Advertisement

Tulsi puja; ತುಳಸಿ ಮಹತ್ವ ಸಾರುವ ಉತ್ಥಾನ ದ್ವಾದಶಿ

01:31 AM Nov 24, 2023 | Team Udayavani |

ಬಹುಪಯೋಗೀ ತುಳಸಿಯು ಮನುಷ್ಯನ ಪಾರಮಾರ್ಥಿಕ ಹಾಗೂ ಲೌಕಿಕ ಬದುಕಿನಲ್ಲಿ ಅತೀ ಪ್ರಾಮುಖ್ಯ ಪಾತ್ರವನ್ನು ವಹಿಸುತ್ತದೆ. ಪವಿತ್ರ ತುಳಸಿ ಎಂದೇ ಅದಕ್ಕೆ ವಿಶೇಷಣ. ತುಳಸಿಗೆ ಇತರ ಹೆಸರುಗಳು ಮಂಜರಿ, ಕೃಷ್ಣತುಳಸಿ, ತ್ರಿತ್ತವು ಇತ್ಯಾದಿ. ವೃಂದ, ವೃಂದಾವನೀ, ವಿಶ್ವಪಾವನಿ, ವಿಶ್ವಪೂಜಿತ, ತುಳಸಿ, ಪುಷ್ಪಸಾರ, ನಂದಿನಿ, ಕೃಷ್ಣಜೀವನಿ ಎಂಬ ಅಷ್ಟನಾಮಗಳೊಂದಿಗೆ ತುಳಸಿ ಸಂಕೀರ್ತನೆ ಅತೀ ಪ್ರಸಿದ್ಧ. ರಾಮತುಳಸಿ, ಕೃಷ್ಣ ತುಳಸಿ ಅಥವಾ ಶ್ಯಾಮ ತುಳಸಿ, ವನ ತುಳಸಿ, ಕಾಳಿ ತುಳಸಿ ಇತರ ಪ್ರಭೇದಗಳು. ಹಿಂದೂ ಸಂಸ್ಕೃತಿಯಲ್ಲಿ ತುಳಸಿ ಗಿಡವನ್ನು ಭಕ್ತಿಯಿಂದ ಪೂಜಿಸುತ್ತಾರೆ. ಗುಣದಲ್ಲಿ ತುಲನೆ ಮಾಡಲು ಸಾಧ್ಯವಾಗದಿರುವ ಗಿಡವೇ ತುಳಸಿ.

Advertisement

ಕಾರ್ತಿಕ ಮಾಸದ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ. ಇದು ತುಳಸಿ ಪೂಜೆ ಎಂದೇ ಪ್ರಸಿದ್ಧ. ಇಂದು ಕೃಷ್ಣನ ದಿವಸ, ತುಲಸೀ ಮತ್ತು ಶ್ರೀಮನ್ನಾ ರಾಯಣನ ವಿವಾಹದ ದಿನವೂ ಹೌದು. ಈ ದಿನದಂದು ತುಳಸಿ ಕಟ್ಟೆಯನ್ನು ರಂಗೋಲಿ, ಹೂವು, ಹಣ್ಣು, ಮಾವಿನ ಎಲೆಗಳಿಂದ ಅಲಂ ಕರಿಸಿ ಮದುವೆ ಮಂಟಪದ ಮಾದರಿಯಲ್ಲಿ ಸಿಂಗರಿಸಲಾಗುತ್ತದೆ. ಮಂಟಪದ ಸುತ್ತಲೂ ದೀಪಗಳನ್ನು ಬೆಳಗಲಾಗುತ್ತದೆ. ಇದಕ್ಕೆ ತುಳಸಿ ವೃಂದಾವನ ಎಂದು ಕರೆಯ ಲಾಗುತ್ತದೆ. ತುಳಸಿ ಗಿಡದ ಹತ್ತಿರ ಧಾತ್ರೀ (ನೆಲ್ಲಿಕಾಯಿ) ಮತ್ತು ಹುಣಸೆ ವೃಕ್ಷದ ಕೊಂಬೆಯನ್ನಿಟ್ಟು ಅದರ ಮುಂದೆ ಶ್ರೀಕೃಷ್ಣನ ಪ್ರತಿಮೆ ಅಥವಾ ಸಾಲಿಗ್ರಾಮಗಳನ್ನಿಟ್ಟು ಪೂಜೆ ಮಾಡುತ್ತಾರೆ. ಶ್ರೀಕೃಷ್ಣನ ಪ್ರತಿಮೆ ಅಥವಾ ಸಾಲಿಗ್ರಾಮ ಮತ್ತು ತುಳಸಿಗೆ ಹತ್ತಿಯ ಹಾರವನ್ನು ತೊಡಿಸಿ ವಿವಾಹ ಶಾಸ್ತ್ರವನ್ನು ನೆರವೇರಿಸಲಾಗುತ್ತದೆ.

ಚಾತುರ್ಮಾಸವು ಮುಗಿದು, ವ್ರತಗಳ ಸಮಾಪನವಾಗುವುದು ಕೂಡ ಈ ಸಮಯದಲ್ಲೇ. ಶ್ರೀಹರಿಯು ನಾಲ್ಕು ತಿಂಗಳ ಯೋಗನಿದ್ರೆಯ ಬಳಿಕ ಎಚ್ಚರ ಗೊಳ್ಳುವ ಪರ್ವಕಾಲ. ಕ್ಷೀರಾಬ್ಧಿ ವ್ರತ ವೆಂದೂ ಈ ದಿನವನ್ನು ಆಚರಿಸಲಾಗುತ್ತದೆ.

ಆಧ್ಯಾತ್ಮಿಕ ಮಹತ್ವ: ಕಾರ್ತಿಕ ಮಾಸ ತುಳಸಿ ಪ್ರತಿಷ್ಠಾಪನೆಗೆ ಪರ್ವ ಕಾಲ. ಎಷ್ಟು ತುಳಸಿ ಗಿಡಗಳನ್ನು ಬೆಳೆಸುತ್ತಿಯೋ ಅಷ್ಟು ಜನ್ಮಗಳಲ್ಲಿ ಎಸಗಿದ ಪಾಪಗಳೆಲ್ಲವೂ ನಾಶವಾಗುತ್ತವೆ ಎಂದು ಸ್ಕಂದಪುರಾಣದ ಉಲ್ಲೇಖ. ಎಲ್ಲಿ ತುಳಸಿ ವನವಿರುವುದೋ ಅದುವೇ ಒಂದು ತೀರ್ಥಕ್ಷೇತ್ರ ಎಂದು ಪದ್ಮ ಪುರಾಣದ ವರ್ಣನೆ. ಯಮಭಟರು ಆ ಮನೆಗೆ ಪ್ರವೇಶಿಸುವುದಿಲ್ಲ. ತುಳಸಿ ಬೆಳೆದ ಮಣ್ಣಿನಿಂದ ಸಾರಿಸಲ್ಪಟ್ಟ ಮನೆಗೆ ಕಾಯಿಲೆ ಬರದು. ತುಳಸಿ ಗಂಧವಿರುವ ಗಾಳಿ ಆರೋಗ್ಯಕ್ಕೆ ಉತ್ತಮ. ತುಳಸಿಯಲ್ಲಿ ತ್ರಿಮೂರ್ತಿಗಳ ಸನ್ನಿಧಾನವಿದೆ. ಪುಷ್ಕರ ಮತ್ತು ಗಂಗಾಸ್ನಾನದ ಪುಣ್ಯವು ಲಭಿಸುತ್ತದೆ.

ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವ ದೇವತಾಃ|
ಯದಾಗ್ರೇ ಸರ್ವವೇದಾಶ್ಚ ತುಲಸೀ ತ್ವಾಂ ನಮಾಮ್ಯಹಂ ||
– ಎಲ್ಲ ತೀರ್ಥಗಳೂ ತುಳಸೀ ಗಿಡದ ಮೂಲದಲ್ಲಿ, ಎಲ್ಲ ದೇವತೆಗಳು ಅದರ ಕಾಂಡದಲ್ಲಿ, ಎಲ್ಲ ವೇದಗಳು ತುದಿ ಭಾಗದಲ್ಲಿ ಸನ್ನಿಹಿತವಾಗಿದೆ. ತುಳಸಿ ದರ್ಶನದಿಂದ ಎಲ್ಲ ಪಾಪಗಳೂ ನಿವಾರಣೆಯಾಗುತ್ತವೆ. ದೇಹ ಶುದ್ಧಿಗೆ ಅದರ ಸ್ಪರ್ಶ, ನಮಸ್ಕಾರದಿಂದ ಕಾಯಿಲೆ ದೂರ, ತುಳಸಿಗೆ ನೀರು ಹಾಕುವುದರಿಂದ ಯಮನ ಪಾಶದಿಂದ ಮುಕ್ತಿ, ತುಳಸಿ ಬೆಳೆಸುವುದರಿಂದ ಹರಿಭಕ್ತಿಯ ಸಂಪಾದನೆ, ಶ್ರೀಹರಿಗೆ ತುಳಸಿ ಯನ್ನು ನೀಡುವುದರಿಂದ ಮೋಕ್ಷ ಪ್ರಾಪ್ತಿ. ಸರ್ವದೇವತೆಗಳ ಸನ್ನಿಧಾನವಿರುವುದರಿಂದ ಮತ್ತದರ ದಿವೌÂಷಧೀ ಗುಣಗಳಿಂದ ಮನೆಯನ್ನೂ ಮನೆಮಂದಿಯನ್ನೂ ತುಳಸಿ ಕಾಪಾಡುತ್ತದೆ.

Advertisement

ಪ್ರಸೀದ ತುಳಸೀ ದೇವೀ
ಪ್ರಸೀದ ಹರಿವಲ್ಲಭೇ.. ..
ತುಳಸೀ ತ್ವಾಂ ನಮಾಮ್ಯಹಮ್‌ ||
ತುಳಸಿಯ ಲೌಕಿಕ/ ಔಷಧೀಯ ಲಾಭಗಳು
ತುಳಸಿ ಒಂದು ವಿಶಿಷ್ಟ ಗಿಡಮೂಲಿಕೆ. ವಿಶೇಷವಾಗಿ ಶಾಸೋಚ್ವಾಸ, ಜೀರ್ಣಕ್ರಿಯೆ ಮತ್ತು ಚರ್ಮದ ವ್ಯಾಧಿಗಳಿಗೆ ಉಪ ಶಮನಕಾರೀ ಔಷಧ. ಅದು ಟ್ಯೂಮರ್‌ ನಿವಾರಕ ಔಷಧವೆಂದು ಆಯು ರ್ವೇದವು ಗುರುತಿಸಿದೆ. ತುಳಸಿಯು ಇಮ್ಯುನೋಮೋಡ್ಯುಲೇಟರ್‌, ಸೈಟೋ ಪ್ರೊಟೆಕ್ಟಿವ್‌ ಮತ್ತು ಕ್ಯಾನ್ಸರ್‌ ನಿವಾರಕ ಪದಾರ್ಥವೆಂದು ಪ್ರಯೋಗಗಳು ದೃಢಪಡಿಸಿವೆ. ತುಳಸಿಯಲ್ಲಿ ವಿಟಮಿನ್‌ ಸಿ ಇರುವುದರಿಂದ ಹೃದಯ ಸಂಬಂಧೀ ವ್ಯಾಧಿಗಳು ದೂರವಾಗುತ್ತವೆ. ರಕ್ತದಲ್ಲಿ ಕೊಬ್ಬಿನಂಶವನ್ನು ಹತೋಟಿಯಲ್ಲಿಡುತ್ತದೆ. ವಿಟಮಿನ್‌ ಸಿ ಮತ್ತು ಎಯಿಂದ ಚರ್ಮವನ್ನು ರಕ್ಷಿಸುತ್ತದೆ. ತುಳಸಿಯಲ್ಲಿ ಅಸೆಟಿಕ್‌ ಆಮ್ಲ ವಿರುವುದರಿಂದ ಶರೀರದಲ್ಲಿನ ಯೂರಿಕ್‌ ಆಮ್ಲ ಮಟ್ಟವನ್ನು ಕಡಿಮೆಗೊಳಿಸುವ ಮೂಲಕ ಕಿಡ್ನಿಸ್ಟೋನ್‌ಗೆ ಉತ್ತಮ ಔಷಧ. ತಲೆನೋವು, ಜ್ವರ, ಕಣ್ಣಿನ ಆರೋಗ್ಯ, ಮೌಖೀಕ ಆರೋಗ್ಯ, ಶಾಸೋಚ್ವಾಸ ಸಮಸ್ಯೆ ಗಳ ನಿವಾರಣೆಗೆ ಉತ್ತಮ ಔಷಧ. ತುಳಸಿ ಯಲ್ಲಿ ವಿಟಮಿನ್‌ ಕೆ ಯಿಂದ ಎಲುಬಿನ ಮತ್ತು ಹೃದಯದ ಆರೋಗ್ಯವು ಕಾಪಾ ಡಲ್ಪಡುತ್ತವೆ. ತುಳಸಿ ಬಳಕೆಯಿಂದ ಅಸ್ತಮಾ, ಬ್ರೋಂಕೈಟಿಸ್‌, ಶೀತ, ಕೆಮ್ಮು, ಫ್ಲೂ, ಸೈನಸೈಟಿಸ್‌, ರಕ್ತದೊತ್ತಡ, ಕೊಬ್ಬು, ಅಜೀ ರ್ಣ, ಅಲ್ಸರ್‌, ಸಕ್ಕರೆ ಕಾಯಿಲೆ, ಸಂಧಿನೋವು, ಅರ್ಥರೈಟಿಸ್‌, ಮಲೇರಿಯಾ ಮುಂತಾದ ಕಾಯಿಲೆಗಳನ್ನು ಗುಣ ಪಡಿಸಬಹುದು.ತುಳಸಿಯು ಮಾನಸಿಕ ಒತ್ತಡ ಮತ್ತು ನರಮಂಡಲ ಸಂಬಂಧೀ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಅಲ್ಲದೆ ಅನೇಕ ಮನೆಮದ್ದುಗಳಲ್ಲಿ ಕೂಡ ತುಳಸಿಯನ್ನು ಬಳಸುತ್ತಾರೆ.

ಜಲಂಚಾರು ರಘುಪತಿ ತಂತ್ರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next