Advertisement
ಕರ್ನಾಟಕದ ವಿಷಯದಲ್ಲಿ ಪ್ರತಿ ಜಿಲ್ಲೆಗಳಿಗೂ ಅದರದ್ದೆ ಆದ ವಿಶೇಷತೆ ಇದೆ. ಅದು ಭಾಷೆ ಆಗಲಿ ಊಟ ಆಗಲಿ ಸಾಂಸ್ಕತಿಕ ವಿಚಾರವಾಗಲಿ ಕರ್ನಾಟಕ ಹೆಸರುವಾಸಿ. ಅದರಲ್ಲೂ ಉತ್ತರ ಕರ್ನಾಟಕ ತನ್ನ ಭಾಷೆಗಾಗಿ, ಅಡುಗೆಗಾಗಿ ಹೆಸರುವಾಸಿ. ದಕ್ಷಿಣ ಕರ್ನಾಟಕದ ಪ್ರತಿಯೊಬ್ಬರು ಉತ್ತರ ಕರ್ನಾಟಕದ ಹೆಸರು ಕೇಳಿದ ತಕ್ಷಣ ಕೇಳ್ಳೋದೆ “ನಿಮ್ಮಲ್ಲಿ ರೊಟ್ಟಿ ಊಟ ಫೇಮಸ್ ಅಲ್ವಾ” ಎಂಬ ಮಾತು. ಇಂದು ಆ ಮಾತು ನಿಜವಾಗಿಯೂ ಅಸ್ತಿತ್ವದಲ್ಲಿ ಇದಿಯೇ ?? ಪ್ರಶ್ನೆಗೆ ಸಮಂಜಸವಾದ ಉತ್ತರ ಇಲ್ಲ.
Related Articles
Advertisement
ಚುಮ್ಮರಿ ಉಂಡಿ ಜನರ ಬದುಕಿನಲ್ಲಿ ಮರೆಯಾಗಿ ಹೋಗಿದೆ. ಕಲ್ಲಿನಲ್ಲಿ ಅರೆದ ಖಾರದ ಹಿಂಡಿ ಬಿಸಿ ಬಿಸಿ ಜೋಳದ ರೊಟ್ಟಿ ಈಗ ಕನಸಾಗಿದೆ. ಸಂಗಟಿ ಸಾರು, ನುಚ್ಚು ಮಜ್ಜಿಗೆ ಮೇಲೆ ಸಣ್ಣದಾಗಿ ಹೆಚ್ಚಿದ ಉಳ್ಳಾಗಡ್ಡಿ ಯಾರಿಗೂ ನೆನಪಿಲ್ಲ. ಹುಣಸೆಯ ಪದಾರ್ಥ ಹುಂಚಿ ಜಿಗಳಿ ಅಂಗಡಿಯಲ್ಲಿ ಸಿಗುವ ಮಟ್ಟಿಗೆ ಕಾಲ ಬದಲಾಗಿದೆ. ಅಕ್ಕಿ ಹುಗ್ಗಿ, ಸಾಮೆ ಅಕ್ಕಿ ಅಣ್ಣ, ಬದನೆಕಾಯಿ ಎಣೆಗಾಯಿ, ತಾಲಿಪಟ್ಟು, ರಾತ್ರಿ ಉಳಿದ ಅನ್ನಕ್ಕೆ ಒಗ್ಗರಣೆ ಅದರ ಜೊತೆ ಚುಮ್ಮರಿ, ಎಣ್ಣಿ ಹೋಳಿಗೆ, ಸೌತಿಬೀಜ ಹುಗ್ಗಿ ಹೀಗೆ ಇನ್ನೂ ಅನೇಕ ಅಡುಗೆ ಪದಾರ್ಥಗಳು ಗಣನೀಯವಾಗಿ ಕಡಿಮೆಯಾಗುತ್ತಿರುವುದು ಖೇದಕರ ವಿಷಯ.
ದೋಸೆ, ಇಡ್ಲಿ, ಪುರಿ ಹೀಗೆ ಸಾಗುತ್ತಾ ನಾರ್ಥ ಇಂಡಿಯನ್, ಸೌತ್ ಇಂಡಿಯನ್ ಊಟಕ್ಕೆ ಮೊರೆ ಹೋಗುತ್ತಾ ನಮ್ಮ ಗ್ರಾಮೀಣ ಸೊಗಡಿನ, ನಮ್ಮ ನೆಲದ ಪಾರಂಪರಿಕ ಊಟದ ಪದ್ಧತಿ ಮರೆತು ಬಾಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ನೀವೆ ಅವಲೋಕಿಸಿಕೊಳ್ಳಿ.
ಕಡಕ್ ರೊಟ್ಟಿಯ ಮೇಲೆ ಕೆನೆ ಮೊಸರು, ಶೇಂಗಾ ಚಟ್ನಿ ಹಾಕಿ ತಿಂದರೆ ಯಾವುದೇ ಪಿಜ್ಜಾಗೂ ಕಡಿಮೆ ಇಲ್ಲ ಎಂಬುದು ಗೊತ್ತಿದ್ದರು ಪಿಜ್ಜಾ ಎಂಬ ಆಧುನಿಕತೆಯ ಭೂತದ ಹಿಂದೆ ಬಿದ್ದಿರುವ ನಮಗೆ ಅರಿವು ಯಾವಾಗ ಆಗುತ್ತದೆ ಎಂಬುದು ನಿಗೂಢ. ಸಮಯವಿದ್ದರೆ ಸುಮ್ಮನೆ ನೆನಪಿಸಿಕೊಳ್ಳಿ ನಮ್ಮ ಊರಿನ ನಮ್ಮ ಭಾಗದ ಯಾವ ಸಾಂಪ್ರದಾಯಿಕ ಊಟ ಇಂದು ಕಣ್ಮರೆಯಾಗುತಿದೆ ? ಮುಂದಿನ ಪೀಳಿಗೆಗೆ ಅದರ ರುಚಿಯನ್ನು ಸವಿಸಬೇಕಾಗಿರುವುದು ನಮ್ಮ ಕರ್ತವ್ಯ ಎನಿಸಿದರೆ ಇಂದೆ ಅಂತಹ ಊಟವನ್ನು ಮರಳಿ ಮಾಡುವ ಪ್ರಯತ್ನ ಮಾಡುವುದು ಒಳಿತಲ್ಲವೆ ? ಏಕೆಂದರೆ ಪ್ರಯತ್ನವೆಂಬುದು ಉಚಿತ.
-ಗಿರಿಧರ ಹಿರೇಮಠ
ಹುಬ್ಬಳ್ಳಿ