ನಮ್ಮ ಸಾವು ನಾವು ಸಂಭ್ರಮಿಸುವಂತೆ ಇರಲಿ. ಈ ಸಾಲುಗಳನ್ನು ಕೇಳಿದರೆ ಒಮ್ಮೆ ಆಶ್ಚರ್ಯವಾಗಬಹುದು. ಹೌದು… ನಮ್ಮ ಸಾವು ನಾವು ಸಂಭ್ರಮಿಸುವಂತೆ ಇರಬೇಕು. ಅದು ಹೇಗೆ ಸಾಧ್ಯವೆಂದರೆ ನಮ್ಮ ಸಾವಿನ ದಿನಗಳಲ್ಲಿ ನಾವು ನಡೆದು ಬಂದ ಹಾದಿ ನಮಗೆ ನೆಮ್ಮದಿಯ ನಿಟ್ಟುಸಿರಾಗಿರಬೇಕು.
ಬದುಕಿನ ಉದ್ದಗಲಕ್ಕೂ ಯಾರಿಗೂ ಮೋಸ ಮಾಡದೆ, ನ್ಯಾಯಯುತವಾಗಿ ಹಣ ಸಂಪಾದಿಸಿರಬೇಕು. ಬದುಕಿನಲ್ಲಿ ನಮಗೆ ಜನ್ಮವಿತ್ತ ತಂದೆ-ತಾಯಿಗಳಿಗೆ ಋಣಿಗಳಾಗಿದ್ದು, ಅವರ ಸೇವೆ ಮಾಡಿರಬೇಕು. ರಕ್ತ ಸಂಬಂಧಗಳನ್ನು ಹಣದಿಂದ ಅಳೆಯದೆ ಗುಣಗಳಿಗೆ ಅನುಸಾರ ಗೌರವಿಸಿ, ಸಮಯಕ್ಕೆ ಹೆಗಲಾಗಿ ಬದುಕಿರಬೇಕು. ನಾವು ದುಡಿದ ನೂರು ರೂಪಾಯಿಯಲ್ಲಿ ಒಂದು ರೂಪಾಯಿ ಆವಶ್ಯಕತೆ ಇರುವವರಿಗೆ ಸಹಾಯ ಹಸ್ತ ನೀಡಬೇಕು.
ಹೀಗೆ ಬದುಕಿನ ಪಯಣವನ್ನ ಸಾಗಿ ಬಂದ ನಮಗೆ ನಮ್ಮ ವಯೋಸಹಜ ಸಾವನ್ನು ಕೂಡ ಸಂಭ್ರಮಿಸಿ ದೇವರು ನೀಡಿದ ಈ ಮಣ್ಣಿನ ಋಣವನ್ನು ನೆನೆದು ನಿರ್ಗಮಿಸಬೇಕು. ಸಾವು ಕೂಡ ನಮ್ಮ ಬದುಕಿನ ಕಹಿ ಸತ್ಯ ಅಲ್ಲವೇ. ನಾನು ಅಂದುಕೊಂಡದ್ದನ್ನು ಜೀವನದಲ್ಲಿ ಸಾಧಿಸಿದರೆ, ನಮ್ಮ ಕುಟುಂಬಕ್ಕೆ ಭದ್ರತೆಯನ್ನು ಒದಗಿಸಿದ್ದರೆ, ಜೀವನದಲ್ಲಿ ಎಲ್ಲವನ್ನೂ ಅನುಭವಿಸಲು ನನ್ನಿಂದ ಸಾಧ್ಯವಾಗಿದೆ, ಕಷ್ಟದಲ್ಲಿರುವವರಿಗೆ ನೆರವಾಗಿದ್ದೇನೆ..
ನಾನು ಸತ್ತರೂ ನನ್ನನ್ನು ನೆನೆಪಿಸಿಕೊಳ್ಳವಷ್ಟು ಹೃದಯಗಳನ್ನು ಸಂಪಾದಿಸಿದ್ದೇನೆ ಎಂದರೆ ಸಾವು ಕೂಡ ಸಂಭ್ರಮದಿಂದಲೇ ಸ್ವೀಕರಿಸಬಹುದು. ಯಾಕೆಂದರೆ ಸಾವು ಯಾರಿಗೂ ಹೊರತಾಗಿಲ್ಲ. ಆದರೆ ಬದುಕಿದ್ದಷ್ಟು ದಿನ ಹೇಗೆ ಬದುಕಿದ್ದೆವು ಎನ್ನುವುದು ಮಹ ತ್ವದ್ದು. ಬದುಕಿದ್ದಾಗಲೆಲ್ಲ ಇತತರಿಗೆ ಹೊರೆಯಾಗಿ, ನೋಯಿಸಿ, ಇನ್ನೊಬ್ಬರ ಹಣದಲ್ಲಿ ಬದುಕಿ ಕೊನೆ ದಿನಗಳಲ್ಲಿ ಅದಕ್ಕಾಗಿ ಪಶ್ಚಾತಾಪಪಟ್ಟರೆ ಮತ್ತೆ ಹಿಂದಿನ ದಿನಗಳು ಬರಲು ಸಾಧ್ಯವೇ ? ವಾಸ್ತವಿಕವಾಗಿ ನಮ್ಮ ಸಾವಿನಲ್ಲಿ ಅತ್ತವರೆಲ್ಲ ನಾವು ಬದುಕಿದ್ದಾಗ ನಮಗೆ ಹೆಗಲಾದವರಲ್ಲ. ಕೆಲವೊಮ್ಮೆ ನಮ್ಮ ಹೆಣ ಹೊರುವ ಭುಜಗಳು ಕೂಡ ನಮ್ಮ ಬದುಕಿನಲ್ಲಿ ಕಿಂಚಿತ್ತೂ ಬೆಸೆಯದೆ ಇರುವ ಜೀವಗಳಿರಬಹುದು. ನಾವು ಸತ್ತಾಗ ಹೊತ್ತು ಮುಳುಗುತ್ತಿದೆ ಬೇಗ ಮುಗಿಸಿ ಎನ್ನುವ ಮಾತುಗಳು ಸಹಜ.
ನಾವು ನಮ್ಮ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯ ಸದೃಢವಾಗಿರುವಾಗಲೇ ನಮ್ಮ ಕುಟುಂಬದ ಹಿತದೃಷ್ಟಿಯಿಂದ ಅವರ ಮುಂದಿನ ದಿನಗಳಿಗೆ ಉಪಯುಕ್ತವಾಗುವ ರೀತಿಯಲ್ಲಿ ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು. ಒಮ್ಮೆ ಸೋತರು ಸರಿ, ತುಸು ಕಷ್ಟವಾದರೂ ಸರಿ, ಒಳ್ಳೆಯ ಮಾರ್ಗದಿಂದ ಹಣಗಳಿಸುವ ಮಾರ್ಗವನ್ನು ಕಂಡುಕೊಳ್ಳಬೇಕು.
ನಮ್ಮ ಬದುಕನ್ನು ಯಾರಿಗೂ ಹೋಲಿಸಿಕೊಳ್ಳಬಾರದು. ನಮ್ಮ ಸೋಲು, ನಮ್ಮ ಆರ್ಥಿಕ ಪರಿಸ್ಥಿತಿ, ನಮ್ಮ ಬವಣೆಗಳನ್ನು ಇತರರಿಗೆ ಹೋಲಿಸಿಕೊಳ್ಳಬಾರದು. ವಿಶ್ವಗುರು ಬಸವಣ್ಣನವರು ಹೇಳಿರುವಂತೆ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ. ನಮ್ಮ ಸಾವು ನಾವು ಸಂಭ್ರಮಿಸುವಂತೆ ಇರಲಿ.
-ಮಂಜೇಶ್ ದೇವಗಳ್ಳಿ
ಮೈಸೂರು