ಡೆಹ್ರಾಡೂನ್: ಭಾನುವಾರ ಮುಂಜಾನೆ ಉತ್ತರಕಾಶಿ ಜಿಲ್ಲೆಯ ಬ್ರಹ್ಮಖಾಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಸುರಂಗವೊಂದು ಕುಸಿದು ಬಿದ್ದ ಪರಿಣಾಮ ಅದರ ಒಳಗೆ ಸಿಕ್ಕಿಬಿದ್ದ ಸುಮಾರು ನಲ್ವತ್ತು ಮಂದಿ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ಮಾತುಕತೆ ನಡೆಸಿ ರಕ್ಷಣಾ ಕಾರ್ಯಾಚರಣೆಯ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಸುರಂಗದಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರ ರಕ್ಷಣೆಗೆ ರಕ್ಷಣಾ ತಂಡಗಳು ಹಗಳಿರುಳು ಕಾರ್ಯಾಚರಣೆ ನಡೆಸುತ್ತಿದ್ದು ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ ಅಗತ್ಯವಿರುವ ಆಮ್ಲಜನಕವನ್ನು ಪೈಪ್ ಮೂಲಕ ಸರಬರಾಜು ಮಾಡಲಾಗುತ್ತಿದೆ ಎನ್ನಲಾಗಿದ್ದು. ಸುರಂಗದೊಳಗೆ ಇರುವ ಆಕ್ಸಿಜನ್ ಪ್ರಮಾಣ ಕೇವಲ 10 ತಾಸುಗಳಿಗೆ ಮಾತ್ರ ಸಾಲುವಷ್ಟಿದ್ದರಿಂದ ಸಾಧ್ಯವಾದಷ್ಟೂ ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಬೇಕಾದ ಅನಿವಾರ್ಯತೆಯಲ್ಲಿ ಎಸ್‌ಡಿಆರ್‌ಎಫ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೂಡ ಮುಖ್ಯಮಂತ್ರಿ ಧಾಮಿ ಅವರೊಂದಿಗೆ ಮಾತನಾಡಿದ್ದಾರೆ.
ಸುರಂಗದೊಳಗೆ ಸಿಲುಕಿರುವ ಎಲ್ಲಾ 40 ಜನರನ್ನು ಮಂಗಳವಾರ ಸಂಜೆಯೊಳಗೆ ರಕ್ಷಿಸುವ ನಿರೀಕ್ಷೆಯಿದೆ ಎಂದು ಎಸ್ಪಿ ಅರ್ಪಣ್ ಯದುವಂಶಿ ಸುದ್ದಿ ಸಂಸ್ಥೆ ಎ ಎನ್ಐ ಗೆ ತಿಳಿಸಿದ್ದಾರೆ. 900 ಎಂಎಂ ಪೈಪ್‌ಗಳನ್ನು ತುಂಬಿದ ಟ್ರಕ್‌ಗಳು ಸಿಲ್ಕ್ಯಾರಾ ತಲುಪಿದ್ದು, ಒಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.
ಸಿಲ್ಕ್ಯಾರಾ ಸುರಂಗದ ಭಾಗದಲ್ಲಿ ಮಣ್ಣು ಕುಸಿಯುವುದನ್ನು ತಡೆಗಟ್ಟಿ ಬಳಿಕ ಉಕ್ಕಿನ ಪೈಪ್‌ಗಳನ್ನು ಅಳವಡಿಸುವ ಮೂಲಕ ಸುರಂಗದೊಳಗೆ ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸುವ ಕಾರ್ಯವನ್ನು ತಂಡ ನಡೆಸುತ್ತಿದೆ ಎಂದು ಉತ್ತರಾಖಂಡ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Viral Video: ಬೈಕ್‌ನಲ್ಲಿ ಪಟಾಕಿ ಇಟ್ಟು ವೀಲ್ಹಿಂಗ್; ಪುಂಡಾಟ ಮೆರೆದಾತ ಅರೆಸ್ಟ್