Advertisement
ಆಗಷ್ಟೇ ತೊದಲು ನುಡಿಗಳಿಂದ ಮಾತನಾಡಲು ಪ್ರಾರಂಭಿಸುವ ಮಗುವು ತನ್ನ ಅಪ್ಪ ಅಮ್ಮನಿಗೆ ಎಷ್ಟು ಪ್ರಶ್ನೆಗಳನ್ನು ಕೇಳಬಹುದೆಂದು ಪ್ರಶ್ನಿಸಿಕೊಂಡರೆ, ಉತ್ತರವೂ ಸಹ ಪ್ರಶ್ನೆಯಾಗಿಯೇ ಉಳಿಯಬಹುದು. ಏಕೆಂದರೆ ಬೆಳೆಯುವ ಮಕ್ಕಳಲ್ಲಿ ವಿಪರೀತ ಕುತೂಹಲ ಇರುತ್ತದೆ. ಸಹಜವಾಗಿ ಪ್ರಶ್ನೆಗಳು ಸಹ ಸರಮಾಲೆಯಂತೆಯೇ ಇರುತ್ತದೆ.
Related Articles
Advertisement
ಪ್ರಶ್ನಿಸುವ ಕಲೆ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಾಯಕ. ಪ್ರಶ್ನಿಸುವ ಕಲೆಯಿಂದಲೇ ನಮ್ಮಲ್ಲಿ ಎಷ್ಟೋ ಜನರು ಮೇಧಾವಿಗಳಾಗಿ ಪ್ರಸಿದ್ಧಿಯನ್ನು ಹೊಂದಿದ್ದಾರೆ. ಏಕೆ, ಏನು, ಹೇಗೆ, ಎಲ್ಲಿ, ಯಾವಾಗ ಎಂಬ ಪ್ರಶ್ನೆಗಳು ಅವರಿಗೆ ಬರದೇ ಇದ್ದಿದ್ದರೆ ಅವರು ಇಂದು ಪ್ರಖ್ಯಾತರಾಗುತ್ತಲೇ ಇರುತ್ತಿರಲಿಲ್ಲ…!
ಸರ್ ಐಸಾಕ್ ನ್ಯೂಟನ್ ಸೇಬಿನ ಮರದ ಕೆಳಗೆ ಕುಳಿತಿರುವಾಗ, ಸೇಬು ಅವರ ತಲೆಯ ಮೇಲೆ ಬಿದ್ದಿತು. ಆ ಸೇಬು ಕೆಳಗೇ ಏಕೆ ಬಿತ್ತು? ಮೇಲೆ ಏಕೆ ಹೋಗಲಿಲ್ಲ? ಎಂಬ ಪ್ರಶ್ನೆ ಅವರಿಗೆ ಅಂದು ಬರದೇ ಇದ್ದಿದ್ದರೆ ಗುರುತ್ವಾಕರ್ಷಣೆಯ ಸಿದ್ಧಾಂತ ರೂಪುಗೊಳ್ಳುತ್ತಲೇ ಇರಲಿಲ್ಲ.
ಸರ್ ಎಂ. ವಿಶ್ವೇಶ್ವರಯ್ಯ ಅವರು ಮೊಟ್ಟ ಮೊದಲ ಬಾರಿ ಜೋಗ ಜಲಪಾತವನ್ನು ವೀಕ್ಷಿಸಿದ ಎಲ್ಲರೂ ಅದರ ಸೌಂದರ್ಯದ ಬಗ್ಗೆ ಹಾಡಿಹೊಗಳುತ್ತಿದ್ದರೆ ವಿಶ್ವೇಶ್ವರಯ್ಯನವರು ಇದೇಕೆ ಇಷ್ಟು ನೀರು ವ್ಯರ್ಥವಾಗಿ ಪೋಲಾಗುತ್ತಿದೆಯಲ್ಲ? ಎಂದು ಪ್ರಶ್ನಿಸಿಕೊಂಡರಂತೆ. ಆ ಪ್ರಶ್ನೆಯಿಂದಲೇ ಮುಂದೆ ಜಲವಿದ್ಯುತ್ ಯೋಜನೆ ಅಲ್ಲಿ ಶುರುವಾಗಲು ಕಾರಣವಾಯಿತು.
ಈ ರೀತಿ ತಮಗೆ ತಾವೇ ಪ್ರಶ್ನಿಸಿಕೊಂಡರೆ ಅದರಿಂದ ಸಿಗುವ ಉತ್ತರ ಜೀವನದ ಗತಿಯನ್ನೇ ಬದಲಿಸಬಹುದು. ಪೋಷಕರಾದ ನಾವು ಮಕ್ಕಳಿಗೆ ಇಂದಿನಿಂದಲೇ ಪ್ರಶ್ನಿಸಲು ಪ್ರೋತ್ಸಾಹಿಸಬೇಕು. ಆಗ ಮಾತ್ರ ಅವರು ಯಾವುದೇ ಶೋಷಣೆ, ದೌರ್ಜನ್ಯಗಳಿಗೆ ಅಕಸ್ಮಾತ್ ಒಳಗಾದರೂ ಅದರ ಬಗ್ಗೆ ಭಯಪಡದೆ ಅಪ್ಪ ಅಮ್ಮನಲ್ಲಿ ಬಂದು ಹೇಳುತ್ತಾರೆ.
ಪೋಷಕರು ಸಹ ಅಂತಹ ಸಮಯದಲ್ಲಿ ಮಗುವನ್ನು ದೂಷಿಸದೆ ಅಥವಾ ವಿಷಯವನ್ನು ಮುಚ್ಚಿಡದೆ, ಧೈರ್ಯವಾಗಿ ಮುಂದಿನ ಹೆಜ್ಜೆಯನ್ನು ಇಡಬೇಕಾಗಿದೆ. ಪ್ರಶ್ನಿಸುವುದನ್ನು ಕಲಿತ ಮಗುವೇ ದೊಡ್ಡವನಾದಾಗ ಯಾವುದೇ ಅನ್ಯಾಯದ ವಿರುದ್ಧ ಮುಲಾಜಿಲ್ಲದೆ ಧ್ವನಿ ಎತ್ತುತ್ತಾರೆ. ಆಗ ಮಾತ್ರ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ಕಡಿಮೆಯಾಗಿಸಬಹುದಾಗಿದೆ.
ಇವೆಲ್ಲದಕ್ಕೂ ಒಂದೇ ಉತ್ತರವೆಂದರೆ ಪ್ರಶ್ನಿಸುವ ಮಗುವನ್ನು ಏಕೆ ಪ್ರಶ್ನಿಸುತ್ತೀಯಾ? ಎನ್ನದೇ ತಾಳ್ಮೆಯಿಂದ ಉತ್ತರಿಸುವುದಾಗಿದೆ.
-ಅಚಲ ಬಿ., ಹೆನ್ಲಿ
ಬೆಂಗಳೂರು