ಇರುವೆ ಇರುವೆ ಎಲ್ಲಿರುವೆ? ಎಂದರೆ ಎಲ್ಲೆಲ್ಲೂ ನಾನಿರುವೆ ಎಂದು ಹೇಳುವ ಪುಟ್ಟ ಜೀವ. ಮನುಷ್ಯನಂತೆ ಸಂಘ ಜೀವಿಯಾಗಿದ್ದು, ತನ್ನ ಸಮುದಾಯದ ಒಳಿತಿಗಾಗಿ ಶಿಸ್ತಿನಿಂದ ದುಡಿಯುವ ಪ್ರಾಣಿಯೆಂದರೆ ಇರುವೆಯೊಂದೇ. ಜೀವಸಂಕುಲದಲ್ಲಿ ಮತ್ತೆ ಬೇರಾವ ಜೀವಿಯಿಂದಲೂ ಇಂತಹ ಒಗ್ಗಟ್ಟು ಕಾಣಸಿಗಲಾರದು.
ಮೇಲ್ನೋಟಕ್ಕೆ ಇವುಗಳ ವಾಸಸ್ಥಾನ ಒಂದು ಸಣ್ಣ ಗುಡ್ಡೆಯಂತೆ ಕಂಡರೂ, ನೆಲದಡಿಯಲ್ಲಿ ಇವುಗಳ ವಿಸ್ತಾರ ಮೀಟರ್, ಕಿಲೋಮೀರ್‌ಗಳಷ್ಟು ಹಬ್ಬಿರುತ್ತವೆ ಎಂದರೆ ನಂಬಲೇಬೇಕು. ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇರುವೆಗಳು ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತವೆ. ಪ್ರತ್ಯೇಕ ಕೋಣೆಗಳು, ಗ್ಯಾಲರಿಗಳ ನಿರ್ಮಾಣ ಮಾಡಿಕೊಂಡು ನಿರಂತರವಾಗಿ ತಮಗೆ ನಿಯೋಜಿಸಿದ ಕೆಲಸದಲ್ಲಿ ನಿರತರಾಗಿರುತ್ತವೆ.
ರಾಣಿ ಇರುವೆ ಈ ಸಾಮ್ರಾಜ್ಯದ ಕೇಂದ್ರ ಬಿಂದು. ಅವಳೊಬ್ಬಳೇ ಮುಂದಿನ ಪೀಳಿಗೆಗಾಗುವಷ್ಟು ಮೊಟ್ಟೆಯನ್ನು ಇಡುತ್ತಾಳೆ. ಈ ಮೊಟ್ಟೆಗಳನ್ನು ಕೆಲಸಗಾರರು ಹೊತ್ತೂಯ್ದು ಕಾಪಾಡಿಕೊಳ್ಳುತ್ತವೆ, ದಾದಿಯರು ಮೊಟ್ಟೆಗಳನ್ನು ಶುಚಿಗೊಳಿಸಿ, ಅವುಗಳ ಸಂಪೂರ್ಣ ಬೆಳವಣಿಗೆಗೆ ಶ್ರಮಿಸುತ್ತವೆ.
ಬೆಳೆದ ಮೊಟ್ಟೆಗಳನ್ನು ದಾದಿಗಳೇ ಕಕೂನ್ ಛೇಂಬರ್‌ಗೆ ವರ್ಗಾಯಿಸಿ ಅಲ್ಲೂ ಅವುಗಳ ಆರೈಕೆ ಮಾಡುತ್ತವೆ. ಮರಿ ಇರುವೆಗಳು ನಿದ್ರಾವಸ್ಥೆಯಲ್ಲಿರುವಾಗ ದಾದಿ ಇರುವೆಗಳು ಅವುಗಳನ್ನು ಗೂಡಿನ ಹೊರಭಾಗಕ್ಕೆ ಹೊತ್ತೂಯ್ಯುತ್ತವೆ. ಸೂರ್ಯನ ಶಾಖದಿಂದ ಕಕೂನ್‌ಗಳು ಒಡೆದು ಮರಿಗಳು ಹೊರ ಬರುತ್ತವೆ. ಹೊರ ಬಂದ ಅನಂತರ ತಮ್ಮ ತಮ್ಮ ಕೆಲಸಕ್ಕೆ ಹಾಜರ್. ಇಲ್ಲಿ ಸೋಂಬೇರಿಗಳು ಎಂಬ ಶಬ್ದವೇ ಇಲ್ಲ! ದಾದಿ ಇರುವೆಗಳು ಮರಿಗಳ ಶುಶ್ರೂಷೆ ಮಾಡಿದರೆ, ಸೈನಿಕ ಇರುವೆಗಳು ಗೂಡಿನ ಹೊರಭಾಗದಲ್ಲಿ ಕಾವಲು ಕಾಯುತ್ತವೆ. ಇನ್ನುಳಿದ ಇರುವೆಗಳು ಗೂಡನ್ನು ರಿಪೇರಿ ಮಾಡುವುದು, ಆಹಾರ ಸಂಗ್ರಹಿಸುವುದು ಹೀಗೆ ಸತತವಾಗಿ ತಮ್ಮನ್ನು ತೊಡಗಿಸಿಕೊಂಡಿರುತ್ತವೆ.
ಇರುವೆಗಳು ಶಿಸ್ತಿನ ಸಿಪಾಯಿಗಳು, ಇಲ್ಲಿ ಯಾರೊಬ್ಬರೂ ಸೋಂಬೇರಿಗಳಲ್ಲ. ತಮಗೆ ನಿಯೋಜಿಸಿದ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತವೆ. ತಮ್ಮ ಗುಂಪಿನ ಯಾವುದೇ ಇರುವೆ ಆರೋಗ್ಯ ತಪ್ಪಿದರೆ ಇರುವೆ ಶುಶ್ರೂಷೆ ಮಾಡುತ್ತವೆ. ಸತ್ತ ಇರುವೆಗಳನ್ನು ನೆಲದಲ್ಲಿ ಹುಗಿದು ಅದರ ಕೆಲಸವನ್ನು ಹಂಚಿಕೊಳ್ಳುತ್ತವೆ. ಇರುವೆಗಳು ಎಲ್ಲೇ ಹೋದರೂ, ಎಲ್ಲೇ ಬಂದರೂ ಒಂದು ಇನ್ನೊಂದಕ್ಕೆ “ನೀನೆಲ್ಲೊ ನಾನಲ್ಲೇ’ ಎಂದು ಹೇಳುತ್ತಾ ಒಂದಾಗಿಯೇ ಇರುತ್ತವೆ.
ಇನ್ನು ಯಾವುದಾದರೂಂದು ಇರುವೆ ಸತ್ತು ಹೋದರೆ ಅದನ್ನು ನೋಡಲು ಅದರ ಎಲ್ಲ ಕುಟುಂಬಸ್ಥ ಇರುವೆಗಳು ಬರುತ್ತವೆ. ಅವುಗಳನ್ನು ಹಾಗೆಯೇ ಬಿಡದೆ ಸತ್ತಿರುವ ಇರುವೆಯನ್ನು ಹೊತ್ತುಕೊಂಡು ಹೋಗುತ್ತವೆ.
ಇವೇನು, ಶವಸಂಸ್ಕಾರವನ್ನು ಮಾಡಿಬಿಡುವಂತೆ ಅನಿಸುತ್ತದೆ. ಇದನ್ನೆಲ್ಲ ನೋಡಿದರೆ ಒಗ್ಗಟ್ಟಿಗೆ ಇನ್ನೊಂದು ಹೆಸರೇ ಇರುವೆಗಳು ಎನ್ನಬಹುದು.
ಇರುವೆಗಳನ್ನು ನೋಡಿ ಕಲಿಯುವುದು ಬಹಳಷ್ಟಿದೆ. ಅವುಗಳ ಶಿಸ್ತು, ಒಗ್ಗಟ್ಟು ಮುಂತಾದ ಗುಣಗಳು ಮನುಷ್ಯರಲ್ಲಿ ಕಡಿಮೆ ಎನ್ನುವುದೇ ಬೇಸರದ ಸಂಗತಿ. ಇವುಗಳನ್ನೆಲ್ಲ ಬದುಕಿನಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಸುಂದರವಾಗಿರುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.
–
ದೀಕ್ಷಾ ಮಚ್ಚಂಡಿ
ವಿಜಯಪುರ