ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ… ಈ ಹಾಡಿನಂತೆ ನಮ್ಮ ಜೀವನ ಅದೆಷ್ಟು ಸುಂದರ ನೆನಪುಗಳಿಂದ ಕೂಡಿದೆ. ಈ ನೆನಪುಗಳ ಬಗ್ಗೆ ಹೇಳಲು ಒಂದು ಕಾರಣವಿದೆ. ಎರಡು ತಿಂಗಳ ಹಿಂದೆಯಷ್ಟೇ ನನ್ನ ಡಿಗ್ರಿ ಜೀವನ ಮುಗಿಯಿತು. ಕೊನೆಯ ದಿನ ನನ್ನ ಉಪನ್ಯಾಸಕರು ನೀನು ಪ್ರವೇಶಕ್ಕಾಗಿ ಬಂದ ದಿನ ಇನ್ನೂ ನೆನಪಿನಲ್ಲಿದೆ; ಮೊನ್ನೆ ಮೊನ್ನೆಯಷ್ಟೇ ಬಂದ ಹಾಗಿದೆ. ಎಷ್ಟು ಬೇಗ ಮೂರು ವರ್ಷ ಕಳೆದು ಹೋಯಿತಲ್ಲ ಎಂದರು.
ಪುಟ್ಟ ಪುಟ್ಟ ಹೆಜ್ಜೆಯನಿಡುತ್ತಾ ಕಾಲೇಜಿಗೆ ಬಂದ ಆ ದಿನ. ಹೊಸ ಹೊಸ ಸ್ನೇಹಿತರು, ಉಪನ್ಯಾಸಕರು, ಸೀನಿಯರ್ ಜೂನಿಯರ್ನ ಜತೆ ಕಳೆದ ಮೂರು ವರ್ಷ ಎಷ್ಟು ಬೇಗ ಮುಗಿದೇ ಹೋಯಿತು. ಸ್ನೇಹಿತರ ಪರಿಚಯ ಮಾಡಿಕೊಂಡು, ತರಗತಿ ಕೋಣೆಯನ್ನು ಹಚ್ಚಿಕೊಂಡು, ಪಾಠ ಆಟದ ಜತೆ ಕಳೆದ ದಿನಗಳು ಮುಗಿದೇ ಹೋದವೇ? ಸೀನಿಯರ್ಸ್ ನಿಂದ ಕಲಿತ ಹಲವು ಪಾಠಗಳು, ಜೂನಿಯರ್ಸ್‌ಗೆ ನಾವು ನೀಡಿದ ಮಾರ್ಗದರ್ಶನ, ಕಾರಿಡಾರ್‌ನಲ್ಲಿ ಓಡಾಡುತ್ತಿದ್ದ ದಿನಗಳು, ಉರುಳಿದ ವೇಗವೇ ತಿಳಿಯಲಿಲ್ಲ.
ಈ ಕಾಲೇಜು ಜೀವನ ನೂರಾರು ಸಿಹಿ-ಕಹಿ ನೆನಪುಗಳ ಸುಂದರವಾದ ಬುತ್ತಿ. ಅದೆಷ್ಟು ಮಾತು-ಕತೆ, ಹಾಡು-ಹರಟೆ, ಸ್ಪರ್ಧೆಗಳು, ಅಸೈನ್ಮೆಂಟ್ಸ್, ಸೆಮಿನಾರ್ ಪ್ರಾಜೆಕ್ಟ್, ಟ್ರೈನಿಂಗ್, ಎಕ್ಸಟೆಂಶನ್ ಆ್ಯಕ್ಟಿವಿಟಿ ಯಾವಾಗಲೂ ಒಂದಿಲ್ಲೊಂದು ಕೆಲಸ ಕಾರ್ಯಗಳು. ತರಗತಿಯಲ್ಲಿ ಇರುತ್ತಿದ್ದುದೆ ಕಡಿಮೆ ಎನ್ನಬಹುದು. ಯಾವಾಗಲೂ ಹೊಸ -ಹೊಸ ವಿಷಯವನ್ನು ಕಲಿಯುವ ಹಂಬಲ. ಗ್ರಂಥಾಲಯ ಯಾವಾಗಲೂ ಒಂದು ಮಾರ್ಗದರ್ಶಕ.
ಬದುಕಿನಲ್ಲಿ ಬಯಸದೇ ನನಗೆ ಸಿಕ್ಕಿದ್ದು ಎಂದರೆ ಅದು ವಜ್ರದಂತಹ ಸ್ನೇಹಿತರ ಪ್ರೀತಿ. ಪದವಿಯಲ್ಲಿ ಆದ ಪ್ರತಿ ಪರಿಚಯವು ಒಂದು ಸುಂದರ ನೆನಪು ಕಟ್ಟಿ ಕೊಟ್ಟಿದೆ. ಕಾಲೇಜಿನಲ್ಲಿ ಸ್ನೇಹಿತರಾಗಿ, ಬದುಕಿನಲ್ಲಿ ಹಿತೈಷಿಗಳಾಗಿ, ಪ್ರತಿಕಷ್ಟದ ಸಂದರ್ಭಕ್ಕೂ ಕೈ ಬಿಡದೆ ನಿಂತಿರುವ ನಿಷ್ಕಲ್ಮಶ ಮನಸ್ಸುಗಳು. ಬದುಕಿನಲ್ಲಿ ಸಿಕ್ಕ ಬೆಲೆ ಕಟ್ಟಲಾಗದ ಸಂಪತ್ತುಗಳಿವು.
ಅದೆಷ್ಟು ಬೇಗ ಈ ಮೂರು ವರ್ಷ ಕಳೆದು ಹೋಯಿತು ತಿಳಿಯಲೇ ಇಲ್ಲ. ಈಗಲೂ ನನ್ನ ನೆನಪಿನಂಗಳದಲ್ಲಿ ಡಿಗ್ರಿ ಜೀವನದ ಮೊದಲ ತರಗತಿ, ಫ್ರೆಷರ್ಸ್ ಡೇ, ಎಕ್ಸಾಮ್ ಎಲ್ಲವೂ ಸುತ್ತುತ್ತಾ ಇದೆ. ಫ್ರೆಶರ್ಸ್ ಡೇ ಇಂದ ಆರಂಭಿಸಿ ಫೇರ್ವೆಲ್ ಡೇ, ಗ್ರಾಜುಯೇಶನ್ ಜಿಂಕೆಯ ಓಟದಂತೆ ವೇಗವಾಗಿ ಓಡಿತು. ಕಾಲೇಜು ಜೀವನವನ್ನು ತುಂಬಾ ಉತ್ಸುಕತೆಯಿಂದ ಕಳೆಯಲು ಅಲ್ಲಿರುವ ಪ್ರತಿಯೊಬ್ಬರು ಕಾರಣ. ಅದರಲ್ಲೂ ಮುತ್ತಿ ನಂತಹ ನನ್ನ ಜೂನಿಯರ್ಸ್- ರಕ್ತ ಹಂಚಿ ಹುಟ್ಟಿಲ್ಲವಾದರೂ ಅದಕ್ಕೂ ಮಿಗಿಲಾಗಿ ತಂಗಿ – ತಮ್ಮಂದಿರು ಪ್ರೀತಿ ಕೊಟ್ಟಿರುವ ಬಗೆ ಎಂದಿಗೂ ಮರೆಯಲಾಗದು. ಅವರೊಂದಿಗೆ ಕಳೆದಿರುವ ದಿನ ಗಳನ್ನು ಹೇಗೆ ಮರೆಯಲಿ? ಜೀವನದಲ್ಲಿ ಎಂದೂ ಸಿಗದ ಒಲವು ಇಲ್ಲಿ ಸಿಕ್ಕಿತ್ತು.
ಯಾವಾಗಲೂ ಒಂದಿಲ್ಲೊಂದು ಚಟುವಟಿಕೆಯಲ್ಲಿ ಬ್ಯುಸಿ ಆಗಿರುತ್ತಿದ್ದ ನನಗೆ ಡಿಗ್ರಿ ಮುಗಿದು ಎರಡು ತಿಂಗಳಲ್ಲೇ ಮನೆ ಬೇಸರ ಹುಟ್ಟಿಸಿ ಬಿಟ್ಟಿತ್ತು. ಲೇಖನಿ ಹಿಡಿದು ಬರೆಯಲು ಹೊರಟರೆ ಒಂದು ಪದವೂ ಬರೆಯಲಾಗುತ್ತಿಲ್ಲ. ಕಾರಣ ಪುಸ್ತಕ ಓದು ಕಡಿಮೆಯಾಗಿತ್ತು. ಮನಸ್ಸಿಗೆ ಒಂದು ತರಹ ಜಡತ್ವ ಬಂದ ಹಾಗೆ ಆಗಿತ್ತು. ಈಗ ಎಂ.ಕಾಂ, ಕಾಲೇಜು ಮತ್ತೆ ಓದು ಮುಂದುವರಿದು ಎಲ್ಲವೂ ಮೊದಲಿನಂತೆ ಸರಾಗವಾಗಿ ನಡೆಯಲು ಆರಂಭಿಸಿತು. ಆದರೂ ಮೂರು ವರ್ಷದ ನೆನಪು ನೂರು ವರ್ಷದವರೆಗೆ. ಕಾಲೇಜಿನಲ್ಲಿ ಸೆಕ್ಯೂರಿಟಿ ಅಂಕಲ್, ಡ್ರೈವರ್ ಅಣ್ಣ, ಲೈಬ್ರರಿ ಸರ್., ಮೇಡಂ, ಉಪನ್ಯಾಸಕರ ವೃಂದ, ಸ್ನೇಹಿತರು ಈ ಎಲ್ಲರೊಂದಿಗೆ ಕಳೆದ ಸಮಯ, ತಮಾಷೆ, ಹರಟೆ, ನೆನಪುಗಳ ಆಗರದೊಂದಿಗೆ ಜೀವನದ ಪಯಣ ಮುಂದುವರೆದಿದೆ.
-ರಶ್ಮಿ ಉಡುಪ, ಮೊಳಹಳ್ಳಿ