ಬಗೆ ಬಗೆಯ ಭಕ್ಷ್ಯ ಕಣ್ಣ ಮುಂದೆ ಇದ್ದರೂ ಅದನ್ನು ತಿನ್ನುವಂತಿಲ್ಲ ಮೊದಲು ಮೀಸಲಿಟ್ಟ ಮೇಲೆ ತಿನ್ನಬೇಕು ಎಂಬ ನಿಯಮ ಬಹುತೇಕ ಕಡೆ ಇದ್ದೇ ಇರುತ್ತದೆ. ಇಂಥಹ ಮೀಸಲಿಡುವ ಸಂಪ್ರದಾಯ ತಲೆತಲಾಂತರ ವರ್ಷದಿಂದ ಸಹ ರೂಢಿ ಇರುವಂತದ್ದಾಗಿದ್ದು ಕೆಲವರು ಮನೆ ಒಳಗೆ ಬಾಳೆ ಎಲೆಗೆ ಭಕ್ಷ್ಯ ಇಟ್ಟು ಬಾಗಿಲು ಮುಚ್ಚಿದರೆ ಇನ್ನೂ ಕೆಲವರು ಹೊರಗಡೆ ಕಾಗೆಗೆ ತಿನ್ನಲಿಡುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಕಾಗೆಗಳು ನಮ್ಮ ಪೂರ್ವಜರ ಆತ್ಮ ಎಂದು ನಂಬಲಾಗುತ್ತದೆ. ಆದರೆ ಈ ವಿಚಾರ ಎಷ್ಟರ ಮಟ್ಟಿಗೆ ಸತ್ಯ ಎಂದು ಪರಾಮರ್ಶಿಸುವ ಗೋಜಿಗೆ ಇದುವರೆಗೆ ಯಾರೂ ಹೋಗಿಲ್ಲ. ಕಾಗೆ ಬಗ್ಗೆ ಚಿಕ್ಕ ವಯಸ್ಸಿನಿಂದ ತರತರಹದ ಕಥೆ ಓದಿ ಕೇಳಿ ಬಾಲ್ಯದಲ್ಲಿಯೇ ಈ ಪಕ್ಷಿ ಬಗ್ಗೆ ನಮಗೆಲ್ಲ ಒಂದು ತಾತ್ಸಾರ ಭಾವನೆ ಇತ್ತು.
ಕಾಗೆ ಶನಿದೇವರ ವಾಹನ ಎಂದು ಸಹ ನಂಬಲಾಗುತ್ತದೆ. ಹಾಗಾಗಿಯೇ ಕೆಲವು ಶನೀಶ್ವರ ದೇಗುಲದಲ್ಲಿ ಕಾಗೆ ಮೂರ್ತಿ ಇರುವುದು. ಕಪ್ಪುಬಣ್ಣ ಲಕ್ಷಣವಾಗಿ ಕಾಣುತ್ತದೆ ಎಂಬುದು ಸುಳ್ಳಲ್ಲ. ಹಾಗೆಯೇ ಆ ಬಣ್ಣವನ್ನೂ ಹೊಂದಿಕೊಂಡ ಪಕ್ಷಿ ಕಾಗೆ. ಇದು ಸಮೂಹಜೀವಿ. ಸಂಜೆ ಹೊತ್ತು ಎಲ್ಲ ಕಾಗೆಗಳು ಗುಂಪುಗೂಡಿ ಸದ್ದುಮಾಡಿಕೊಡು ಪರಿಸರದಲ್ಲಿ ಕಾಣಿಸುತ್ತವೆ. ಇವುಗಳು ತರಕಾರಿ, ಸತ್ತ ಪ್ರಾಣಿ ಪಕ್ಷಿ ಹಾಗೂ ತ್ಯಾಜ್ಯವಸ್ತುಗಳನ್ನು ತಿಂದು ಬದುಕುತ್ತವೆ. ಈ ಪಕ್ಷಿ ಹಲವು ಜನರಿಗೆ ಹತ್ತಿರವಾಗಿದ್ದು, ಕೆಟ್ಟ ಮನಃಸ್ಥಿತಿಯನ್ನು ಹೊಂದಿರುವ ಮನುಜರ ಪತ್ತೆ ಹಚ್ಚುವ ಸಾಮರ್ಥ್ಯವನ್ನು ಹೊಂದಿದೆ.
ಕಾಗೆಯನ್ನೂ ಕಂಡರೆ ಪ್ರತಿಯೊಬ್ಬನೂ ದ್ವೇಷಿಸುತ್ತಾನೆ. ಕಣ್ಣೆದುರು ಕಂಡರೆ ಸಾಕು, ಇಲ್ಲವೋ ಮನೆಯ ಹತ್ತಿರ ಬಂದರೆ ಸಾಕು ಕಲ್ಲು ಬಿಸಾಡಿ ಓಡಿಸುತ್ತಾರೆ. ಅದು ಒಂದು ಜೀವಿ ಎಂದು ಯಾರೂ ಸಹ ಅದನ್ನು ಗೌರವಿಸುವುದೇ ಇಲ್ಲ. ಪಿತೃ ಪಕ್ಷದಲ್ಲಿ ಜನರು ತಮ್ಮ ಪೂರ್ವಜರ ಹೆಸರಿನಲ್ಲಿ ಕಾ..ಕಾ… ಎಂದು ಕಾಗೆಯನ್ನು ಕರೆದು ಆಹಾರವನ್ನು ನೀಡಿ ಸಂತೃಪ್ತಿಪಡುತ್ತಾರೆ ಹಾಗೂ ಆ ಆಹಾರವನ್ನು ಕಾಗೆ ಸೇವಿಸಿದರೆ ಪೂರ್ವಜರಿಗೆ ತೃಪ್ತಿಯಾಗಿದೆ ಎಂದು ನಂಬುತ್ತಾರೆ. ಆದರೆ ಇಂತಹ ನಂಬಿಕೆಗೆ ಈಗ ಉಳಿಗಾಲವಿಲ್ಲದಂತಾಗಿದೆ.
ಇದು ಕೋರ್ಮಿಡೇ ಪಕ್ಷಿ ಸಂತತಿ ಕುಲಕ್ಕೆ ಸೇರಿದೆ. ಅತೀ ಬುದ್ಧಿವಂತ ಪಕ್ಷಿ. ಕಡ್ಡಿ ಮೊಂಗೆಗಳಿಂದ ಗೂಡು ಕಟ್ಟುತ್ತವೆ. ಆ ಗೂಡಿನಲ್ಲಿ ಕೋಗಿಲೆ ಮೊಟ್ಟೆ ಇಟ್ಟು ಹೋದ ಸಂದರ್ಭದಲ್ಲಿ ಕಾಗೆ ಆ ಮೊಟ್ಟೆ ಯನ್ನೂ ರಕ್ಷಣೆ ಮಾಡಿಕೊಳ್ಳುತ್ತದೆ. ಹಾಗಾಗಿ ಇದು ಸ್ನೇಹ ಜೀವಿಯೇ ವಿನಃ ನಮ್ಮ ಕೆಡುಕು ತಿಳಿಸುವ ಸೂಚಕ ಎಂಬ ಭಾವನೆ ತೊರೆಯಬೇಕಾದದ್ದು ನಮ್ಮ ಕರ್ತವ್ಯವಾಗಿದೆ.
-ಪೂರ್ಣಿಮಾ ಕೆ. ಮುಂಡುಗಾರು
ವಿವೇಕಾನಂದ ಸ್ವಾಯತ್ತ
ಮಹಾವಿದ್ಯಾಲಯ ಪುತ್ತೂರು