Advertisement

UV Fusion: ಫಾಂಟ್‌ ಎಂದು ಉಪೇಕ್ಷಿಸಬೇಡಿ

01:40 PM Oct 11, 2024 | Team Udayavani |

ಮುದ್ರಣ ತಂತ್ರಜ್ಞಾನದಲ್ಲಿ ಕಾಗದದಷ್ಟೇ ತೂಕ ಅಕ್ಷರ ಶೈಲಿಗೂ ಇದೆ. ಓದಲು ಸ್ಪಷ್ಟತೆಯನ್ನು ನೀಡುವುದರ ಜತೆಗೆ ನಮ್ಯತೆಯನ್ನು ಒದಗಿಸುವ ಹೊಣೆಯೂ ಈ ಶೈಲಿಗಳಿಗಿವೆ. ಟೈಪೋಗ್ರಫಿ ಎಂಬುದು ಅಕ್ಷರವನ್ನು ವಿನ್ಯಾಸಗೊಳಿಸುವ ಮತ್ತು ಜೋಡಿಸುವ ಕಲೆ. ನಾವು ಮುದ್ರಿತವಾದ ಮಾಹಿತಿಯನ್ನು ಹೇಗೆ ಗ್ರಹಿಸುತ್ತೇವೆ ಎಂಬುದರಲ್ಲಿ ಫಾಂಟ್‌ ಆಯ್ಕೆಯು ನಿರ್ಣಾಯಕ ಪಾತ್ರ ವಹಿಸುತ್ತದೆ. ಒಟ್ಟಾರೆಯಾಗಿ ಬರಹದ ನಾಜೂಕು, ಸೌಂದರ್ಯದ ಮೇಲೆ ಅಕ್ಷರಗಳ ಶೈಲಿಯು ಪರಿಣಾಮ ಬೀರುತ್ತದೆ.

Advertisement

ಸೆರಿಫ್ ಮತ್ತು ಸ್ಯಾನ್ಸ್‌ -ಸೆರಿಫ್ ಎಂಬ ಮೂಲ ವರ್ಗೀಕರಣದಲ್ಲಿ ಬಹುಪಾಲು ಫಾಂಟ್‌ಗಳು ಲಭ್ಯವಿದೆ. ಇನ್ನೂ ಆಕರ್ಷಕವಾದ ಇತರ ಅಕ್ಷರಗಳನ್ನು ನಾವು ನೋಡಬಹುದು. ಇವುಗಳಲ್ಲಿ ಸ್ಕ್ರಿಪ್ಟ್ ಫಾಂಟ್‌ಗಳು ಕೈಬರಹದ ನೋಟವನ್ನು ಅನುಕರಿಸುತ್ತವೆ. ಉದಾಹರಣೆಗಳಲ್ಲಿ ಕ್ಯಾಲಿಗ್ರಾಫಿಯಾ, ಪೆಸಿಫಿಕೊ ಫಾಂಟ್‌ಗಳು. ರಾಕ್ವೆಲ್‌ ಎಂಬುದು ಸ್ಲ್ಯಾಬ್‌ ಸೆರಿಫ್ ಫಾಂಟ್‌. ಈ ವರ್ಗದ ಅಕ್ಷರಗಳು ದಪ್ಪ, ಬ್ಲಾಕ್‌ ಸೆರಿಫ್ಗಳನ್ನು ಹೊಂದಿವೆ. ಇನ್ನೊಂದು ಪ್ರವರ್ಗ ಮೊನೊಸ್ಪೇಸ್‌ ಫಾಂಟ್‌ಗಳು. ಆಕಾರವನ್ನು ಲೆಕ್ಕಿಸದೆ ಒಂದೇ ಅಗಲವಿರುವ ಅಕ್ಷರಗಳನ್ನು ಮೊನೊಸ್ಪೇಸ್‌ ಫಾಂಟ್‌ಗಳು ಹೊಂದಿವೆ.

ಕೊರಿಯರ್‌ ನ್ಯೂ ಒಂದು ಮೊನೊಸ್ಪೇಸ್‌ ಫಾಂಟ್‌. ನಾವು ಹೆಚ್ಚಾಗಿ ಬಳಸುವ ಫಾಂಟ್‌ಗಳೆಲ್ಲವೂ ಡಿಸ್ಪ್ಲೇ -ಪ್ರದರ್ಶನ ಫಾಂಟ್‌ಗಳ ಗುಂಪಿಗೆ ಸೇರಿರುತ್ತವೆ. ಡಿಸ್ಪ್ಲೇ ಫಾಂಟ್‌ ಗಳು ಎಲ್ಲರ ಗಮನ ಸೆಳೆಯುವಂತೆ ವಿನ್ಯಾಸಗೊಳಿಸಲಾದ ಮತ್ತು ಹೆಚ್ಚಾಗಿ ಮುಖ್ಯಾಂಶಗಳು, ಲೋಗೊಗಳು ಹಾಗೂ ಇತರ ದೊಡ್ಡ ಪ್ರಮಾಣದ ಪಠ್ಯಕ್ಕಾಗಿ ಬಳಸಲಾಗುತ್ತದೆ. ಡಿಸ್ಪ್ಲೇ ಫಾಂಟ್‌ಗಳಲ್ಲಿ ಇಂಪ್ಯಾಕ್ಟ್, ಲಾಬ್ಸ್ಟರ್‌ ಮತ್ತು ಪೆಸಿಫಿಕೊ ಸೇರಿವೆ.

ದೊಡ್ಡ ಬದಲಾವಣೆಯಂತೆ ಬಿಂಬಿತವಾದ ಜಾಗತಿಕವಾದ ವಿದ್ಯಮಾನ ಅಕ್ಷರಗಳ ಶೈಲಿಯಲ್ಲಿಯೂ ಇತ್ತೀಚಿಗೆ ನಡೆದಿತ್ತು. ಹಲವು ತಿಂಗಳುಗಳ ಹಿಂದೆ ಗಣಕ ತಂತ್ರದ ದೈತ್ಯ ಮೈಕ್ರೋಸಾಫ್ಟ್ ತನ್ನ ಡೀಫಾಲ್ಟ್ ಅಕ್ಷರ ಶೈಲಿಯಾದ ಕ್ಯಾಲಿಬ್ರಿಯನ್ನು ಬದಲಿಸಿತು. ಕ್ಯಾಲಿಬ್ರಿ ಮೈಕ್ರೋಸಾಫ್ಟ್ನಲ್ಲಿ ಬಹುವರ್ಷಗಳ ಕಾಲ ರಾರಾಜಿಸಿದ ಫಾಂಟ್‌. ಕ್ಯಾಲಿಬ್ರಿ ಫಾಂಟ್‌ ಅನ್ನು ತಯಾರಿಸಿದ್ದು ಡಚ್‌ ವಿನ್ಯಾಸಕ ಲ್ಯೂಕ್‌ ಡಿ ಗ್ರೂಟ್‌. ಇವರು 2002 ಮತ್ತು 2004ರ ನಡುವೆ ಮೈಕ್ರೋಸಾಫ್ಟ್ಗಾಗಿ ಕ್ಯಾಲಿಬ್ರಿಯನ್ನು ವಿನ್ಯಾಸಗೊಳಿಸಿದರು. ಮೈಕ್ರೋಸಾಫ್ಟ್ನ ಕ್ಲಿಯರ್‌ಟೈಪ್‌ – ಸುಧಾರಿತ ರೀಡೆಬಿಲಿಟಿಗೋಸ್ಕರ ಒಂದು

ಫಾಂಟ್‌ ಅನ್ನು ರಚಿಸುವುದು ಇದರ ಗುರಿಯಾಗಿತ್ತು. ಮೈಕ್ರೋಸಾಫ್ಟ್ ಮೂಲ, ಸ್ವಲ್ಪ ರೌಂಡರ್‌ ವಿನ್ಯಾಸವನ್ನು ಆರಿಸಿಕೊಂಡಿತು. ಟೈಮ್ಸ್‌ ನ್ಯೂ ರೋಮನ್‌ನಂತಹ ಸಾಂಪ್ರದಾಯಿಕ ಸೆರಿಫ್ ಫಾಂಟ್‌ಗಳಿಗೆ ಹೋಲಿಸಿದರೆ ಕ್ಯಾಲಿಬ್ರಿಯ ಸೌಮ್ಯವಾದ ನೋಟವು ಅನೇಕ ಬಳಕೆದಾರರಿಗೆ, ವಿಶೇಷವಾಗಿ ದೃಷ್ಟಿ ದೌರ್ಬಲ್ಯ ಹೊಂದಿರುವವರಿಗೆ ಹೇಳಿಮಾಡಿಸಿದ ಬದಲಾವಣೆಯಾಗಿದೆ. ಕ್ಯಾಲಿಬ್ರಿ ಅನೇಕ ಕ್ಲಿಯರ್‌ ಟೈಪ್‌ಫಾಂಟ್‌ (ಎಲ್‌ಸಿಡಿಗಳಲ್ಲಿ ಸ್ಪಷ್ಟತೆಗೋಸ್ಕರ ವಿನ್ಯಾಸಮಾಡಿದ ಅಕ್ಷರಗಳು) ಗಳಿಗಿಂತ ವ್ಯಾಪಕ ಶ್ರೇಣಿಯ ವೈಶಿಷ್ಟ್ಯಗಳನ್ನು ಸಹ ನೀಡಿತು.

Advertisement

ಅದರ ಅನಂತರ, ಸುಮಾರು ಎರಡು ದಶಕಗಳ ಕಾಲ ಮೈಕ್ರೋಸಾಫ್ಟ್ ಆಫೀಸ್‌ ಅನ್ನು ಅಲಂಕರಿಸಿದ ಸ್ಯಾನ್ಸ್‌-ಸೆರಿಫ್ ಫಾಂಟ್‌ ಕ್ಯಾಲಿಬ್ರಿ ಇತ್ತೀಚೆಗೆ ಡೀಫಾಲ್ಟ್ ಸ್ಥಾನದಿಂದ ಕೆಳಗಿಳಿದಿದೆ. ಸ್ಯಾನ್ಸ್‌ ಸೆರಿಫ್ ಎಂಬುದು ಅಕ್ಷರಗಳ ಸ್ಟ್ರೋಕ್‌ ಕೊನೆಯಲ್ಲಿ ಸೆರಿಫ್ಗಳು ಅಥವಾ ಸಣ್ಣ ರೇಖೆಗಳು ಅಥವಾ ಬಾಲಗಳನ್ನು ಹೊಂದಿರದ ಒಂದು ರೀತಿಯ ಫಾಂಟ್‌ ಆಗಿದೆ. ಎಲ್ಲಕಡೆ ಬಳಕೆಯಲ್ಲಿರುವ ಟೈಮ್ಸ್‌ ನ್ಯೂ ರೋಮನ್‌ ಸೆರಿಫ್ ಫಾಂಟ್‌ ಆಗಿದೆ.

ಹದಿನೇಳು ವರ್ಷಗಳಲ್ಲಿ ಕ್ಯಾಲಿಬ್ರಿ ಮೈಕ್ರೋಸಾಫ್ಟ್ಗೆ ಒಂದು ಆಧುನಿಕ ಸ್ಪರ್ಶವನ್ನು ತಂದಿತ್ತು. ಹಿಂದೆ ಡೀಫಾಲ್ಟ್ ಆಗಿದ್ದ-ವರ್ಡ್‌ನಲ್ಲಿ ಟೈಮ್ಸ್‌ ನ್ಯೂ ರೋಮನ್‌ ಮತ್ತು ಇತರ ಆಫೀಸ್‌ ಅಪ್ಲಿಕೇಶನ್‌ಗಳಲ್ಲಿ ಎರಿಯಲ್‌ ಅನ್ನು ಬದಲಿಸಿತು. ಕ್ಯಾಲಿಬ್ರಿಯ ಆಕರ್ಷಣೆಯು ಅದರ ಶುದ್ಧ, ಸಾಂಪ್ರದಾಯಿಕ ವಿನ್ಯಾಸದಿಂದಲೇ ಹುಟ್ಟಿಕೊಂಡಿತು. ಕೈಬರಹದಿಂದ ಪ್ರಭಾವಿತವಾದ ಅದರ ಸೂಕ್ಷ್ಮ ವೃತ್ತಾಕಾರದ ಅಂಚುಗಳು ಮತ್ತು ನೈಜ -ಟ್ರೂ ಇಟಾಲಿಕ್‌ ಶೈಲಿಯು ಬಿಗುವಲ್ಲದ ಮತ್ತು ಸರಾಗವಾಗಿ ಓದಬಹುದಾದ ಸೌಂದರ್ಯವನ್ನು ನೀಡಿತು.

ಕ್ಯಾಲಿಬ್ರಿ ವ್ಯಾಪಕ ಶ್ರೇಣಿಯ ಭಾಷೆಗಳನ್ನು ಬೆಂಬಲಿಸಿದ ಫಾಂಟ್‌. ಇದರ ಬಹುಮುಖ ಬಳಕೆ, ಸ್ಪಷ್ಟತೆ ಮತ್ತು ಆಧುನಿಕತೆಯ ಟಚ್‌ ಕ್ಯಾಲಿಬ್ರಿಯ ಬಲವಾದರೆ, ಡೀಫಾಲ್ಟ್ ಆಗಿದ್ದ ಕಾರಣದಿಂದ ಅತಿಯಾದ ಬಳಕೆಗೆ ಗುರಿಯಾಗಿ, ವೈಶಿಷ್ಟ್ಯತೆಯನ್ನು ಕಳೆದುಕೊಂಡಿತು. ಇದು ಎಷ್ಟೋ ಕಡೆ ಪ್ರಾಸಂಗಿಕವಾಗಿ ಫಾರ್ಮಲ್‌ ಅಲ್ಲದ ಸ್ಪರ್ಶವನ್ನೂ ಕೊಟ್ಟಿತು. ಪಿಕ್ಸೆಲ್‌ ಪಫೆìಕ್ಟ್ ಲೇಔಟ್‌ಗಳಿಗೆ ಸ್ವಲ್ಪ ತಾಂತ್ರಿಕ ಕಿರಿಕಿರಿಯನ್ನೂ ಕ್ಯಾಲಿಬ್ರಿ ನೀಡಿದ್ದಿದೆ. ಕ್ಯಾಲಿಬ್ರಿ ಇನ್ನು ಮುಂದೆ ಮೈಕ್ರೋಸಾಫ್ಟ್ ಆಫೀಸ್‌ ಫಾಂಟ್‌ಗಳ ರಾಜನಲ್ಲದಿದ್ದರೂ, ಇದು ಬಳಕೆದಾರರ ಜನಪ್ರಿಯ ಆಯ್ಕೆಯಾಗಿ ಉಳಿಯುವ ಸಾಧ್ಯತೆಯಿದೆ.

ಡಿಜಿಟಲ್‌ ಯುಗದಲ್ಲಿ ನಾವು ಫಾಂಟ್‌ಗಳನ್ನು ನೋಡುವ ವಿಧಾನವನ್ನು ಬದಲಿಸುವಲ್ಲಿ ಕ್ಯಾಲಿಬ್ರಿ ಪರಂಪರೆಯನ್ನು ಹುಟ್ಟುಹಾಕಿದೆ. ಕ್ಯಾಲಿಬ್ರಿ ಎಂಬ ಸ್ಯಾನ್ಸ್‌-ಸೆರಿಫ್ ಫಾಂಟ್‌ ನವೀನ ಮತ್ತು ಪ್ರೊಫೆಷನಲ್‌ ಆಗಿರಬಹುದಾದ ಶೈಲಿ ಎಂದು ಸಾಬೀತುಪಡಿಸಿತು, ಈ ಶೈಲಿಯ ವ್ಯಾಪಕ ಸ್ವೀಕಾರಕ್ಕೆ ದಾರಿ ಮಾಡಿಕೊಟ್ಟಿತು. ಕ್ಯಾಲಿಬ್ರಿ ಇನ್ನು ಮುಂದೆ ಡೀಫಾಲ್ಟ್ ಆಗಿರದಿದ್ದರೂ, ಬಳಕೆದಾರರಿಗೆ ಅದರ ಶುದ್ಧ ವಿನ್ಯಾಸ ಮುಂದೂ ಲಭ್ಯವಿರುತ್ತದೆ. ಎಷ್ಟಾದರೂ ವಿಶ್ವಾಸಾರ್ಹತೆಯನ್ನು ಬೆಳೆಸಲು ಹದಿನೇಳು ವರ್ಷಗಳು ಸುದೀರ್ಘ‌ ಸಮಯ. ಈಗ ಮೈಕ್ರೋಸಾಫ್ಟ್ ಅನ್ನು ಅಲಂಕರಿಸಿರುವ ಡೀಫಾಲ್ಟ್ ಫಾಂಟ್‌ ಆಪ್ಟೋಸ್‌.

-ವಿಶ್ವನಾಥ ಭಟ್‌

ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next