Advertisement
ಆ ಚಿಟ್ಟೆಯ ಕಷ್ಟವನ್ನು ನೋಡಲಾಗದೇ ಆ ಹುಡುಗ ಚಿಟ್ಟೆಗೆ ಹೊರಬರಲು ಸಹಾಯ ಮಾಡಲು ನಿರ್ಧರಿಸಿದನು. ಮನೆಯ ಒಳಗೆ ಹೋಗಿ ಒಂದು ಪುಟ್ಟ ಕತ್ತರಿಯನ್ನು ತಂದು ನಿಧಾನವಾಗಿ ಆ ಗೂಡನ್ನು ಕತ್ತರಿಸಿದಾಗ ಊದಿಕೊಂಡ ದೇಹ ಹಾಗೂ ಇನ್ನೂ ಬಲಿಯದ ರೆಕ್ಕೆಗಳೊಂದಿಗೆ ನಿಧಾನವಾಗಿ ಚಿಟ್ಟೆ ತೆವಳುತ್ತಾ ಹೊರಬಂದಿತು. ಆ ಹುಡುಗನಿಗೆ ತನ್ನ ಕೆಲಸದ ಬಗ್ಗೆ ಹೆಮ್ಮೆಯಾಯಿತು. ಹೀಗೆ ದಿನಗಳು ಉರುಳಿದವು. ಆ ಚಿಟ್ಟೆಯ ರೆಕ್ಕೆ ಮೊದಲಿನ ಹಾಗೆ ಇತ್ತು ಬೆಳೆಯಲೇ ಇಲ್ಲ. ಚಿಂತಿತನಾದ ಆತ ಕೀಟಶಾಸ್ತ್ರಜ್ಞನಾದ ತಂದೆಯ ಬಳಿ ಹೋಗಿ ನಡೆದ ಘಟನೆ ವಿವರಿಸಿದನು.
Related Articles
Advertisement
ಇಂದು ನಮ್ಮ ಮನೆಯನ್ನು ಸ್ವತ್ಛವಾಗಿಡಲು ಸಹಕಾರಿಯಾದ ವ್ಯಾಕ್ಯೂಮ್ ಕ್ಲೀನರನ್ನು ಕಂಡುಹಿಡಿದ ಜೇಮ್ಸ್ ಡೈಸನ್‌ರವರ ಡಿಸೈನ್ ಐದು ಸಾವಿರ ಬಾರಿ ವಿಫಲವಾಗಿದ್ದವು. ಸೃಜನಶೀಲತೆ, ಕಲ್ಪನಾಶಕ್ತಿಯ ಕೊರತೆಯಿದೆ ಎಂದು ವಾಲ್ಟ್ ಡಿಸ್ನಿ ಅವರು ಕೆಲಸದಿಂದ ಹೊರದಬ್ಬಲ್ಪಟ್ಟವರು. ಟೆಲಿಫೋನ್ ಆವಿಷ್ಕಾರಕ್ಕಾಗಿ ಅಲೆಕ್ಸಾಂಡರ್ ಗ್ರಹಾಂಬೆಲ್ ದಶಕಗಳ ಕಾಲ ಸೆಣಸಾಡಿದರು ಹಾಗೂ ಈ ಕಲ್ಪನೆಯ ಸ್ವಾಮ್ಯ ಪಡೆಯಲು ಅನೇಕ ಕಾನೂನು ಸವಾಲುಗಳನ್ನೂ ಎದುರಿಸಿದರು. ನಾಲ್ಕೈದು ವರ್ಷಗಳ ತನಕವೂ ಮಾತನಾಡಲು ಕಲಿಯದ, ಚಿಕ್ಕ ವಯಸ್ಸಿನಲ್ಲಿ ಯಾವುದಕ್ಕೂ ಬಾರದವರು ಎಂದೆ ಎಲ್ಲರೂ ಭಾವಿಸಿದ್ದ ಆಲ್ಬರ್ಟ್ ಐನ್‌ಸ್ಟೈನ್ ಅವರು ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದಿದರು. ಇನ್ನು ವಿಕಾಸವಾದ ಸಿದ್ಧಾಂತದ ಪ್ರತಿಪಾದಕ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿದ್ದರು.
ನಮ್ಮವರೇ ಆದ ರತನ್ ಟಾಟಾ, ಅಂಬಾನಿ, ನಾರಾಯಣ ಮೂರ್ತಿ, ಅಮಿತಾಬ್ ಬಚ್ಚನ್, ಡಾ|ಎ.ಪಿ. ಜೆ. ಅಬ್ದುಲ್ ಕಲಾಂ, ಮೇರಿ ಕೊಮ್, ಕ್ಯಾಪ್ಟನ್ ಗೋಪಿನಾಥ್ ಹೀಗೆ ಇವರಂಥ ಸಾವಿರಾರು ಸಾಧಕರು ಬದುಕು ಒಡ್ಡುವ ಈ ಪರೀಕ್ಷೆಗಳಲ್ಲಿ ಏಳು ಬೀಳುಗಳನ್ನು ಕಾಣುತ್ತ ತಮ್ಮ ಪ್ರಯತ್ನವನ್ನು ಮುಂದುವರೆಸಿ ಬೆಳೆದವರೇ ಆಗಿದ್ದಾರೆ. ಇವರೆಲ್ಲರ ವಿಜಯಗಳಿಸಿರುವ ಹಾದಿಯಲ್ಲಿ ವೈಫಲ್ಯಗಳು, ಸವಾಲುಗಳು ಸಾಧನೆಯ ಮೈಲುಗÇÉಾಗಿ ಕಾಣಿಸುತ್ತವೆ.
ಹಾಗಾದರೆ ಸೋಲು ಎನ್ನುವುದೇನು? ವಿಫಲವಾದ ಯತ್ನಗಳೆಲ್ಲವು ಸೋಲೇ? ಖಂಡಿತ ಹಾಗೆ ಭಾವಿಸುವ ಅಗತ್ಯವಿಲ್ಲ. ಅವೆಲ್ಲವೂ ಯಶಸ್ಸಿನ ಒಂದು ಭಾಗ. ಜೀವನವೆನ್ನುವುದು ಅನುಭವಗಳ ಮಂಟಪ. ಇಲ್ಲಿ ಸುಖ, ದುಃಖ, ನೋವು, ಕಷ್ಟ, ಅವಮಾನ, ಹತಾಶೆ, ವಿಜಯ, ಯಶಸ್ಸು ಎಲ್ಲವೂ ಒಂದೊಂದು ಅನುಭವ ನೀಡುತ್ತವೆ. ಹಾಗೆ ಸೋಲು ಹಾಗೂ ಗೆಲುವು ಕೂಡ ಒಂದು ಅನುಭವ. ಎಡಿಸನ್ ಅವರು “ಸಾವಿರ ಬಾರಿ ನಾನು ಸೋಲಲಿಲ್ಲ, ಅಷ್ಟು ವಿಧಾನಗಳಿಂದ ಈ ಫಲಿತಾಂಶ ಸಿಗುವುದಿಲ್ಲ ಎಂಬುದನ್ನು ಕಂಡುಕೊಂಡೆ’ ಎಂದಿದ್ದರು.
ಇವರೆಲ್ಲರ ನಡುವೆ ಇರುವ ಸಾಮ್ಯತೆ ಏನೆಂದರೆ ಅವರೆಲ್ಲ ಅವರವರ ಕನಸುಗಳಲ್ಲಿ ವಿಶ್ವಾಸ, ನಂಬಿಕೆಯನ್ನು ಹೊಂದಿದ್ದರು. ಛಲ, ಧೈರ್ಯ, ಸಹನೆಯಿಂದ ಅವರ ಕನಸುಗಳ ಹಿಂದೆ ಬಿದ್ದು ವೈಫಲ್ಯ ಎದುರಾದಾಗಲೆಲ್ಲಾ ಕುಗ್ಗದೇ ಮತ್ತೆ ಮತ್ತೆ ಪ್ರಯತ್ನಶೀಲರಾದರು. ಒಮ್ಮೆ ಹೃದಯ ಮತ್ತು ಅಂತಃಪ್ರಜ್ಞೆಯ ಮಾತನ್ನು ಕೇಳಿಸಿಕೊಳ್ಳಿ. ಏಕೆಂದರೆ ನೀವು ನಿಜವಾಗಿಯೂ ಏನಾಗಲು ಬಯಸುತ್ತೀರಿ ಎಂದು ಅವಕ್ಕೆ ಹೇಗೋ ಮೊದಲೇ ತಿಳಿದಿರುತ್ತದೆ ಎನ್ನುವ ಸ್ಟೀವ್ ಜಾಬ್ಸ್ ರವರ ಈ ಮಾತು ಬಹಳ ಸತ್ಯವೆನಿಸುತ್ತದೆ.
ಒಮ್ಮೆ ಹನುಮಂತ ಸಮುದ್ರಾಲಂಘನ ನನ್ನಿಂದ ಆಗದು ಎಂದು ಕೈಚೆಲ್ಲಿ ಕುಳಿತು ಬಿಟ್ಟನಂತೆ. ಆಗ ಅವನಲ್ಲಿನ ಅಂತರ್ಗತವಾದ ಶಕ್ತಿಯನ್ನು ಅವನಿಗೆ ನೆನಪಿಸಿ ಕಾರ್ಯಗತನಾಗುವಂತೆ ಜಾಂಬವಂತ ಮಾಡುತ್ತಾನೆ ಎನ್ನುವುದು ರಾಮಾಯಣದಲ್ಲಿ ನಾವು ಕೇಳಿರುವ ಸಂಗತಿ. ಅದೇ ರೀತಿ ಕಷ್ಟ, ಸವಾಲುಗಳು ಜಾಂಬವಂತನ ರೀತಿ ನಮಗೇ ತಿಳಿಯದೆ, ನಮ್ಮಲ್ಲಿ ಅಂತರ್ಗತವಾಗಿರುವ ಶಕ್ತಿಯನ್ನು ಜಾಗೃತಗೊಳಿಸಿ ನಮ್ಮ ಅರಿವಿಗೆ ತರುತ್ತವೆ. ಕಷ್ಟ ಯಾವಾಗಲೂ ಕಾದಾಡಲು ಬೇಕಾಗಿರುವ ಶಕ್ತಿಯನ್ನು ಹೊರಗೆಳೆಯುತ್ತದೆ. ಅದು ನಮ್ಮ ಗುರಿ ತಲುಪಲು ಇರುವ ವಿವಿಧ ಮಾರ್ಗಗಳನ್ನು ಕಣ್ಣು ಬಿಟ್ಟು ನೋಡುವಂತೆ ಮಾಡುತ್ತದೆ. ಇನ್ನು ಸವಾಲುಗಳು ನಮ್ಮನ್ನು ಇನ್ನಷ್ಟು ಸದೃಢರನ್ನಾಗಿ ಮಾಡುತ್ತವೆ. ಇನ್ಯಾರದೋ ಜೀವನವೇಕೆ ನಮ್ಮ ಹಿರಿಯರದ್ದೋ, ನಮ್ಮ ಸುತ್ತಮುತ್ತಲಿನ ಜನರ ಜೀವನವೋ ಅಥವಾ ನಮ್ಮದೇ ಜೀವನವನ್ನು ನೋಡುವುದಾದರೆ ಇಲ್ಲಿ ಹಲವು ಉದಾಹರಣೆಗಳು ಸಿಗಬಹುದು.
ಬಾಲ್ಯದಲ್ಲಿ ನಡೆಯಲು ಪ್ರಾರಂಭಿಸಿದಾಗ ನೆನಪು ಇರದಷ್ಟು ಬಾರಿ ಬಿದ್ದಿರುತ್ತೇವೆ. ಮತ್ತೆ ಮತ್ತೆ ಎದ್ದು ಪ್ರಯತ್ನಿಸಿದ ಅನಂತರವೇ ನಮಗೆ ಸರಿಯಾದ ನಡಿಗೆ ಸಿದ್ಧಿಸಿರುತ್ತದೆ. ಸರಿಯಾಗಿ ಮಾತನಾಡಲು ಕಲಿಯುವ ಮುನ್ನ ಎಷ್ಟೋ ವರ್ಷಗಳ ಕಾಲ ತೊದಲು ನುಡಿಗಳಲ್ಲಿ ಪ್ರಯತ್ನಿಸಿರುತ್ತೇವೆ.
ಜೀವನ ಆ ಹಂತದಲ್ಲೇ ನಮಗೆ ಸಹನೆ, ಛಲ, ಭರವಸೆಗಳ ಪಾಠವನ್ನು ಮಾಡಿರುತ್ತದೆ. ಆದರೆ ಅದನ್ನು ಅಲ್ಲೇ ಮರೆತು ಮುಂದೆ ಸಾಗಿರುತ್ತೇವೆ. ಆದರೆ ಬೆಳೆಯುತ್ತಾ ಹೊದಂತೆಲ್ಲ ಸಣ್ಣ ಸಣ್ಣ ಸಮಸ್ಯೆಗಳಿಗೆ, ಸವಾಲುಗಳಿಗೆ ಹೆದರುತ್ತಾ ಜೀವನದಲ್ಲಿ ನಮ್ಮ ಗುರಿ, ಕನಸುಗಳನ್ನು ಹಿಂದೆ ಬಿಟ್ಟು, ಇನ್ಯಾರದ್ದೋ ಕನಸುಗಳನ್ನು, ಗುರಿಗಳನ್ನು ಸಾಧಿಸುವಲ್ಲಿ ತೊಡಗಿಕೊಂಡು ಬಿಟ್ಟಿರುತ್ತೇವೆ.
ಗಂಗೆಯನ್ನು ಧರೆಗಿಳಿಸಿದ ಭಗೀರಥನ ಸತತ ಪ್ರಯತ್ನ ನಮಗೆ ಮಾದರಿಯಾಗಬೇಕಲ್ಲವೇ? ಈ ಸಾಧಕರೆಲ್ಲ ಅಂದು ತಮ್ಮ ಮೊದಲ ಪ್ರಯತ್ನ ಅಥವಾ ಒಂದೆರಡು ವಿಫಲ ಪ್ರಯತ್ನಗಳಿಂದ ಅಲ್ಲಿಗೆ ನಿಲ್ಲಿಸಿ ಬಿಟ್ಟಿದ್ದರೆ ಏನಾಗುತ್ತಿತ್ತು ಎಂದು ಒಮ್ಮೆ ಯೋಚಿಸಿ ನೋಡಿ. ಕಷ್ಟಗಳು ಬರುವುದು ಕಾಡುವುದಕ್ಕೆ ಅಲ್ಲ ಕಾಪಾಡುವುದಕ್ಕೆ ಎನ್ನುವುದು ಅರಿವಾದರೆ ಸವಾಲುಗಳು ಸ್ನೇಹಿತನಂತೆ ಭಾಸವಾಗುತ್ತದೆ.
ಯಾವುದೇ ಹೊಸ ಕೆಲಸವನ್ನು ಆರಂಭಿಸುವಾಗ ಭಯವಾಗುವುದು ಸಹಜ. ನಮ್ಮ ಯತ್ನಗಳು ವಿಫಲಗೊಂಡಾಗ ಧೃತಿಗೆಡುವುದು ಸಾಮಾನ್ಯ. ಹಾಗಾದರೆ ಅದನ್ನೆಲ್ಲ ಮೀರಿ ಯಶಸ್ಸನ್ನು ಗಳಿಸುವುದು ಹೇಗೆ ಎನ್ನುವುದು ಎಲ್ಲರ ಮನದಲ್ಲಿ ಮೂಡುವ ಪ್ರಶ್ನೆಯಾಗಿರುತ್ತದೆ. ಇದಕ್ಕೆ ಸಿದ್ಧ ಉತ್ತರವೆಂಬುದಿಲ್ಲ. ಆದರೆ ಕೆಲವೊಂದು ಮಾರ್ಗಗಳನ್ನು ಅನುಸರಿಸುವುದರಿಂದ ಆ ದಿಸೆಯಲ್ಲಿ ಯಶಸ್ಸು ಕಾಣಬಹುದು.
ಅವುಗಳಲ್ಲಿ ಒಂದು ವಿಧಾನವೆಂದರೆ ಆದಷ್ಟು ನಮ್ಮಲ್ಲಿ ಸಕಾರಾತ್ಮಕ ಯೊಚನೆಗಳನ್ನು ವೃದ್ಧಿಸಿಕೊಳ್ಳಬೇಕು. ಒಂದು ಮನೋವಿಜ್ಞಾನದ ಸಂಶೋಧನೆಯ ಪ್ರಕಾರ ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ಪ್ರತಿದಿನ ಐವತ್ತು ಸಾವಿರದಿಂದ ಎಪ್ಪತ್ತು ಸಾವಿರ ಯೋಚನೆಗಳು ಬರುತ್ತವೆಯಂತೆ. ಅದರಲ್ಲಿ ಶೇ. 70-80 ನಕಾರಾತ್ಮಕ ಯೋಚನೆಗಳೇ ತುಂಬಿಕೊಂಡರೆ ಹೇಗೆ ನಮ್ಮ ಜೀವನದ ಗುರಿ ತಲುಪಲು ಸಾಧ್ಯ? ಉದಾಹರಣೆಗೆ ಯಾವುದೋ ಒಂದು ನಿರ್ದಿಷ್ಟ ವಿಷಯ ಅರ್ಥವಾಗುತ್ತಿಲ್ಲ ಎಂದಾದರೆ ತಿಳಿಯುವ ಪ್ರಯತ್ನದ ಅಗತ್ಯವಿರುತ್ತದೆ.
ಆದರೆ ನಕಾರಾತ್ಮಕ ಯೋಚನೆಗಳ ಪ್ರಭಾವಕ್ಕೆ ಒಳಗಾದ ವ್ಯಕ್ತಿ ಆ ಪ್ರಯತ್ನವನ್ನೇ ಬಿಟ್ಟುಬಿಡುವ ಸಾಧ್ಯತೆಯಿರುತ್ತದೆ. ಹಾಗಾಗಿ ಸಕಾರಾತ್ಮಕ ಯೋಚನೆಗಳು ಹೆಚ್ಚಿದಷ್ಟು ಸವಾಲುಗಳನ್ನು ಎದುರಿಸಲು ಮನಸ್ಸು ಸನ್ನದ್ಧವಾಗುತ್ತದೆ. ಸಕಾರಾತ್ಮಕ ಯೋಚನೆ ನಮ್ಮಲ್ಲಿ ಧೈರ್ಯ, ಶಾಂತಿ, ಸಹನೆಯನ್ನು ಹೆಚ್ಚಿಸಿದರೆ, ನಕಾರಾತ್ಮಕ ಯೋಚನೆಗಳು ಭಯ, ಆತ್ಮವಿಶ್ವಾಸದ ಕೊರತೆ, ಬೇಸರ ಇತ್ಯಾದಿ ನೇತ್ಯಾತ್ಮಕ ಭಾವಗಳನ್ನು ಉದ್ದೀಪನಗೊಳಿಸುತ್ತವೆ.
ಸಾದ್ಯವಾದಷ್ಟು ಒಳ್ಳೊಳ್ಳೆ ವಿಷಯಗಳನ್ನು ಕೇಳುವುದು, ಒಳ್ಳೊಳ್ಳೆಯ ಪುಸ್ತಕಗಳನ್ನು ಓದುವುದು ಹಾಗೂ ನನ್ನಿಂದ ಸಾಧ್ಯ, ನಾನು ಮಾಡುತ್ತೇನೆ ಎನ್ನುವಂತಹ ಸಕಾರಾತ್ಮಕ ಶಬ್ದಗಳನ್ನು ಉಪಯೋಗಿಸುವುದರಿಂದ ಧನಾತ್ಮಕ ಭಾವ ಹೆಚ್ಚುತ್ತದೆ. ಆ ಭಾವ ನಮ್ಮನ್ನು ಯಶಸ್ಸಿನ ಕಡೆಗೆ ಮುನ್ನಡೆಸುತ್ತದೆ.
ಪ್ರತಿಯೊಬ್ಬರ ಯಶಸ್ವಿನ ಹಿಂದೆ ಸಾವಿರಾರು ಸವಾಲು, ಅದರ ದುಪ್ಪಟ್ಟು ಪ್ರಯತ್ನ, ನೋವು, ಅವಮಾನ, ಹತಾಶೆ, ಹೆದರಿಕೆ ಇರುತ್ತದೆ. ಯಾರೊಬ್ಬರೂ ರಾತ್ರಿ ಬೆಳಗಾಗುವುದರಲ್ಲಿ ಯಶಸ್ಸನ್ನು ಕಂಡಿಲ್ಲ. ಡಿಕ್ಷನರಿಯಲ್ಲಿ ಮಾತ್ರ ಸಕ್ಸಸ್ ಎನ್ನುವುದು ವರ್ಕ್‌ಗಿಂತ ಮೊದಲು ಬರುವುದು. ನಿರಂತರ ಪ್ರಯತ್ನ, ತಾಳ್ಮೆ, ಧೈರ್ಯ, ನಂಬಿಕೆ ಅಗ್ಗಷ್ಟಿಕೆಯಂತೆ ಉರಿಯುತ್ತಲೇ ಇರಬೇಕು, ಆ ಉರಿಯೇ ನಮ್ಮ ರೆಕ್ಕೆಯನ್ನು ಬಲಿಷ್ಟಗೊಳಿಸುವುದು. ಹಾರಾಡಲು ಬಲಿಷ್ಠ ರೆಕ್ಕೆಗಳೆ ಬೇಕು.
ಪೂರ್ಣಿಮಾ ಹೆಗಡೆ