ಅದೊಂದು ಕಾಲವಿತ್ತು ಚಳಿಗಾಲ, ಬೇಸಿಗೆಗಾಲ, ಮಳೆಗಾಲವೆಂಬ ಮೂರು ಕಾಲಗಳಿದ್ದವು. ಆದರೆ ಕಳೆದ ಒಂದೆರಡು ವರ್ಷಗಳಿಂದ ಯಾವ ಯಾವ ಕಾಲಗಳು ಯಾವಾಗ ಶುರುವಾಗುತ್ತವೆ ಮುಗಿಯುತ್ತವೆ ಎಂದೇ ತಿಳಿಯುತ್ತಿಲ್ಲ. ಯಾಕೋ ಈ ಬಾರಿ ಸೂರ್ಯದೇವ ನಮ್ಮ ಮೇಲೆ ಮುನಿಸಿಕೊಂಡಂತಿದೆ. ತನ್ನ ಸಂಗಡಿಗ ವರುಣ ದೇವನಿಗೆ ಕೆಲಸಕ್ಕೆ ಹಾಜರಾಗಲು ಅನುಮತಿಯೇ ಕೊಡುವುದಿಲ್ಲ ಎಂದು ಟೊಂಕ ಕಟ್ಟಿ ನಿಂತಂತಿದೆ.
ಅಯ್ಯೋ ಬಿಸಿಲ ಬೇಗೆ ತಾಳಲಾಗುತ್ತಿಲ್ಲ. ಮುಖ ತೋರಿಸಿ ಹೋದ ಮಳೆರಾಯ ಅಬ್ಟಾ ಎಂಥಾ ಮಳೆ ಎನ್ನುವುದರೊಳಗೆ ಮುಖ ತಿರುಗಿಸಿ ನಿಂತಾಗಿದೆ. ಕೆಲವೊಂದು ಕಡೆ ಆಗಲೇ ನೀರಿಗೂ ಹಾಹಾಕಾರ ಎದ್ದಿದೆ. ವರುಣದೇವನೇ ಎಲ್ಲಿಗೆ ಕಾಣೆಯಾಗಿದ್ದೀರಿ? ನಿಮ್ಮ ಇರುವಿಕೆಯನ್ನು ಒಮ್ಮೆ ನಮಗೆ ತೋರ್ಪಡಿಸುವಿರಾ ದಿನಕ್ಕೊಮ್ಮೆಯಾದರೂ ಬಂದು ನಮ್ಮನ್ನು ನೋಡಿ ಹೋಗಿ. ನಮ್ಮ ಮೇಲೆ ಯಾಕೆ ಇಷ್ಟು ಕೋಪ ನಿಮಗೆ?!
ನನಗ್ಯಾಕೋ ಈ ವರ್ಷ ಬೇಸಿಗೆಯಲ್ಲಿರಬೇಕಾದ ಬಿಸಿಲು- ಶಾಖ ನಮ್ಮನ್ನು ಬಿಟ್ಟು ಹೋಗುವ ಹಾಗೆ ಕಾಣಿಸುತ್ತಿಲ್ಲ. ಈ ಭೂಮಿ ದೋಸೆ ಮಾಡಲು ಸಿದ್ಧವಾದ ಖಾದ ಹಂಚಿನ ತರಹ ಆಗಿದೆ. ಹಂಚು ಕಾದಿದೆಯೋ ಎಂದು ನೋಡಲು ಹಂಚಿನ ಮೇಲೆ ನೀರು ಚಿಮಿಕಿಸುವ ಹಾಗೆ ವರುಣದೇವರು ಆಗಾಗ ಬಂದು ಹೋಗುತ್ತಿದ್ದಾರೆ ಅಷ್ಟೇ. ಜೊತೆಗೆ ಈ ಮಳೆ- ಬಿಸಿಲಿನ ಕಣ್ಣಾಮುಚ್ಚಾಲೆಯಲ್ಲಿ ಜನರ ಆರೋಗ್ಯದ ಸ್ಥಿತಿ ದೇವರಿಗೇ ಪ್ರೀತಿ.
ತೈಲದ ಬೆಲೆ ಗಗನಮುಖಿಯಾಗಿದೆ. ಇನ್ನು ನೀರಿನ ಬೆಲೆಯೂ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಭೂ ತಾಯಿಯ ಒಡಲನ್ನು ಬಗೆದು, ತೆಗೆಯುವಷ್ಟು ನೀರನ್ನು ತೆಗೆಯಬಹುದು ಅಷ್ಟೇ, ಇನ್ನೆಷ್ಟು ನೀರನ್ನು ತೆಗೆಯಬಹುದು ಹೇಳಿ ಭೂದೇವಿಯ ಒಡಲನ್ನು ತಂಪುಮಾಡಲು ವರುಣದೇವನಿಂದ ಮಾತ್ರ ಸಾಧ್ಯ. ಅವನು ಮನಸ್ಸು ಮಾಡಬೇಕು ಅಷ್ಟೇ. ಈ ವರುಣ ದೇವರೋ ಎಲ್ಲಿಗೆ ಕಾಣೆಯಾಗಿದ್ದಾನೆ ಎಂದು ತಿಳಿಯುತ್ತಿಲ್ಲ. ಅವನನ್ನು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ಘೋಷಿಸುವುದೊಂದು ಬಾಕಿ! ರಂಜಿತ್ ರೈ ಬಂಟ್ವಾಳ