ಈ ಭೂಮಿಯ ಮೇಲೆ ದೇವರು ಅನ್ನೋ ಪದಕ್ಕೆ ಹೆದರದೇ ಇರುವ ವ್ಯಕ್ತಿನೇ ಇಲ್ಲ ಅನ್ನಿಸುತ್ತೆ. ನಾವು ಯಾವುದೇ ಕೆಲಸವನ್ನು ಪ್ರಾರಂಭಿಸುವಾಗ ದೈವ ದೇವರುಗಳನ್ನು ನೆನಪಿಸಿಕೊಂಡೆ ಪ್ರಾರಂಭಿಸುತ್ತೇವೆ. ದೇವರನ್ನು ತೃಪ್ತಿ ಪಡಿಸೋಕೆ ಹೋಮ, ಹವನ, ಯಜ್ಞಯಾಗಾದಿಗಳನ್ನು ಮಾಡ್ತೀವಿ. ಆದರೆ ಇದೆಲ್ಲದರ ಮಧ್ಯೆ ದೇವರನ್ನು ನಂಬದ, ಅವನನ್ನು ದ್ವೇಷಿಸುವ ಒಬ್ಬ ವ್ಯಕ್ತಿ ಇದಾನೆ ಅಂದ್ರೆ ಅದನ್ನು ನಂಬಿ¤ರಾ? ನೀವು ನಂಬಲೇ ಬೇಕು ಕಣ್ರೀ. ಅರೇ ಅದು ಯಾರು ಅಂತ ಗೊತ್ತಾ? ಅದು ಬೇರೆ ಯಾರು ಅಲ್ಲ ನಾನೇ.
ದೇವರು ಇದ್ದಾನೆ ಅಂತಾ ನಾನು ನಂಬುವ, ನಂಬಿಸುವ, ಸಾಬೀತು ಪಡಿಸುವ ಯಾವುದೇ ಘಟನೆಗಳು ನನ್ನ ಬದುಕಿನಲ್ಲಿ ನಡೆದಿಲ್ಲ. ನಡೆದಿದ್ರು ಅದೆಲ್ಲಾ ಕಾಲ್ಪನಿಕವಷ್ಟೇ . ಬದುಕಿನೂದ್ದಕ್ಕೂ ನನ್ನ ಪರೀಕ್ಷೆಯಲ್ಲಿ ಆ ದೇವರು ಯಾವತ್ತು ಉತ್ತೀರ್ಣನಾಗಲೇ ಇಲ್ಲ. ತನ್ನ ದೀಪವನ್ನೇ ತಾನು ಹಚ್ಚಿಕೊಳ್ಳಲಾಗದ ದೇವರು ಇನ್ನೊಬ್ಬರ ಬದುಕಿನಲ್ಲಿ ಹೇಗೆ ದೀಪವನ್ನು ಬೆಳಗಬಲ್ಲ. ಹಾಗಂತ ನಾನೇನು ದೇವರನ್ನು ಪೂಜಿಸೋದಿಲ್ಲ ಅಂತ ಅಲ್ಲ, ಪೂಜಿಸ್ತೀನಿ. ಆದರೆ ಅವನನ್ನು ಅತಿಯಾಗಿ ನಂಬೋದಿಲ್ಲಾ. ಬೇಡಿದ್ದೆಲ್ಲವನ್ನು ದೇವರು ಕೊಡುವ ಹಾಗಿದ್ದರೆ ಬದುಕಿಗೆ ಅರ್ಥ ಎಲ್ಲಿದೆ?
ಹೇ ದೇವರೇ, ನೀನು ಸಾಮಾನ್ಯದವನಲ್ಲ ಮಾಯಾವಿ, ಕಪಟಿ, ಮೋಸಗಾರ, ಕ್ರೂರಿ, ನಾನು ಇಷ್ಟ ಪಟ್ಟ ಒಂದೇ ಒಂದು ವಸ್ತುವನ್ನು ನೀನು ಕೊಡಲಿಲ್ಲ. ನೀನು ಕೊಡೋದು ಬೇಡ ನನ್ನ ಹತ್ರ ಇರೋದನ್ನು ತೆಗೆದುಕೊಂಡಿದ್ದಿಯ. ನನ್ನ ಪ್ರಾಣ ಒಂದನ್ನು ಬಿಟ್ಟು ಉಳಿದೆಲ್ಲವನ್ನು ತೆಗೆದುಕೊಂಡಿದ್ದಿಯ. ಯಾಕೆ ಅದು ಒಂದು ನಿನಗೆ ಬೇಡವಾಯ್ತ. ನಂಗೊತ್ತು ನೀನು ಪ್ರಾಣನಾ ಅಷ್ಟು ಸುಲಭವಾಗಿ ತೆಗೆದುಕೊಳ್ಳುವುದಿಲ್ಲ, ಇಂಚು ಇಂಚಿನಲ್ಲಿ ನರಳಿಸಿ ಸತಾಯಿಸಿ ನಿನ್ನ ತಗೊತಿಯ ಅಂತ. ಎಲ್ಲವನ್ನು ತೊರೆದು ನಗ್ನವಾದ ನನ್ನ ಬದುಕಿನಲ್ಲಿ, ಬರಿ ಒಂದು ಪ್ರಾಣದಿಂದ ನೀನು ನನ್ನನ್ನು ಏನು ಮಾಡೋದಕ್ಕಾಗೋದಿಲ್ಲ. ಅದು ನಿನ್ನ ಭ್ರಮೆ ಅಷ್ಟೇ!
ಇನ್ನೊಂದು ವಿಪರ್ಯಾಸ ನೋಡಿ, ದೇವರು ನನಗೆ ಕೊಡೋದಕ್ಕಿಂತ ನಾನೇ ಇತ್ತೀಚೆಗೆ ಅವನಿಗೆ ಕೇಳಿದ್ದೆಲ್ಲವನ್ನು ಕೊಟ್ಟುಬಿಟ್ಟಿದ್ದೇನೆ. ಹೇ ದೇವರೇ ಎಲ್ಲವನ್ನು ಬಿಟ್ಟು ಭಾವನೆಗಳ ತೊರೆದು, ನನ್ನ ಬದುಕು ಸಾಗುತ್ತಿದೆ. ಅತ್ತ ನೆಮ್ಮದಿ ಇಲ್ಲದೆ, ಇತ್ತ ಮನಃಶಾಂತಿ ಇಲ್ಲದೆ, ಶಿಕ್ಷೆ ಅನುಭವಿಸುತ್ತಿರುವ ನಿರಪರಾಧಿ ನಾನು. ನಿನಗೆ ಇನ್ನೊಂದು ವಿಷಯ ಗೊತ್ತಾ? ನನಗೆ ಯಾವುದರ ಮೇಲೆ ಆಸೆಯಾಗಲಿ, ನಿರೀಕ್ಷೆಯಾಗಲಿ ಇಲ್ಲ. ಹೀಗಾಗಿ ನಿರಾಸೆಗಳು ಆಗೋದಿಲ್ಲಾ.
ನೀನು ನನ್ನಿಂದ ಏನನ್ನು ಬೇಕಾದರೂ ತಗೋ ಆದರೆ ಎಲ್ಲಿಯವರೆಗೆ ನನ್ನ ಆತ್ಮಬಲ ನನ್ನಲಿದೆಯೋ ಅಲ್ಲಿಯವರೆಗೆ ನನನ್ನು ನೀನು ಏನು ಮಾಡೋಕಾಗಲ್ಲ. ಒಮ್ಮೆ ನೀನೇನಾದರೂ ನನ್ನ ಎದುರಿಗೆ ಬಂದರೆ ನಿನ್ನನ್ನು ಕೇಳ್ಳೋಕೆ ತುಂಬಾ ಪ್ರಶ್ನೆಗಳಿವೆ. ನಿನ್ನನ್ನು ಅಷ್ಟು ಸುಲಭವಾಗಿ ಬಿಡೋದೇ ಇಲ್ಲ. ಪ್ರಶ್ನೆಗಳ ಸುರಿಮಳೆ ಹಾಕಿ ಅಷ್ಟಮಂಗಳದಿ ದಿಬ್ಭಂದನವ ಮಾಡಿ ನಿನ್ನನ್ನು ಕಂಬನಿಯೊಳಗಿನ ಕಂಬಿಯಲ್ಲಿ ಕುರಿಸಿಬಿಡುವೆ. ನನ್ನ ಬಾಹು ಬಂಧನದಿಂದ ನೀನು ಮತ್ತೆಂದು ತಪ್ಪಿಸಿತೊಂಡು ಹೋಗಲೇ ಬಾರದು ಹಾಗೆ ಮಾಡಿ ಬಿಡುವೆ.
ನಾನು ಇದುವರೆಗೂ ನಿನನ್ನು ನೋಡಿಲ್ಲ. ನಾನಷ್ಟೇ ಅಲ್ಲ, ಈ ಜಗತ್ತಿನಲ್ಲಿ ಯಾರು ನೀನ್ನನ್ನು ನೋಡಿಲ್ಲ. ನೋಡಿದ್ರು ಅದು ಗುಡಿಯೊಳಗಿನ ಮೂರ್ತಿಯ ರೂಪದಲ್ಲಿ ಅಷ್ಟೇ. ಜನರು ನಿನ್ನನ್ನು ನೋಡಬೇಕು ಅಂತಾನೆ ಪವಿತ್ರ ಪುಣ್ಯಕ್ಷೇತ್ರಗಳಿಗೆ ಹೋಗ್ತಾರೆ. ಎಷ್ಟು ಹಣ ಖರ್ಚು ಮಾಡುತ್ತಾರೆ. ಎಂದಾದರೂ ಅವರಿಗೆ ನೀನು ದರ್ಶನ ಕೊಟ್ಟಿದ್ದೀಯಾ?
ನನಗೆ ಕಣ್ಣಿಗೆ ಕಾಣದೆ ಇರೋ ದೇವರ ಮೇಲೆ ನಂಬಿಕೆ ಇಲ್ಲ. ನನಗೆ ನನ್ನ ಮೇಲೆ ಹೆಚ್ಚು ನಂಬಿಕೆ. ಜನರು ದೇವರ ಹೆಸರಿನಲ್ಲಿ ಮಾಡುವ ವೆಚ್ಚ ಬಹಳಷ್ಟು. ಅದರಲ್ಲಿ ಮೂಢನಂಬಿಕೆಗಳು ಒಂದಿಷ್ಟು. ಕೊನೆಯದಾಗಿ ನನ್ನ ಮಾತು ಇಷ್ಟೇ. ದೇವರು ಹೊರಗಡೆ ಎಲ್ಲೂ ಇಲ್ಲ. ನಮ್ಮಲ್ಲೇ ನಮ್ಮೊಳಗೆ, ನಮ್ಮ ಅಂತರಂಗದಲ್ಲಿ, ನಮ್ಮ ಆತ್ಮಬಲದಲ್ಲೇ ಇದ್ದಾನೆ. ಆದರೆ ನಾವು ಅದನ್ನು ಗುರುತಿಸುವಲ್ಲಿ ವಿಪಲರಾಗಿದ್ದೇವಷ್ಟೇ.
–
ಸುಜಯ ಶೆಟ್ಟಿ , ಹಳ್ನಾಡು
ಡಾ| ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ