ಐಚ್ಛಿಕ ಇಂಗ್ಲಿಷ್ ತರಗತಿಯಲ್ಲಿ ಕೆಲವು ರೊಮ್ಯಾಂಟಿಕ್ ಕವಿತೆಗಳನ್ನು ಪಾಠ ಮಾಡುವಾಗ ಏನಿದು ಮಳೆ, ಗಾಳಿ, ಮರವನ್ನು ಕೂಡ ಇಷ್ಟೊಂದು ರೊಮ್ಯಾಂಟಿಕ್ ಆಗಿ ಹೇಳ್ಳೋ ಅಗತ್ಯ ಇದೀಯಾ ಎಂದುಕೊಳ್ಳುತ್ತಿದ್ದೆ.
ಜೀವನದಲ್ಲಿ ಪ್ರೀತಿಯಾದಾಗ ಇಂಥ ಕವಿತೆ, ಕವನಗಳ ಭಾವಾರ್ಥ ಗೊತ್ತಾಗುತ್ತೆ ಎನ್ನುತ್ತಿದ್ದರು ವಿನುತಾಕ್ಕ.
ಆದರೆ ಏತನ್ಮಧ್ಯೆ, ನಾನು ಪ್ರೀತಿಯಲ್ಲಿ ಬಿದ್ದೆ. ನಮ್ಮ ಮಹಾರಾಣಿ ಕಾಲೇಜು, ಕೆ.ಆರ್. ಸರ್ಕಲ್‌ನಿಂದ ಫ್ರೀಡ್‌ಂ ಪಾರ್ಕ್‌ವರೆಗೆ ರಸ್ತೆಯುದ್ದಕ್ಕೂ ಸಾಲು ಮರಗಳು. ಚಳಿಗಾಲದಲ್ಲಿ ಇಲ್ಲಿ ಬಣ್ಣ ಬಣ್ಣದ ಹೂಗಳು ಅರಳಿ ನಿಂತಿರುತ್ತಿದ್ದವು.
ಡಿಗ್ರಿ ಪರೀಕ್ಷೆ ಸಂದರ್ಭ ಬೆಳಗ್ಗೆ ಎಂಟು ಗಂಟೆಯೊಳಗೆ ಕಾಲೇಜಿಗೆ ಹಾಜರಾಗಿ ಕ್ಯಾಂಟೀನ್‌ನ ಪಕ್ಕದ ಬೆಂಚಿನ ಮೇಲೆ ಕುಳಿತು ಓದಿಕೊಳ್ಳುತ್ತಿದ್ದೆವು. ಕಾಲೇಜು ಸ್ಟಾಪ್ ಬಂದಾಗ ಬಸ್ ಇಳಿಯಲು ಮುಂದಾದರೆ ಕಾಲಡಿಯಲ್ಲಿ ಹೂಗಳು ಬಿದ್ದಿರುತ್ತಿದ್ದªವು. ರಸ್ತೆ ಉದ್ದಕ್ಕೂ ಚಾಚಿದ್ದ ಹೂ ಹಾಸಿಗೆ ನನ್ನ ಶುಭ ಕೋರುತ್ತಿದ್ದರೆ ನಾನು ಮಹಾರಾಣಿಯಂತೆ ಭಾಸವಾಗುತ್ತಿತ್ತು.
ಇದು ಒಂದು ದಿನದ ಕಥೆಯಲ್ಲ ಪರೀಕ್ಷೆ ಮುಗಿಯುವವರೆಗೂ ಇದೆ ಅನುಭವವಾಗತೊಡಗಿತು. ನನಗಾಗಿಯೇ ಯಾರೋ ನನ್ನ ಸ್ವಾಗತಕ್ಕೆ ಹೂ ಹಾಸಿಗೆಯನ್ನು ಹಾಕಿದ್ದಾರೆ ಎಂದೆನಿಸುತ್ತಿತ್ತು. ಮರುದಿನ ಬಸ್ಸಿಳಿದು ಹೂ ಉದುರಿಸುತ್ತಿದ್ದ ಮರಗಳನ್ನು ನೋಡಿ, ನಗುತ್ತಾ “ಪ್ರೀತಿ ಎಂದರೆ ಮೂಗು ಮುರಿಯುತ್ತಿದ್ದ ನನಗೆ ಪ್ರೀತಿಯ ಪದರಗಳ ಎಳೆ ಎಳೆಯಾಗಿ ಬಿಡಿಸಿ, ಅರ್ಥೈಸಿದ್ದು ನೀನೇ ಅಲ್ಲವೇ ಪ್ರಕೃತಿ’.
ಪ್ರಕೃತಿಯ ಮೇಲಿದ್ದ ಪ್ರೀತಿ ದುಪ್ಪಾಟ್ಟಾಯಿತು. ಪ್ರಕೃತಿ ಪ್ರೇಮಿಯಾಗಿ, ನಿಸರ್ಗದ ಅಣುವಣುವನ್ನೂ ಪ್ರೀತಿಸತೊಡಗಿದೆ. ಇಂದಿಗೂ ಪುಟ್ಟ ಸಸಿಗಳನ್ನು ನೆಡುವುದರಿಂದ ಹಿಡಿದು ಗಿಡ, ಮರಗಳನ್ನು ಬೆಳೆಸುವುದು, ಹೂಗಳ ಫೋಟೋ ಕ್ಲಿಕ್ಕಿಸುವ ಹುಚ್ಚು ಹಿಡಿಸಿಕೊಂಡಿರುವೆ. ಹೆಮ್ಮೆಯಿಂದ ಹೇಳುವೆ ನಿನ್ನ ನಾ ಪ್ರೀತಿಸುವೆ. ಪ್ರಕೃತಿಯೇ ನಿನ್ನ ನಾ ಪ್ರೀತಿಸುವೆ.
ವಿದ್ಯಾ ಹೊಸಮನಿ, ಕನ್ನಡ ವಿಶ್ವವಿದ್ಯಾನಿಲಯ ಹಂಪಿ