Advertisement
ತರಗತಿ ಕೋಣೆಯೊಳಗೆ ನಮಗೆ Account, tax ಕಲಿಸುವ ನಮ್ಮ ಪ್ರಾಧ್ಯಾಪಕರು ಹವ್ಯಾಸಿ ಯಕ್ಷಗಾನ ಕಲಾವಿದರು. ಅಂದು ಕಾಲಿಗೆ ಗೆಜ್ಜೆ ಕಟ್ಟಿ ಹೆಜ್ಜೆ ತಪ್ಪದಂತೆ ಕುಣಿದವರು. ತಮ್ಮ ಮಾತುಗಾರಿಕೆಯ ಮೂಲಕ ನೆರೆದ ಪ್ರೇಕ್ಷಕರನ್ನು ಯಕ್ಷ ಲೋಕಕ್ಕೆ ಕರೆದೊಯ್ದವರು ನನ್ನ ಪ್ರಾಧ್ಯಾಪಕರು. ಹೌದು ಸ್ನೇಹಿತರೇ, ಇದು ಕೇವಲ ಉತ್ಪ್ರೇಕ್ಷೆಯ ಮಾತಲ್ಲ. ಈ ಯಕ್ಷಗಾನ ತಂಡವನ್ನು ಕಟ್ಟಿ ಬೆಳೆಸಿದವರು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರಾದ ರಕ್ಷಿತ್ ರಾವ್ ಸರ್. ಎಲ್ಲ ಪ್ರಾಧ್ಯಾಪಕ – ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಿದ ಗುರು. ತರಗತಿ ಪಾಠಕ್ಕೂ ಸೈ, ಪಠ್ಯೇತರ ಚಟುವಟಿಕೆಗಳಿಗೂ ಸೈ, ಯಕ್ಷಗಾನ ಹೆಜ್ಜೆ ಕಲಿಸುವಲ್ಲೂ ಚುರುಕಿನ ಇವರ ಕೈಚಳಕ ನಮ್ಮ ಕಾಲೇಜಿನ ವಿದ್ಯಾರ್ಥಿ ಸಮುದಾಯಕ್ಕೆ ಹೊಸತಲ್ಲ.
Related Articles
Advertisement
ವಿಷಯ ತಿಳಿದ ತತ್‌ಕ್ಷಣ ಕರೆದಳಲ್ಲಿ ಮಹಿಷನನ್ನು… ಈ ಬಿಸಿಲಿನ ಝಳದಲ್ಲೂ ಮಹಿಷನ ವೇಷ ಕೊಂಬಿನೊಂದಿಗೆ ಬೆಂಕಿಯಲ್ಲಿ ಆಡುತ್ತ ಸಭಾ ಪ್ರವೇಶ ಮಾಡಿದವರು ಸುಕುಮಾರ್ ಸರ್, ಕನ್ನಡ ಉಪನ್ಯಾಸಕರು ಹಾಗೆಯೇ ಹವ್ಯಾಸಿ ಯಕ್ಷಗಾನ ಭಾಗವತರು. ಯಕ್ಷಗಾನದ ಮಹಿಷಾಸುರನಾಗಿ ಸಭೆಗೆ ಬಂದದ್ದು ಅಮೋಘ. ಕೋಣನಾಗಿ ನಾಲ್ಕು ಕಾಲಿನಲ್ಲಿಯೇ ರಂಗ ಪ್ರವೇಶಿಸಿ ವೀಕ್ಷಕರ ಮನೆಗೆದ್ದ ಮಹಿಷ ನೋಡುಗರನ್ನು ಸೆಳೆದ ಪಾತ್ರ.
ಮಹಿಷನಿಗೆ ಪಟ್ಟ ದೊರೆತ ಅನಂತರ ಆತನನ್ನು ನಾಯಕನಾಗಿ ಸ್ವೀಕರಿಸಲು ಬಂದವರು ಕಂವಾಸುರ, ಶಂಕಾಸುರ, ಬಿಡಲಾಸುರ, ಚಿಕ್ಷರಾಸುರರಾಗಿ ಕಾಲೇಜಿನ ಬಣ್ಣದ ವೇಷಧಾರಿಯಾಗಿ ಗುರುತಿಸಿಕೊಂಡ ನಿಖೀಲ್ ಬಾರಾಳಿ, ಗಣಕ ವಿಜ್ಞಾನ ಪ್ರಾಧ್ಯಾಪಕರಾದ ಹರೀಶ್ ಕಾಂಚನ್ ಸರ್, ವೃತ್ತಿ ಮಾರ್ಗದರ್ಶಕ ಹರೀಶ್ ಸರ್, ಲ್ಯಾಬ್ ಸಹಾಯಕ ರಾಘವೇಂದ್ರ ಸರ್. ಎಲ್ಲರೂ ತಮಗೆ ನೀಡಿದ ಚಿಕ್ಕ ಪಾತ್ರಕ್ಕೆ ಜೀವ ತುಂಬಿ ಇಡೀ ಅಸುರರ ಪ್ರದರ್ಶನವನ್ನು ಅದ್ಭುತವನ್ನಾಗಿಸಿದರು.
ಮಹಿಷನೊಂದಿಗೆ ಸೇರಿದ ರಾಕ್ಷಸರ ಉಪಟಳ ತಾಳಲಾರದೆ ಬೇಸತ್ತು ದೇವೇಂದ್ರನ ಒಡ್ಡೋಲಗವೇ ವಿಸ್ಮಯವಾಗಿತ್ತು. ದೇವೇಂದ್ರನ ಸಾತ್ವಿಕ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿದವರು ರಾಜೇಶ್ ಸರ್, ಏಕೆಂದರೆ ಅವರ ಹಲವು ಗುಣ ಪಾತ್ರಕ್ಕೆ ಹೊಂದಿಕೆಯಾಗುತ್ತಿತ್ತು.
ಸಭೆಯ ಮಾತುಗಾರರಲ್ಲದಿದ್ದರೂ ಅವರು ನಿರ್ವಹಿಸಿದ ದೇವೇಂದ್ರನ ಪಾತ್ರ ಅದ್ಭುತವಾಗಿತ್ತು. ಅಗ್ನಿಯಾಗಿ ಕಾಣಿಸಿಕೊಂಡ ಸುಹಾಸ್ ಸರ್ ಯಕ್ಷಗಾನದ ಹೆಜ್ಜೆ ತಿಳಿದವರು ಎಂಬುದು ಅವರ ಕುಣಿತದಲ್ಲಿಯೇ ತಿಳಿಯುತ್ತಿತ್ತು ಮತ್ತು ಅವರು ಹೊಡೆದ ಗಿರಕಿಯೇ ಅದಕ್ಕೆ ಸಾಕ್ಷಿ. ವರುಣನಾಗಿ ಯೋಗೀಶ್ ಸರ್ ತುಂಬಾ ಚೆನ್ನಾಗಿಯೇ ಪಾತ್ರ ನಿರ್ವಹಿಸಿದರು. ಇನ್ನು ಕುಬೇರನಾಗಿ ವಿದ್ಯಾರ್ಥಿ ವಿನೋದ್ ರಾಜ್ ಸುಂದರವಾಗಿ ಪಾತ್ರ ನಿರ್ವಹಿಸಿದರು.
ಇನ್ನು ದೇವಿ ಮಹಾತ್ಮೆಯ ಮುಖ್ಯ ಪಾತ್ರ ದೇವಿಯಾಗಿ ವಿದ್ಯಾರ್ಥಿ ವಿನಯ್ ಹಟ್ಟಿಯಂಗಡಿ – ನಿಜಕ್ಕೂ ದೇವಿಯಾಗಿದ್ದ. ಸಿಂಹ ಏರಿ ಹೊರಟ ಪರಿ, ಮಹಿಷನನ್ನು ಕಾಡಿದ ರೀತಿ, ಮರ್ದಿಸಿದ ಗತಿ ಎಲ್ಲವೂ ಅನನ್ಯ. ತನ್ನ ವೇಷ ತಾನೇ ಮಾಡಿಕೊಳ್ಳುವ ಚತುರ. ಇನ್ನು ಸಿಂಹನಾಗಿ ಬಂದ ಶ್ರವಣ ದೇವಿಯನ್ನು ಹೊತ್ತು ಸಾಗಿದ್ದು, ಮಹಿಷನೊಂದಿಗಿನ ಯುದ್ಧ ಎಲ್ಲವೂ ಸುಂದರವಾಗಿತ್ತು.
ಇನ್ನೂ ವಿಶೇಷ ಅಂದರೆ ಯಕ್ಷಗಾನ ಭಾಗವತರಾದ ಗಣೇಶ್ ನೆಲ್ಲಿಕಟ್ಟೆಯವರನ್ನು ಹೊರತು ಪಡಿಸಿ ಉಳಿದವರೆಲ್ಲಾ ನಮ್ಮವರೇ. ಚಂಡೆ ಬಾರಿಸಿದ ಸಚಿನ್ ಆಚಾರ್, ಮದ್ದಳೆಗಾರ ಸಾಕೇತ್ ಹೆಗಡೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳೇ. ಇದು ಗುರು – ಶಿಷ್ಯರ ಸಮಾಗಮದ ಯಕ್ಷಗಾನ.
ಇವರು ಯಾರೂ ವೃತ್ತಿಪರ ಕಲಾವಿದರಲ್ಲ. ಮನಸ್ಸಿದ್ದರೆ ಏನನ್ನಾದರೂ ಮಾಡಬಹುದೆಂಬುದಕ್ಕೆ ಉದಾಹರಣೆಯಷ್ಟೇ. ಕೇವಲ ಹತ್ತು ದಿನಗಳಲ್ಲಿ ಯಕ್ಷಗಾನದ ಹೆಜ್ಜೆ ಕಲಿತು, ಮಾತನ್ನು ಕಲಿತು ಅಭಿನಯಿಸುತ್ತಾರೆ ಅಂದರೆ ಅವರಲ್ಲಿದ್ದ ಕಲಿಕಾ ಶ್ರದ್ಧೆಯನ್ನು ಮೆಚ್ಚಲೇಬೇಕು. ಹೀಗೊಂದು ಯಕ್ಷಗಾನ ಕಂಡಿದ್ದು ಕಾಲೇಜಿನ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ “ಶ್ರೀ ದೇವಿ ಮಹಾತೆ¾’ ಯಕ್ಷಗಾನ ಕಾರ್ಯಕ್ರಮದಲ್ಲಿ. ನಿಜ ಶ್ರದ್ಧೆಯಿಂದ ಮಾಡಿದ ಕೆಲಸದಿಂದ ಸಂತೃಪ್ತಿ ದೊರೆಯುತ್ತಂದೆ, ಆನಂದ ದೊರೆಯುತ್ತದಂತೆ. ಅಂದು ನಾನು ರಕ್ಷಿತ್ ಸರ್ ಕಣ್ಣಲ್ಲಿ ಕಂಡದ್ದು ಅದೇ ಆನಂದ. ಯಾವುದೇ ಫಲಾಪೇಕ್ಷೆ ಇಲ್ಲದೇ ಮಕ್ಕಳ ಮುಗ್ಧ ಚಪ್ಪಾಳೆಯಲ್ಲಿ ಕಂಡ ಆನಂದವದು. ಹೀಗಾಗಿ ಈ ಯಕ್ಷಗಾನವನ್ನು ನಮಗಾಗಿ ಮಾಡಿದ್ದರು, ಕಂಡು ತೃಪ್ತರಾದ ನಾವೇ ಧನ್ಯರು.
-ರಶ್ಮಿ ಉಡುಪ ಮೊಳಹಳ್ಳಿ
ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ