Advertisement
ರೂಪದ ವಿಚಾರ ಒಂದು ಕಡೆಯಾದರೆ ಕುಡಿದಷ್ಟೂ ತೀರದ ದಾಹ ಇನ್ನೊಂದು ಕಡೆ. ಕುಡಿದ ತಂಪು ಪಾನೀಯಗಳೆಷ್ಟೋ, ಕಸದ ಬುಟ್ಟಿಗೆ ಎಸೆದ ಬಿಸ್ಲೆರಿ ಬಾಟಲಿಗಳೆಷ್ಟೋ ಒಂದಕ್ಕೂ ಸರಿಯಾದ ಲೆಕ್ಕವನ್ನು ಕೊಡವುದಕ್ಕೆ ಈ ಬಾರಿ ಅಸಮರ್ಥನಾಗಿ ಹೋಗಿರುವೆ. ಕೋಟಿ ಸೂರ್ಯ ಪ್ರಕಾಶ ಎಂದರೆ ಈ ವರುಷದ ಬಿಸಿಲೇ ಇರಬಹುದೆಂಬ ಆಲೋಚನೆ ಕೆಲವೊಮ್ಮೆ ನನ್ನ ಸ್ಮೃತಿಪಟಲದಲ್ಲಿ ಹಾದು ಹೋಗುತ್ತಿತ್ತು. ನಾವಿರುವ ಗ್ರಹ ಭೂಮಿಯೇ ಅಲ್ಲಾ ಸೂರ್ಯನ ಆಪ್ತ ಬುಧ ಗ್ರಹವೇ ಎಂಬ ಸಂಶಯವೂ ಆಗಾಗ ಮೂಡುತ್ತಿತ್ತು!
Related Articles
Advertisement
ಮನೆ ತಲುಪುವ ಹೊತ್ತಿಗಾಗಲೇ ಬಾನಿನಲ್ಲಿ ಕಾರ್ಮೋಡಗಳು ಮೆಲ್ಲನೆ ಕಳ್ಳ ಹೆಜ್ಜೆಯನ್ನಿಡುತ್ತಾ ಬರುತ್ತಿದ್ದವು. ಬಿಸಿಲ ತಾಪವನ್ನೇ ಕಂಡ ದೇಹಕ್ಕೆ ಆ ಕ್ಷಣದಲ್ಲಿ ಬೀಸಿದ ತಂಪಾದ ಗಾಳಿ ಮುದ ನೀಡತೊಡಗಿತು. ಈಗ ಮಳೆಯೇನಾದರೂ ಬಂದರೆ ಏನಾಗಬಹುದು ಎಂದು ಯೋಚಿಸುತ್ತಿದ್ದೆ.
ಈ ಮಾನವ ಎಷ್ಟೊಂದು ಅತೀ ಆಕಾಂಕ್ಷಿ, ಸ್ವಾರ್ಥಿ ಎಂದರೆ ಬಿಸಿಲು ಬಂದರೆ ಮಳೆ ಬೇಕು ಅನ್ನುತ್ತಾನೆ, ಒಂದೆರಡು ದೊಡ್ಡ ಮಳೆ ಬಂದರೆ ಏನು ಕರ್ಮದ ಮಳೆಯೋ ಏನೋ ನಿಲ್ಲುವುದೇ ಇಲ್ಲ ಎಂದು ಅಪರೂಪಕ್ಕೆ ಭುವಿಗಿಳಿದು ಬಂದ ಮಳೆರಾಯನನ್ನು ಶಪಿಸತೊಡಗುತ್ತೇವೆ. ಉಳಿದವರೂ ಹೌದೌದು ಎನ್ನುತ್ತೇವೆ. ಮಳೆ ಎಲ್ಲಿ ಸತ್ತು ಹೋಗಿದೆ ಒಮ್ಮೆ ಬಂದಿದ್ದರೆ ಈ ಬಿಸಿಲಿನಿಂದಾದರೂ ತಪ್ಪಿಸಿಕೊಳ್ಳಬಹುದಿತ್ತು ಎಂದು ಈಗ ಹೇಳುವ ನಾವುಗಳು ಮಳೆಯನ್ನು ಹಿಗ್ಗಾಮುಗ್ಗ ಜರೆಯುವುದು ಎಷ್ಟರ ಮಟ್ಟಿಗೆ ಸರಿ?
ಭುವಿಯ ಜನರು ಮಾಡಿದ ಅನ್ಯಾಯಗಳನ್ನು ಹೊಟ್ಟೆಯೊಳಗಿರಿಸಿ ಕರುಣೆಯ ಸುಧೆಯನ್ನು ಹರಿಸುವ ಆ ರವಿಯನ್ನೂ ಮಳೆಯನ್ನೂ, ಅದೂ ಕೂಡ ಮೊದಲ ಮಳೆಯನ್ನೇ ತೆಗಳುವ ಮನಸ್ಥಿತಿ ವಿಚಿತ್ರ. ಮಳೆ ಒಂಚೂರು ಜಾಸ್ತಿ ಬಂದರೆ, ಈ ರೀತಿಯೇ ಮಳೆ ಬಂದರೆ ಒಣಗುವುದಕ್ಕೆ ಹಾಕಿದ ಹಪ್ಪಳಗಳ ಅವಸ್ಥೆಯಾದರೂ ಏನು?
ಈ ಹಾಳಾದ ಮಳೆ ಇವತ್ತೇ ಬರಬೇಕೇ? ಎಂದು ಶಪಿಸುವವನು ಇನ್ನೊಬ್ಬ. ಇದನ್ನೆಲ್ಲಾ ಗಮನಿಸಿದ ನನಗೆ ಅನ್ನಿಸಿದ್ದಿಷ್ಟೇ, ಯಾರ ಮನೆಯಲ್ಲಿ ಹಪ್ಪಳ ಒಣಗುವುದಕ್ಕೆ ಹಾಕಿದ್ದಾರೆ, ಎಲ್ಲಿ ಬಟ್ಟೆ ಒಣಗಳು ಹಾಕಿದ್ದಾರೆ, ಯಾರ ಮನೆಯಲ್ಲಿ ಸಮಾರಂಭ ಇದೆ ಇದನ್ನೆಲ್ಲಾ ತಿಳಿದುಕೊಂಡು ಮಳೆ ಇಳೆಗಿಳಿಯಲು ಸಾಧ್ಯವೇ? ಅದೇನು ನಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಕೆಲಸದಾಳೇ?
ಯೋಚನೆಯಿಂದ ಹೊರಬಂದು ವಾಸ್ತವಕ್ಕೆ ಬಂದೆ. ನನಗೆ ಗೊತ್ತಿಲ್ಲದಂತೆ ನಗುವೊಂದು ಹಾದುಹೋಯಿತು. ಪ್ರಕೃತಿಯು ಸಮತೋಲನದಲ್ಲಿರಬೇಕಾದರೆ ನಮ್ಮೆಲ್ಲರ ಶ್ರಮ ಅತ್ಯಗತ್ಯ. ನಾವು ಪ್ರಕೃತಿಮಾತೆಯನ್ನು ಪ್ರೀತಿಯಿಂದ ಕಂಡರೆ ಅವಳು ನಮಗೆ ಯಾವ ಸಂಕಷ್ಟವನ್ನು ಒದಗಿಸದೇ ಸದಾ ನಮ್ಮನ್ನು ಪೊರೆಯುವಳು. ಮುನಿದರೆ ಅನಾವೃಷ್ಠಿವೋ ಮಾಹಾಬಿಸಿಲಿನಂತೆಯೋ ನಮ್ಮನ್ನೆಲ್ಲಾ ಕಾಡುವಳು.
ಒಟ್ಟಿನಲ್ಲಿ ಬಿಸಿಲಿನ ಝಳಕ್ಕೆ ಬಗ್ಗದೆ ತಾಳ್ಮೆ ವಹಿಸೋಣ. ಮೊದಲ ಮಳೆಗಾಗಿ ಪ್ರೀತಿಯಿಂದ ಕಾಯೋಣ. ನಾವು ಮಾಡಿರುವ ತಪ್ಪನ್ನೆಲ್ಲಾ ಮನ್ನಿಸು ಮುಂದೆಂದಿಗೂ ನಿನಗೆ ನೋವನ್ನುಂಟು ಮಾಡಲಾರೆ ಎಂದು ಪ್ರಕೃತಿಮಾತೆಯಲ್ಲಿ ಬೇಡಿಕೊಳ್ಳೋಣ ಮತ್ತು ಅದರಂತೆ ನಡೆದುಕೊಳ್ಳೋಣ.
-ವಿಕಾಸ್ ರಾಜ್ ಪೆರುವಾಯಿ
ವಿ.ವಿ. ಕಾಲೇಜು ಮಂಗಳೂರು