ಪ್ರತಿಯೊಬ್ಬರ ಜೀವನದಲ್ಲಿ ನಾನು ಎಂಬ ಪಾತ್ರದೊಂದಿದೆ ಇತರರ ಪಾತ್ರವೂ ಪ್ರಮುಖವಾಗಿರುತ್ತದೆ. ನಮಗನಿಸಬಹುದು ನಾನು ಜೀವನದಲ್ಲಿ ಯಾರ ಋಣದಲ್ಲೂ ಬದುಕಿಲ್ಲ, ಯಾರ ಋಣವೂ ನನ್ನ ಮೇಲಿಲ್ಲ ಎಂದು. ಆದರೆ ಆ ಆಲೋಚನೆ ತಪ್ಪು. ಕೂಲಂಕುಷವಾಗಿ ನೋಡಿದರೆ ಒಂದಲ್ಲ ಒಂದು ರೀತಿಯಲ್ಲಿ ನಾವು ಬೇರೆಯವರ ಋಣದಲ್ಲಿ ಜೀವಿಸುತ್ತಿರುತ್ತೇವೆ.
ಋಣ ಎಂದರೆ ಹಣ ಮಾತ್ರವಲ್ಲ, ಬಾಲ್ಯದಲ್ಲಿ ನಮಗೆ ತುತ್ತು ತಿನ್ನಿಸಿದ ನೆರೆಮನೆಯ ಅಕ್ಕ, ನಾವು ಶಾಲೆಗೆ ಹೋಗುವಾಗ ನಮ್ಮನ್ನು ಕಂಡು ಬೈಕ್ ನಿಲ್ಲಿಸಿ ಶಾಲೆಯ ಹತ್ತಿರ ಬಿಡುವ ನೆರೆಯ ಅಣ್ಣ, ಊರಿನ ಅಂಗಡಿಯಲ್ಲಿ ಒಂದು ರೂಪಾಯಿ ಕಮ್ಮಿ ಇದ್ದರು ನಮ್ಮಿಷ್ಟದ ತಿನಿಸು ಕೊಟ್ಟ ನಗು ಮುಖದ ಅಂಗಡಿಯಣ್ಣ, ಶಾಲೆಯಲ್ಲಿ ತಂದೆಗೆ ಸಮಾನರಾಗಿ ವಿದ್ಯೆ ಕಲಿಸಿದ ಮೇಷ್ಟ್ರು, ಬಂಧುವಿನಂತೆ ಸಮಯದಲ್ಲಿ ನೆರೆವಾದ ಗೆಳೆಯರು, ಹೆಗಲಿಗೆ ಬಲ ನೀಡಿ ಬೆಳೆಸಿದ ಹಡೆದವರು, ರಕ್ತ ಹಂಚಿಕೊಂಡು ಬೆಸೆದ ಬಂದದಲ್ಲಿ ತಂದೆಯಂತೆ ಬುದ್ಧಿ ಹೇಳುವ ದೊಡ್ಡಪ್ಪ- ಚಿಕ್ಕಪ್ಪ, ನಮ್ಮಿಷ್ಟಗಳನ್ನು ಅರಿತು ಬೆರೆತು ಸಲಹುವ ಅಣ್ಣ-ತಮ್ಮ ಹೀಗೆ ನಮ್ಮ ಜೀವನ ರಾಷ್ಟ್ರ ಕವಿ ಜಿ. ಎಸ್. ಶಿವರುದ್ರಪ್ಪ ಹೇಳಿರುವಂತೆ ಎನಿತು ಜನ್ಮದಲಿ ಎನಿತು ಜೀವರಿಗೆ, ಎನಿತು ನಾವು ಋಣಿಯೊ ತಿಳಿದು ನೋಡಿದರೆ ಬಾಳು ಎಂಬುದಿದು, ಋಣದ ರತ್ನಗಣಿಯೊ. ಹೀಗೆ ನಮ್ಮ ಜೀವನವೇ ಒಂದು ಋಣದ ರತ್ನಗಣಿ. ಈ ಋಣವನ್ನು ಹಣ ಅಥವಾ ಉಡುಗೊರೆಯ ರೂಪದಲ್ಲಿ ತೀರಿಸಲು ಸಾಧ್ಯವಿಲ್ಲ.
ಋಣದ ಮಹತ್ವಕ್ಕೆ ಮತ್ತೂಂದು ಸಾಕ್ಷಿ ಶ್ರೀ ಕೃಷ್ಣ ಪರಮಾತ್ಮ. ಶ್ರೀಕೃಷ್ಣ ಹಿಂದಿನ ಜನ್ಮದಲ್ಲಿ ರಾಮನಾಗಿ ವನವಾಸದಲ್ಲಿದ್ದ ಸಂದರ್ಭ ನೀರಿಗಾಗಿ ಹುಡುಕುವಾಗ ನವಿಲೊಂದು ರಾಮನಿಗೆ ನೀರಿರುವ ಸ್ಥಳವನ್ನು ತೋರಿಸುವೆನೆಂದು ಕರೆದುಕೊಂಡು ಹೋಗುತ್ತದೆ. ನವಿಲು ತಾನು ಹಾರಿದರೆ ತನ್ನ ಗರಿಗಳು ಬಿದ್ದು ಸಾಯುವುದಾಗಿ ತಿಳಿದಿದ್ದರೂ ರಾಮನಿಗೆ ನೀರಿರುವ ಸ್ಥಳವನ್ನು ತೋರಿಸಿ ತನ್ನೆಲ್ಲಾ ಗರಿಗಳನ್ನು ಕಳೆದುಕೊಂಡು ರಕ್ತಸ್ರಾವದಿಂದ ಸಾವನ್ನಪ್ಪುತ್ತದೆ. ರಾಮನು ನವಿಲಿಗೆ ಮುಂದಿನ ಜನ್ಮದಲ್ಲಿ ನಿನ್ನ ಋಣವನ್ನೂ ಸ್ಮರಿಸುತ್ತೇನೆ, ನಿನ್ನ ಗರಿಯನ್ನು ನನ್ನ ಕಿರೀಟದಲ್ಲಿ ಮೆರೆಸುತ್ತೇನೆ ಎಂದು ಮಾತು ನೀಡುತ್ತಾನೆ. ಅಂತೆಯೇ ಮುಂದಿನ ಜನ್ಮದಲ್ಲಿ ಶ್ರೀಕೃಷ್ಣನಾಗಿ ಜನಿಸಿದಾಗ ತನ್ನ ಕಿರೀಟದಲ್ಲಿ ನವಿಲುಗರಿಯನ್ನು ಧರಿಸಿ ನವಿಲಿನ ಋಣವನ್ನ ಸ್ಮರಿಸುತ್ತಾನೆ.
ಇದೇ ರೀತಿ ನಾವು ಕೂಡ ಜೀವನದಲ್ಲಿ ಹಲವರಿಂದ ಒಂದಲ್ಲ ಒಂದು ರೀತಿಯಲ್ಲಿ ಋಣವನ್ನು ಹೊಂದಿರುತ್ತೇವೆ. ಅವರ ಋಣವನ್ನು ಸ್ಮರಿಸಿ ಅವರನ್ನು ಗೌರವಿಸೋಣ, ಸಮಯ ಒದಗಿದರೆ ಅವರಿಗೆ ನೆರೆವಾಗೋಣ, ಜತೆಗೆ ಸವಿ ನೆನಪುಗಳನ್ನು ಸೃಷ್ಟಿಸೋಣ. ನಮಗೆ ಜೀವನದಲ್ಲಿ ಋಣದ ಅರಿವು ನಮಗಿದ್ದರೆ ನಮ್ಮ ಗುಣವು ಕೂಡ ಒಳಿತಿನ ಹಾದಿಯಲ್ಲಿ ಸಾಗುತ್ತದೆ.
-ಮಂಜೇಶ್ ದೇವಗಳ್ಳಿ
ಮೈಸೂರು