ಜಾತ್ರೆ, ಮೆರವಣಿಗೆಗಳಲ್ಲಿ ಗೊಂಬೆ ನೃತ್ಯ ಮಾಡುವವರು, ಕೀಲುಕುದುರೆ ಪ್ರದರ್ಶನ ನೀಡುವವರನ್ನು ಕಂಡಿರುತ್ತೇವೆ. ಅವರು ಮಾಡುವ ಚೇಷ್ಟೆಗಳನ್ನು ನೋಡಿ ಎಷ್ಟೋ ಮಂದಿ ಮನಸಾರೆ ನಕ್ಕಿರುತ್ತಾರೆ. ನಮ್ಮ ನಗುವೇ ಅವರಿಗೆ ಮನತೃಪ್ತಿಯನ್ನು ನೀಡುತ್ತದೆ. ಆದರೆ ಮುಖವಾಡದಲ್ಲಿರುವ ನಗುವೇ ಅವರ ಮುಖದಲ್ಲೂ ಇರುತ್ತವೆ ಎನ್ನುವುದು ನಮ್ಮ ತಪ್ಪು ಕಲ್ಪನೆ ಅನ್ನಬಹುದು.
ಇಂದಿನ ಮನುಕುಲದಲ್ಲಿ ಮಾನವೀಯತೆ ಎಂಬುದು ಮರೆಯಾಗುತ್ತಿದೆ. ಮಾನವೀಯ ಮೌಲ್ಯಗಳನ್ನು ಒಳಗೊಂಡವನಿಗೆ ಮಾತ್ರ ಮನುಷ್ಯ ಎನ್ನಬಹುದು. ಆದರೆ ಮನುಷ್ಯ ತನ್ನ ಮೋಜಿಗಾಗಿ ಈ ಜೋಕರ್‌ಗಳಿಗೆ ಅದೆಷ್ಟೋ ಬಾರಿ ಘಾಸಿಯನ್ನುಂಟುಮಾಡುತ್ತಾನೆ. ಅವರ ಮುಖವಾಡಗಳಿಗೆ ಹೊಡೆಯುವುದಾಗಿರಬಹುದು ಅಥವಾ ಚೇಷ್ಟೆಗಾಗಿ ನೋವನ್ನುಂಟು ಮಾಡುವುದಾಗಿರಬಹುದು ಹೀಗೆ. ನಮ್ಮ ಮುಖದಲ್ಲಿ ನಗು ಕಾಣಲು ಪರಿಶ್ರಮ ಪಡುವವರಿಗೆ ನೋವುಂಟು ಮಾಡುವುದು ಅದೆಷ್ಟು ಸರಿ. ಅವರೂ ಮನುಷ್ಯರೆ ತಾನೆ.
ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಸಮಯ ಪ್ರಜ್ಞೆ ಎನ್ನುವುದು ಅಗತ್ಯ. ಅದರಲ್ಲೂ ಈ ಕ್ಷೇತ್ರದಲ್ಲಂತು ತುಂಬಾನೆ ಅತ್ಯಗತ್ಯ. ಒಂದು ನಿಮಿಷ ತಡವಾದರೂ ಅವರಿಗೆ ಸಿಗುವ ಸಂಬಳದಲ್ಲಿ ಕಡಿತ ಮಾಡಲಾಗುತ್ತದೆ. ಹಿಂದೆ ಈ ಜೋಕರ್‌ಗಳ ಮುಖವಾಡಗಳನ್ನು ಮಣ್ಣಿನಲ್ಲಿ ಮುಖವಾಡದ ಅಚ್ಚು ಮಾಡಿ ಬಳಿಕ ಪೇಪರ್ ಮೋಡಲ್‌ಗಳ ಮೂಲಕ ರಚಿಸಲಾಗುತ್ತಿತ್ತು. ಆದರೆ ಈಗ ಫೈಬರ್ ಮುಖವಾಡಗಳದ್ದೇ ರಾಜ್ಯಭಾರ. ಸುಮಾರು 4ರಿಂದ 5 ಅಡಿ ಎತ್ತರದ ರಾಜ- ರಾಣಿ, ಮಹಿಷಾಸುರ, ನರಸಿಂಹ, ಜೋಕರ್ ಆಕಾರಗಳನ್ನು ರಚಿಸಲಾಗುತ್ತದೆ. ಆದರೆ ಇವರನ್ನು ಒಬ್ಬ ಸಾಮಾನ್ಯ ಮನುಷ್ಯರಂತೆ ಕಾಣಲಾಗುತ್ತಿಲ್ಲ. ಈ ಕೆಲಸಕ್ಕೂ ಬೆಲೆ ಸಿಗುತ್ತಿಲ್ಲ. ಒಬ್ಬ ವ್ಯಕ್ತಿ ಮಾಡುವುದು ಚಿಕ್ಕ ಕೆಲಸವಾದರೂ ಅದು ಕೂಡ ಕಾಯಕವೇ ತಾನೆ.
ಎಲ್ಲ ಜನರು ಮೂರು ಹೊತ್ತಿನ ಊಟಕ್ಕಾಗಿಯೇ ದುಡಿತವನ್ನು ಅವಲಂಬಿಸಿ ಬದುಕುತ್ತಾರೆ. ಇನ್ನಾದರೂ ನಮ್ಮನ್ನು ನಗಿಸಲು ಇರುವ ಜೋಕರ್‌ಗಳ ತಂಡಕ್ಕೆ ನೋವುಂಟು ಮಾಡದಿರೋಣ. ಎಲ್ಲ ಕಾಯಕಗಳಿಗೂ ಸಮಾನ ಗೌರವವನ್ನು ನೀಡೋಣ. ಇಂದಿನ ಯುವ ಪೀಳಿಗೆ ಮಾನವೀಯತೆಯನ್ನು ಮೆರೆದು ಬದುಕನ್ನು ಸಾಗಿಸಬೇಕು.
– ತೃಪ್ತಿ ಗುಡಿಗಾರ್
ಎಂ.ಪಿ.ಎಂ. ಕಾಲೇಜು, ಕಾರ್ಕಳ