ಅಮ್ಮ ಎಂಬುದು ಕೇವಲ ಎರಡಕ್ಷರದ ಪದವಾದರೂ, ಅದು ಸಾಗರದಷ್ಟು ಭಾವನೆಗಳನ್ನು ಮೆಲುಕು ಹಾಕುವ ಶಬ್ದ. ಅಮ್ಮನ ಪ್ರೀತಿ ಆಕಾಶದಲ್ಲಿ ಇರುವ ನಕ್ಷತ್ರಕ್ಕೆ ಸಮಾನ. ಎಣಿಸಲು ಎಂದಿಗೂ ಸಾಧ್ಯವಿಲ್ಲ. ಅಮ್ಮನ ಋಣವನ್ನು ಸಾವಿರ ಜನ್ಮದಲ್ಲಿಯೂ ತೀರಿಸಲು ಸಾಧ್ಯವಿಲ್ಲ. ಆಕೆ ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಮಗುವನ್ನು ಜೋಪಾನ ಮಾಡುತ್ತಾಳೆ. ತನ್ನ ಎಲ್ಲ ನೋವುಗಳನ್ನು ತನ್ನ ಮಗು ಎಂಬುದಕ್ಕಾಗಿ ಸಹಿಸಿಕೊಂಡು ಮರೆಯುತ್ತಾಳೆ. ತನ್ನ ಜೀವವನ್ನು ಪಣಕ್ಕಿಟ್ಟು ಇನ್ನೊಂದು ಜೀವಕ್ಕೆ ಜನ್ಮ ನೀಡುತ್ತಾಳೆ. ಬಾಲ್ಯದಲ್ಲಿ ನಾವು ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆಯುವಾಗ ಆಕೆಯೂ ಖುಷಿಪಡುತ್ತಾಳೆ. ಸದಾ ತನ್ನ ಮಕ್ಕಳ ಒಳಿತಿಗಾಗಿ ಚಿಂತಿಸುತ್ತಾಳೆ.
“ಊರಿಗೆ ಅರಸನಾದರೂ ತಾಯಿಗೆ ಮಗನೇ’ಎಂಬ ಗಾದೆ ಎಷ್ಟು ಅದ್ಭುತವಾಗಿದೆ ಅಲ್ಲವೇ? ಒಬ್ಬ ಮಗ ಎಷ್ಟೇ ಶ್ರೀಮಂತ ರಾಜನಾಗಿದ್ದರೂ ಅವನ ತಾಯಿಗೆ ಆತ ಮಗನೇ. ಮಗ ಕಳ್ಳನಾಗಲಿ ಸುಳ್ಳನಾಗಲಿ ಅವನನ್ನು ಕೊನೆಯವರೆಗೂ ಪ್ರೀತಿಯಿಂದ ನೋಡುವವಳು, ಆದರಿಸುವವಳು. ಗದರಿ ಬುದ್ಧಿ ಹೇಳಿ ಸರಿ ದಾರಿಗೆ ತರುವವಳು ತಾಯಿ ಮಾತ್ರ.
ಅಮ್ಮನ ಪ್ರೀತಿ, ಮಮಕಾರವನ್ನು ಯಾರಿಂದಲೂ ಪಡೆಯಲು ಸಾಧ್ಯವಿಲ್ಲ. ತನಗಾಗಿ ಏನನ್ನೂ ಬಯಸದೆ ತನ್ನ ಮಕ್ಕಳಿಗಾಗಿ ದುಡಿಯುವವಳು. ರುಚಿಕರವಾದ ಅಡುಗೆ ಮಾಡಿ ಕೊನೆಗೆ ಉಳಿದದ್ದನ್ನು ತಿನ್ನುವವಳು. ನಿಸ್ವಾರ್ಥ ಪ್ರೀತಿ ತ್ಯಾಗದ ಸ್ವರೂಪ ಅಮ್ಮ. “ಅಮ್ಮ’ ಎಂದ ತತ್‌ಕ್ಷಣ ಮೈ ರೋಮಾಂಚನಗೊಳ್ಳುತ್ತದೆ. ಕಾಣದ ದೇವರಿಗಾಗಿ ಇನ್ನೆಲ್ಲೋ ಹುಡುಕುವ ಬದಲು ಅಮ್ಮನಲ್ಲೇ ದೇವರನ್ನು ಕಾಣಬಹುದು.
ಇಂದಿನ ತಂತ್ರಜ್ಞಾನದ ಯುಗದಲ್ಲಿ ಅಮ್ಮನ ಮೌಲ್ಯ ನಿಜವಾಗಿಯೂ ಯಾರಿಗೂ ತಿಳಿದಿಲ್ಲ. ಮಕ್ಕಳು ದೊಡ್ಡವರಾದ ಮೇಲೆ ವಯಸ್ಕರಾದ ತಮ್ಮ ತಂದೆ ತಾಯಿಯನ್ನು ಸಲಹುವ ವ್ಯವಧಾನವಿಲ್ಲದೆ ವೃದ್ಧಾಶ್ರಮಕ್ಕೆ ಕಳಿಸುತ್ತಾರೆ. ಆದರೆ ಒಂದಂತೂ ಸತ್ಯ. ನಾವು ಪ್ರೀತಿಸಿ ನಮ್ಮನ್ನು ಪ್ರೀತಿಸುವ ಜೀವಗಳು ಸಾವಿ ರಾರು ಸಿಗಬಹುದು ನಮಗೆ. ಆದರೆ ನಾವು ಪ್ರೀತಿಸದಿದ್ದರೂ ನಮ್ಮನ್ನು ಪ್ರೀತಿಸುವ ಜೀವ ಅಂದರೆ ಅದು ಅಮ್ಮ ಮಾತ್ರ.
-ಜಯಶ್ರೀ ಸಂಪ
ಅಂಬಿಕಾ ಮಹಾವಿದ್ಯಾಲಯ ಪುತ್ತೂರು