಮ್ಮೆ ಯೋಚಿಸಿದರೆ ಆಶ್ಚರ್ಯವಾಗಬಹುದು. ವೈಜ್ಞಾನಿಕವಾಗಿಯೂ ಅದೆಷ್ಟೋ ರೋಗರುಜಿನಿಗಳನ್ನು ತಡೆಯುವ ಸಾಮರ್ಥ್ಯ ಈ ಚಪ್ಪಲಿಗಳಿವೆ ಎಂದರೆ ಎಲ್ಲರೂ ನಂಬಲೇಬೇಕು. ಹೇಗೆ ಅಂತೀರಾ?
ನಾವು ಬರಿಗಾಲಿನಲ್ಲಿ ಓಡಾಡಿದಾಗ ಮಣ್ಣು ಹಾಗೂ ರಸ್ತೆಯಲ್ಲಿರುವ ರೋಗಾಣು, ಬ್ಯಾಕ್ಟೀರಿಯಾಗಳು ಕಾಲಿನ ಮೂಲಕ ದೇಹವನ್ನು ಪ್ರವೇಶಿಸಿ ಸಾಕಷ್ಟು ರೋಗಗಳಿಗೆ ಆಹ್ವಾನ ನೀಡುತ್ತದೆ. ಆದರೆ ಈ ಚಪ್ಪಲಿ ಅದೆಲ್ಲವನ್ನು ಸಾರಾಸಗಟಾಗಿ ನಿಯಂತ್ರಣ ಮಾಡುತ್ತದೆ.
ಇದಲ್ಲದೇ ಈ ಚಪ್ಪಲಿಗಳಲ್ಲಿ ಮಾನವನಿಗೆ ಬೇಕಾದ ಜೀವನದ ಮೌಲ್ಯಗಳೂ ಅಡಗಿದೆ. ಚಪ್ಪಲಿಗಳು ಎಂದಿಗೂ ತಾನು ಒಮ್ಮೆ ಹಿಂದೆ ಹೋದೆ ಅಥವಾ ಮುಂದೆ ಹೋದೆ ಎಂದು ಹಿಗ್ಗುವ ಅಥವಾ ಕುಗ್ಗುವುದಿಲ್ಲ. ಅದಕ್ಕೆ ತಿಳಿದಿದೆ ಇದು ಕ್ಷಣಕಾಲದಲ್ಲಿ ಬದಲಾಗುತ್ತದೆ ಎಂದು.
ನಮ್ಮ ಬದುಕಿನಲ್ಲೂ ಅಷ್ಟೇ ಸೋಲು ಬಂದಾಗ ಕುಗ್ಗದೇ, ಗೆಲುವು ಬಂದಾಗ ಹಿಗ್ಗದೇ ಎರಡನ್ನೂ ಸರಿಸಮಾನವಾಗಿ ಸ್ವೀಕಾರ ಮಾಡುವ ಗುಣವನ್ನು ನಾವು ಚಪ್ಪಲಿಯಿಂದ ಕಲಿಯಬೇಕಾಗಿದೆ. ಚಪ್ಪಲಿ ಬದುಕಿನುದ್ದಕ್ಕೂ ಮುಳ್ಳು, ಕಲ್ಲುಗಳನ್ನು ತಾಗಿಸಿಕೊಂಡು ಕಾಲಿಗೆ ನಿರಂತರವಾಗಿ ರಕ್ಷಣೆ ನೀಡುತ್ತಲೇ ಇರುತ್ತದೆ.
ಹೀರೋವೊಬ್ಬ ಹೀರೋಯಿನ್ ಚಪ್ಪಲ್ ನೋಡಿ ಪ್ರೀತಿ ಮಾಡಿದ ಸಿನೆಮಾ ಕೂಡ ಇದೆ. ಪ್ರೀತಿ ಹುಟ್ಟೋಕೆ ಚಪ್ಪಲಿಯೂ ಕಾರಣವಾಗುತ್ತದೆ ಎಂಬುದನ್ನು ಈ ಸಿನೆಮಾದಲ್ಲಿ ವಿವರಿಸಿದ್ದಾರೆ. ಹೀಗೆ ಎಷ್ಟೋ ವಸ್ತುಗಳು ಮನುಷ್ಯನ ಜೀವನಕ್ಕೆ ಅತ್ಯಂತ ಅಮೂಲ್ಯವಾದವುಗಳೇ ಆಗಿವೆ. ಆದರೆ ಅವುಗಳ ಮೌಲ್ಯ ತಿಳಿಯದೇ ನಾವೇ ಅವುಗಳನ್ನು ಕೀಳಾಗಿ ಕಾಣುತ್ತೇವೆ. ಕಣ್ಣು ತೆರೆದು ನೋಡಿದರೆ ಬದುಕು ಅದೆಷ್ಟು ಸುಂದರ ಎಂಬುದು ಅರಿವಿಗೆ ಬರುತ್ತದೆ.
ಅನಿತಾ ಹೂಗಾರ,
ಮಂಗಳೂರು