Advertisement

Pens: ಬಹುರೂಪದಲ್ಲಿ ಲಭ್ಯವಿರುವ ಬಹುಪಯೋಗಿ ಲೇಖನಿ

02:40 PM May 02, 2024 | Team Udayavani |

ಅಂದು ಕಾಲೇಜಿಗೆ ರಜೆ. ಬೇಗ ಬೇಗ ಕೆಲಸಗಳೆಲ್ಲ ಮುಗಿದು ಹೋದವು. ಸ್ವಲ್ಪ ಸಮಯಕ್ಕೇ ಸುಮ್ಮನೆ ಕುಳಿತು ಬೇಸರವಾಗಲು ಶುರುವಾಯಿತು. ಏನಪ್ಪ ಮಾಡೋದು ಎಂದು ಯೋಚನೆ ಮಾಡುತ್ತಾ ಕುಳಿತಿರುವಾಗ ಯಾವುದಾದರೂ ಲೇಖನ ಬರಿಯೋಣ ಎಂದು ಅಂದುಕೊಂಡೆ.

Advertisement

ರಟ್ಟಿನ ಮೇಲಿನ ದೂಳು ಜಾಡಿಸಿ, ಖಾಲಿ ಬಿಳಿ ಹಾಳೆಗಳನ್ನು ಜೋಡಿಸಿಕೊಂಡು ಬರೆಯಲು ಪೆನ್ನು ಎತ್ತುಕೊಂಡರೆ ಯಾವ ವಿಷಯದ ಬಗ್ಗೆ ಬರಿಯಬೇಕು ಎಂಬ ಗೊಂದಲ. ತಲೆಗೆ ತೋಚಲೆ ಇಲ್ಲ ಥತ್‌ ತೇರಿ…. ಮೂಡೆಲ್ಲಾ ಹಾಳಾಯಿತು.

ಅದೇ ಬೇಸರದಲ್ಲಿ ರೂಮ್‌ಮೇಟ್‌ ಹತ್ತಿರ ನನಗೊಂದು ಪೆನ್ನು ಬೇಕಾಗಿತ್ತು. ನನ್ನ ಪೆನ್ನು ಸರಿಯಾಗಿ ಬರೆಯುತ್ತಿಲ್ಲ ಎಂದು ಗೊಣಗಿದೆ. ಅವರು ಪಟ್ಟನೆ ನಾಲ್ಕು ಪೆನ್ನುಗಳನ್ನು ನನ್ನೆದುರಿಗೆ ತಂದಿಟ್ಟರು. ಅರೆ… ಒಂದು ತನ್ನಿ ಎಂದರೆ ನಾಲ್ಕು ಕೊಡುತ್ತೀರಲ್ಲಾ ಅಕ್ಕ ಎಂದೆ. ಇನ್ನೂ ನಾಲ್ಕು ಬೇಕಾದರೂ ಕೊಡುತ್ತೇನೆ, ನೀನು ಬರೀತಾ ಇರು ಎಂದರು.

ನನ್ನ ಕೈಯಲ್ಲಿದ್ದ ಪೆನ್ನು ನನ್ನನ್ನು ನೋಡಿ ನಗುತ್ತಿದ್ದಂತೆ ಭಾಸವಾಗುತ್ತಿದ್ದಂತೆ ನನಗೆ ಬಾಲ್ಯದ ನೆನಪಾಯಿತು. ರವಿವಾರ ಬಂದರೆ ಸಾಕು ಅಪ್ಪ ಸಂತೆಯಿಂದ ಬರುವಾಗ ಮೂರು ರೂಪಾಯಿಯ ಬಣ್ಣಬಣ್ಣದ ಪೆನ್ನುಗಳನ್ನು ತರುತ್ತಿದ್ದರು. ಅಪ್ಪ ಜೇಬಿನಿಂದ ಅದನ್ನು ತೆಗೆದು ಕೊಡುವಾಗ ನಮ್ಮ ಕಣ್ಣುಗಳು ಹಿರಿಹಿರಿ ಹಿಗ್ಗುತ್ತಿದ್ದ ನೆನಪು ಥಟ್ಟನೆ ಕಣ್ಣ ಮುಂದೆ ಬಂದು ಹೋಯಿತು.

ನಾವು ಸಣ್ಣವರಿದ್ದಾಗ ಪೆನ್ನಿನ ಮುಖ ನೋಡಬೇಕಾದರೆ ಐದನೇ ತರಗತಿಗೆ ತಲುಪಬೇಕಿತ್ತು. ಅಲ್ಲಿಯವರೆಗೆ ಕರಿಯ ಪಾಟಿಯೆ ನಮ್ಮ ನೋಟ್‌ ಬುಕ್‌ ಮತ್ತು ಬಿಳಿಯ ಚಾಕ್‌ ನಮ್ಮ ಪೆನ್ನು. ಅದರಲ್ಲೂ ಪಾಟಿ ಮೇಲೆ ಬರೆಯಲು ಹೊಸ ಉದ್ದನೆಯ ಚಾಕ್‌ ಸಿಕ್ಕರೆ ಸಾಕು ಆ ದಿನ ಹಬ್ಬವೊ ಹಬ್ಬ.

Advertisement

ಹೀಗೆ ಬಾಲ್ಯದ ಸವಿ ನೆನಪಿನಲ್ಲಿ ಕಳೆದು ಹೋಗಿದ್ದ ನಾನು ಮತ್ತೆ ಮರಳಿ  ಬಂದೆ. ಇವಾಗ ಮತ್ತೆ ಲೇಖನ ಯಾವ ವಿಷಯದ ಬಗ್ಗೆ ಬರೀಬೇಕು ಎಂದು ಯೋಚನೆ ಶುರುವಾದಾಗ ತಲೆಗೆ ಥಟ್ಟನೆ ಬಂದ ವಿಷಯ ಲೇಖನಿ.

ಏನಿದು ಲೇಖನಿ ಎಂದರೆ ಎಂದು ಯೋಚನೆ ಮಾಡುತ್ತಿದ್ದೀರಾ…ಇಷ್ಟರವರೆಗೆ ಹೇಳಿದ್ದು ಇದರ ಬಗ್ಗೆಯೇ. ಹೌದು ಪೆನ್ನಿಗೆ ನಾವು ಲೇಖನಿ ಅಂತ ಕರೀತೀವಿ. ನಾನೇಕೆ ನನ್ನ ಬಾಲ್ಯದ ಸವಿನೆನಪಿನಲ್ಲಿ ಒಂದಾಗಿರುವ ಈ ಪೆನ್ನಿನ ಮೇಲೆ ಬರೆಯಬಾರದು ಅಂದುಕೊಂಡು, ಒಂದು ಕಡೆ ಕುಳಿತುಕೊಂಡು ನನ್ನ ಲೇಖನಿಯನ್ನು ತೆಗೆದುಕೊಂಡು ಬರೆಯಲು ಆರಂಭಿಸಿದೆ.

ಇಂದಿನ ಈ ಆಧುನಿಕ ಯುಗದಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಎಲ್ಲವೂ ಸುಲಭವಾಗಿ ಸಾಧ್ಯವಾಗುತ್ತಿದೆ. ಆದರೆ ಹಿಂದಿನ ಕಾಲ ಹಾಗಿರಲಿಲ್ಲ. ನಾವು ಈಗ ಪೆನ್ನಿನ ಮೂಲಕ ಬರೆಯುತ್ತೇವೆ. ಆದರೆ ಹಿಂದೆ ನಮ್ಮ ಹಿರಿಯರು ಹಕ್ಕಿಯ ಗರಿಯ ಮೂಲಕ ಅಕ್ಷರಗಳನ್ನು ಬರೆಯುತ್ತಿದ್ದರು. ಕಾಡಿಗೆಯನ್ನು ಉಪಯೋಗಿಸಿ ತಮ್ಮ ಉಗುರಿನ ಸಹಾಯದಿಂದ ಪ್ರೇಮಪತ್ರ ಬರೆಯುತ್ತಿದ್ದರು. ಜಾನಪದ ಕಥೆಗಳಲ್ಲಿ ಇಂತಹ ಉದಾಹರಣೆಗಳನ್ನು ಹೇರಳವಾಗಿ ನೋಡಬಹುದು. ಇದ್ದಲಿಯನ್ನು ಬಳಸಿಕೊಂಡು ಗೋಡೆಯ ಮೇಲೆ ಬರೆಯುತ್ತಿದ್ದರು.

ಆದರೆ ಈಗ ಪೆನ್ನುಗಳಲ್ಲೇ ಹಲವು ವಿಧಗಳು ಲಭ್ಯವಿವೆ. ಶಾಯಿ ಪೆನ್ನು, ಬಾಲ್‌ ಪೆನ್ನು, ಜೆಲ್‌ ಪೆನ್ನು, ಗುಂಡಿ ಅದುಮಿದರೆ ನಿಬ್ಬು ಹೊರಗೆ ಬರುವ ಪೆನ್ನುಗಳು, ಅದರೊಳಗೆ ಬಗೆ ಬಗೆಯ ಶಾಯಿಗಳು. ಕೆಂಪು, ನೀಲಿ, ಕಪ್ಪು, ಹಸುರು ಹೀಗೆ ಹತ್ತು ಹಲವಾರು ವಿಧಗಳು.

ವೈವಿಧ್ಯಮಯವಾದ ಶೈನಿಂಗ್‌ ಪೆನ್ನುಗಳು, ಮಾರ್ಕರ್‌ಗಳು, ಪೆನ್ಸಿಲ್‌ ಪೆನ್ನುಗಳು ಸಿಗುತ್ತವೆ. ಮೂರು ರೂಪಾಯಿಯಿಂದ ಸಾವಿರಕ್ಕೂ ಹೆಚ್ಚು ಬೆಲೆಯ ಪೆನ್ನುಗಳು ಈಗ ಮಾರುಕಟ್ಟೆಯಲ್ಲಿವೆ. ಪೆನ್ನು ಎಲ್ಲೆಂದರಲ್ಲಿ ಅಂದರೆ ವಿದ್ಯಾರ್ಥಿಗಳ ಚೀಲದಲ್ಲಿ, ದೊಡ್ಡವರ ಜೇಬುಗಳಲ್ಲಿ, ಹೆಂಗಸರ ಪರ್ಸುಗಳಲ್ಲಿ ಸಾಮಾನ್ಯವಾಗಿ ಪೆನ್ನು ಕುಳಿತಿರುತ್ತದೆ. ಅದರಲ್ಲಿ ಶಾಯಿ ಪೆನ್ನಿಗೆ ಬಾಯಿ ಮುಚ್ಚದಿದ್ದರೆ ಕಿಸೆ, ಚೀಲ, ಡ್ರೆಸ್ಸು ಎಲ್ಲೆಂದರಲ್ಲಿ ವಾಂತಿ ಮಾಡಿಬಿಡುತ್ತದೆ.

ಇಂದು ಎಷ್ಟೊ ಅನಕ್ಷರಸ್ಥರು ಕೂಡ ತಂತ್ರಜ್ಞಾನದ ಮೂಲಕ ಸ್ಕ್ರೀನ್‌ಗಳ ಮೇಲೆ ಅಕ್ಷರಗಳನ್ನು ಮೂಡಿಸುತ್ತಾರೆ. ಹೋಗಲಿ, ಏನೇ ಆದರೂ ಕೊನೆಗೆ ತಮ್ಮ ಸಹಿ ಹಾಕೋದಕ್ಕಾದರೂ ಪೆನ್ನನ್ನು ಬಳಸಬೇಕು ಅಲ್ಲವೇ? ಇಂದಿನ ಯುಗದಲ್ಲಿ ಪೆನ್ನನ್ನು ಬಳಸದ ಯಾವ ಒಬ್ಬ ವ್ಯಕ್ತಿಯೂ ಇರಲಾರ. ಏಕೆಂದರೆ ಪೆನ್ನು ನಮಗೆ ಅಷ್ಟೊಂದು ಸಹಕಾರಿಯಾಗಿದೆ.

ಪೆನ್ನು ನಮಗೆ ಸ್ನೇಹಿತರಂತೆ. ಅದನ್ನು ಎಚ್ಚರಿಕೆಯಿಂದ ಬಳಸಿದರೆ ನಮಗೆ ಎಂದಿಗೂ ಸಹಕಾರಿಯಾಗಿರುತ್ತದೆ.

 -ಶಿಲ್ಪ ಪಾವರ

ವಿಜಯಪುರ, ಬಾದಾಮಿ

Advertisement

Udayavani is now on Telegram. Click here to join our channel and stay updated with the latest news.

Next