ಅಲ್ಲೊಂದು ತಂಗಾಳಿ ಮೆಲ್ಲಗೆ ಸುಳಿದಾಡಿತ್ತು. ಆ ಸ್ವಪ್ನ ಕನವರಿಕೆಯ ಮೀರಿ ಸಂಭ್ರಮಿಸುವ ಭಾವ ಮೂಡಿತ್ತು. ಕುತೂಹಲ ಕೆರಳಿದ ಭಾವನಾ ಲಹರಿಗೆ ಹೊಸ ಭಾಷ್ಯ ಬರೆಯುವ ಇಂಗಿತವೇನೋ ಅಗಣಿತ. ಆದರೆ ಮನದ ಗೊಂದಲಗಳ ಬುತ್ತಿ ಅತಿಯಾಗಿ ಕಳವಳ, ಭಯದ ಭಾವನೆ ಮೂಡಿಸಿತ್ತು.
ಹಾಗೊಮ್ಮೆ ಹೀಗೊಮ್ಮೆ ಮನ ತಹಬದಿಗೆ ಬಂತೆಂದರೂ ಮತ್ತದೇ ಮೌನ ಲೋಕದಲ್ಲಿ ವಿಹರಿಸುವ ವಿಚಿತ್ರ ಬಯಕೆ. ಅವಳ ಆ ಕನವರಿಕೆ, ಕನಸು, ಮನಸು ಏನು ಎಂದೂ ಅರಿಯುವ ಸೋಜಿಗ ಅವಳಿಗೂ ಕೂಡ. ಹಾಗಿದ್ದಾಗ ಅವಳೆಲ್ಲ ಭಾವನೆಗಳ ಜೋಪಾನ ಮಾಡುವ ಭರವಸೆ ನೀಡಲು ಎದುರಾದ ಕೈಗೆ ಕೈ ನೀಡಲು ಭಯ, ಸಂಕೋಚ. ಜೀವನದ ಬಹುಪಾಲು ಸಮಯ ಕುಟುಂಬ, ಕೆಲಸದಲ್ಲೇ ಕಳೆದರೂ ಭಾವನೆಗಳೆಲ್ಲ ಅಕ್ಷರ ರೂಪ ಪಡೆದಷ್ಟು ಸುಲಭವಲ್ಲ. ಈ ಅರಿವು ಮೂಡಿದ್ದೇ ಮತ್ತದೇ ಮೌನ.
ದಿಗಂತದಾಚೆ ಮೀರಿ ಬದುಕ ನಡೆಸುವ ಬಯಕೆ ಏನೋ ಅನುಪಮ.ಆದರೂ ಅದು ಕೇವಲ ಬಗೆಹರಿಯದ ಕನಸು. ಅವನ ವಿಚಾರಧಾರೆಯಲ್ಲಿ ಕಾಣುವ ಭಾವಗಳಿಗೆ ಪ್ರತಿ ಭಾವನೆ ನೀಡುವಲ್ಲಿನ ವಿಫಲತೆ ಮನದಲ್ಲಿ ನಿರಾಶದಾಯಕ. ಅವಳೇ ನಿರುತ್ಸಾಹಿಯಾದರೂ ಅವನಲ್ಲಿ ಮಾಸದ ನಗು, ಭರವಸೆ ಕಂಡರೆ ಅವಳ ವಿಚಾರವಂತಿಕೆಗೆ ಅವಳೇ ವಿಸ್ಮಿತ. ಹೇಗೂ ಏನೋ ಎಲ್ಲ ಭಾವಗಳ ಮೀರಿ ಅವನ ಭರವಸೆಗೆ ಬೆಳಕಾಗುವ ಸಮಯ ಸನ್ನಿಹಿತವಾಗಿದೆ.
ಅವಳ ಗೊಂದಲಗಳ ಗಂಟು ಮೂಟೆ ಮೀರಿ ಅವನೊಂದಿಗೆ ಅವಳ ಬದುಕು ನಿಖರವಾಗಿದೆ. ಅವಳ ಮೊಗದಲ್ಲಿ ಸಂತಸ ಮೂಡಿ ಸದಾ ಅವನೊಂದಿಗೆ ಹೆಜ್ಜೆ ಬೆಸೆದು ನಡೆವಂತಾಗಿದೆ.
-ಸಂಗೀತಾ ಹೆಗಡೆ
ಪಂಚಲಿಂಗ, ಶಿರಸಿ