ಟಿವಿ ಅಂತಾ ಕರಿಯೋ ನಾಲ್ಕು ಇಂಚನ್ನು ಹೊಂದಿರುವ ಕಪ್ಪು ಬಣ್ಣದ ಗಾಜಿನ ದೂರದರ್ಶನ. ಎಷ್ಟೋ ಜನರಿಗೆ ಹುಚ್ಚನ್ನು ಹಿಡಿಸಿ- ಬಿಡಿಸಿದ ಒಂದು ಸಾಧನ. ಏನೇ ಹೇಳಿ ಈ ಟಿವಿ ಎನ್ನುವುದು ನಮ್ಮ ಜೀವನದಲ್ಲಿ ನಾವು ಅರಿಯದೇನೆ ಒಂದು ಭಾಗವಾಗಿರುವ ವಸ್ತು ಎಂದರೇ ತಪ್ಪಾಗಲಾರದು.
ಎಷ್ಟೋ ಭಾರಿ ಈ ಟಿವಿ ನಮ್ಮ ಭಾವನೆಗಳನ್ನ ನಮಗಿಂತಲೂ ಚೆನ್ನಾಗಿ ಅರಿತಿರುತ್ತದೆ. ನಗು, ಅಳು, ಬೇಸರ, ಕೋಪ ಎಲ್ಲವನ್ನು ತನ್ನ ಮಡಿಲಲ್ಲೇ ಹೊತ್ತು ತಿರುಗುವ ಒಂದು ಡಬ್ಟಾ ಎನ್ನಬಹುದು.
ಆದರೂ ಮೊದಲು ನಾನು ಕಂಡ ಟಿವಿ, ಈಗ ಇದ್ದ ಹಾಗೆ ಇರಲಿಲ್ಲ. ಆ ಟಿವಿ ಮನೆಯ ಒಂದು ದಾಂಡಿಗನಂತೆ ತಾನೇ ಹೆಚ್ಚು ಎಂಬಂತೆ, ಎಲ್ಲರೂ ನನ್ನ ಕೈ ಕೆಳಗೆ ಇರಬೇಕು ಅನ್ನೋ ದರ್ಪ, ದವಲತ್ತು, ಶಿಸ್ತು, ಗಾಂಭೀರ್ಯದಿಂದ ತುಂಬಿ ತುಳುಕುತಿತ್ತು. ಆಗ ಟಿವಿಗೆ ಇರೋ ಬೆಲೆ ಮನುಷ್ಯನಿಗೆ ಇರಲಿಲ್ಲ.
ಆಗೆಲ್ಲಾ ಯಾರ ಮನೆಯಲ್ಲಿ ಟಿವಿ ಇರುತ್ತಿತ್ತು ಅವರೇ ರಾಜ, ಅವರೇ ಅಂಬಾನಿಗಳು ಎಂಬ ಆಲೋಚನೆಗಳಿರುತ್ತಿತ್ತು. ಸಂಜೆ 6 ಗಂಟೆಯಾದರೆ ಸಾಕು, ಕೆಲಸ ಮುಗಿಸಿ ಎಲ್ಲರೂ ಕೂಡ ಟಿವಿ ಇರೋ ಮನೆಗಳಿಗೆ ಗುಂಪಾಗಿ ಹೋಗುತ್ತಿದ್ದರು. ಧಾರಾವಾಹಿ, ಸಿನಿಮಾ, ನ್ಯೂಸ್, ಭಕ್ತಿ ಗೀತೆಗಳು, ನ್ಪೋರ್ಟ್ಸ್ ಕಾರ್ಯಕ್ರಮ ಯಾವುದೇ ಇರಲಿ, ಭಾಷೆ ಯಾವುದೆ ಆಗಿರಲಿ. ಎಲ್ಲರೂ ಗುಂಪಾಗಿ ಕೂತು ಚರ್ಚಿಸುತ್ತಾ, ಹರಟೆ ಹೊಡೆಯುತ್ತಾ, ಆಗಾಗ ಹೊಗಳಿ, ಶಾಪ ಹಾಕಿ ಅತ್ತು ಕರೆದು, ಗೋಳಾಡಿ ಮುಗಿಸುವಷ್ಟರಲ್ಲಿ 10 ಗಂಟೆ ಆಗಿರುತ್ತಿತ್ತು. ದೈತ್ಯಾಕಾರದ ಟಿವಿ ಮನೆಯ ಹಿರಿ ಮನುಷ್ಯನಂತೆ ಎಲ್ಲರ ಭಾವನೆಗಳನ್ನು ಚೆನ್ನಾಗಿ ಅರಿತಿರುತ್ತಿತ್ತು. ಪ್ರತಿಯೊಬ್ಬರ ಅಭಿರುಚಿಗಳನ್ನು ಕೂಡ ದೇವರಂತೆ ತಿಳಿದಿರುತ್ತಿತ್ತು.
ಆಗಿನ ಕಾಲದಲ್ಲಿ ಟಿವಿ ಎಂದರೆ ಕೇವಲ ಮನೋರಂಜನೆಯ ವಸ್ತುವಾಗಿರಲಿಲ್ಲ. ಎಲ್ಲರ ಆಯಾಸಗಳನ್ನು ಮೀರಿಸುವ ಒಂದು ಮನುಷ್ಯನಾಗಿತ್ತು. ಕಾಲ ಯಾವುದೇ ಆಗಿರಲಿ ಮಳೆಗಾಲ ಬೇಸಿಗೆಗಾಲ, ಚಳಿಗಾಲ ಪ್ರತಿ ಕಾಲದಲ್ಲೂ ಕೂಡ ಯಾರು ನಮ್ಮ ಜತೆಗೆ ಇರಲಿ ಬಿಡಲಿ ಆದರೆ ಟಿವಿ ಮಾತ್ರ ಸದಾ ನಮ್ಮ ಜತೆಯಲ್ಲೇ ಇರುತ್ತಿತ್ತು. ಆಗೆಲ್ಲಾ ಟಿವಿ ಇರುವ ಮನೆಯಲ್ಲಿ ಜಗಳಗಳು ಬರುವುದು ಕಡಿಮೆ ಬಂದರೂ ಕೂಡ ಅದು ಕೇವಲ ನನಗೆ ದಾರವಾಹಿ, ನನಗೆ ಸ್ಪೋರ್ಟ್ಸ್, ನನಗೆ ನ್ಯೂಸ್, ಹೀಗೆ ಅವರವರಿಗೆ ಬೇಕಾಗಿರುವ ಚಾನೆಲ್ ಗಳಿಗೋಸ್ಕರ ಕಿತ್ತಾಟಗಳು ನಡೆಯುತ್ತಿತ್ತು.
ಇನ್ನು ಮೊದಲ ಬಾರಿಗೆ ಟಿವಿ ನೋಡಿದ ನೆನಪೆಂದರೆ ನಮ್ಮ ಪಕ್ಕದ ಮನೆಯ ಟಿವಿ. ನಾನು ಅಂಗನವಾಡಿಗೆ ಹೋಗುತ್ತಿದ್ದ ಕಾಲದಲ್ಲಿ ನಮ್ಮ ಮನೆಯಲ್ಲಿ ಟಿವಿ ಇರದ ಕಾರಣ ನಾನು ಪಕ್ಕದ ಮನೆಯ ಕಿಟಕಿಯಲ್ಲಿ ಅವರ ಮನೆಯ ದಾಂಡಿಗನಾದ ಟಿವಿಯನ್ನು ನೋಡಿ ಖುಷಿ ಪಡುತ್ತಿದ್ದಾರೆ. ಹೀಗೆ ಎಷ್ಟೋ ಜನರು ತಮ್ಮ ಬಾಲ್ಯದಲ್ಲಿ ಬೇರೆಯವರ ಮನೆಯ ಟಿವಿ ನೋಡಿಯೇ ಖುಷಿಪಡುತ್ತಿದ್ದರು.
ಆದರೇ ಈಗ ಹಾಗಿಲ್ಲಾ ಮನೆಯ ಯಜಮಾನ ಮೂಲೆ ಗುಂಪಾಗಿದ್ದಾನೆ. ಈಗ ಟಿವಿ ನೋಡುವರಿಲ್ಲಾ, ನನಗೆ ಆ ಚಾನೆಲ್, ನನಗೆ ಈ ಚಾನೆಲ್ ಎನ್ನುವ ಜಗಳವಿಲ್ಲ, ಟಿವಿ ಎದುರು ಕೂತು ಶಪಿಸಲು ಜನರಿಲ್ಲ, ಎಲ್ಲರೂ ಮೊಬೈಲ್ ನಲ್ಲೆ ಮುಳುಗಿದ್ದಾರೆ. ಎಲ್ಲಿ ಬೇಕಾದಲ್ಲಿಯಾದರೂ ತಮಗೆ ಇಷ್ಟವಾಗುವ ಚಾನಲ್‌ಗಳಲ್ಲಿ ಬೇಕಾಗಿರುವ ಕಾರ್ಯಕ್ರಮವನ್ನು ಕಂಡು ಖುಷಿಪಡುವ ಜನರು ಈಗಿನರು. ಒಬ್ಬರು ಟಿವಿಯಲ್ಲಿ ಧಾರವಾಹಿ ನೋಡುತ್ತಿದ್ದರೆ, ಇನ್ನೊಬ್ಬರು ಲೋಕದ ಪರಿವೇ ಇಲ್ಲದ ಹಾಗೆ ಮೊಬೈಲ್ ನಲ್ಲಿ ಕ್ರಿಕೆಟ್ ನೋಡುತ್ತಿರುತ್ತಾರೆ.
ಮೊದಲು ಟಿವಿ ಇದ್ದರು ಕೂಡ ಜನರು ತಮ್ಮ ಭಾವನೆಗಳನ್ನು ಪರಸ್ಪರರಾಗಿ ಹಂಚಿಕೊಳ್ಳುತ್ತಿದ್ದರು. ಆದರೇ ಈಗ ಮೊಬೈಲ್‌ನ ಸಹವಾಸದಿಂದ ಯಾರು ಕೂಡ ಮುಖ ಕೊಟ್ಟು ನೋಡುವ ಹವ್ಯಾಸವೇ ಹೊರಟು ಹೋಗಿದೆ. ಈಗ ಟಿವಿ ಜತೆಗೆ ಮನುಷ್ಯನ ಭಾವನೆಗಳು ಕೂಡ ಮೂಲೆಗುಂಪಾಗಿದೆ. ಎಲ್ಲವೂ ಕೂಡ ಕಾಲಕ್ಕೆ ತಕ್ಕಂತೆ ವಿಷಯ – ವಿಚಾರಗಳು ನವೀನವಾಗಿ ಬದಲಾಗುತ್ತಿದೆ.
-ವಿದ್ಯಾ
ಎಂ.ಜಿ.ಎಂ., ಕಾಲೇಜು
ಉಡುಪಿ