ಉಡುಪಿ: ಸಾಹಿತಿ ಎಸ್.ಎಲ್. ಭೈರಪ್ಪ ಅವರ “ಉತ್ತರ ಕಾಂಡ’ ಕಾದಂಬರಿ ಮುಂದಿನ ದಿನಗಳಲ್ಲಿ ಯಕ್ಷಗಾನ ಅರ್ಥದಾರಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ| ಎಂ.ಎಲ್. ಸಾಮಗ ಅಭಿ ಪ್ರಾಯಪಟ್ಟರು. ಎಸ್.ಎಲ್. ಭೈರಪ್ಪ ಅವರ “ಉತ್ತರಕಾಂಡ’ ಕಾದಂಬರಿ ಕುರಿತು ರಥಬೀದಿ ಗೆಳೆಯರು, ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ ಎಂಜಿಎಂ ಕಾಲೇಜಿನ ಗೋವಿಂದ ಪೈ ಸಂಶೋಧನ ಕೇಂದ್ರದ ಧ್ವನ್ಯಾಲೋಕದಲ್ಲಿ ಶನಿವಾರ ಆಯೋಜಿಸಿದ “ಸಮೀಕ್ಷೆ-ಸಂವಾದ’ದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದು ಕಾವ್ಯವೋ, ಸ್ವರಚಿತ ವಿಮರ್ಶೆಯೋ ಎಂಬಂತೆ ಭೈರಪ್ಪನವರು ವಾಸ್ತವ ನೆಲೆಯಲ್ಲಿ ಚಿಂತನೆ ನಡೆಸಿದ್ದಾರೆ. ಕಾವ್ಯ, ಕಾದಂಬರಿಗಳಲ್ಲಿರುವಂತೆ ಅನೇಕ ಸಂಕೇತಗಳನ್ನು ಇಲ್ಲಿ ಕಾಣಬಹುದು. ಯಕ್ಷಗಾನ ಕಲಾವಿದರು ಕಾಲಕಾಲಕ್ಕೆ ಆಕರ ಗ್ರಂಥಗಳಿಂದ ಪ್ರಭಾವಿತರಾಗುವಂತೆ ಈ ಕಾದಂಬರಿಯೂ ಪರಿಣಾಮ ಬೀರಬಹುದು ಎಂದರು.
ಇಷ್ಟವಾಗದ ಕಾದಂಬರಿ ಕಾಲಕ್ಕನುಸಾರವಾಗಿ ರಾಮಾಯಣಕ್ಕೆ ಹೊಸ ಹೊಸ ವಿಶ್ಲೇಷಣಾ ಗ್ರಂಥಗಳು ಬಂದಿವೆ. ಈಗ ಸ್ತ್ರೀವಾದ ಪ್ರಸ್ತುತವಿರುವುದರಿಂದ ಭೈರಪ್ಪ ನವರು ಸೀತೆಗೆ ಅನ್ಯಾಯವಾಗಿದೆ ಎಂದು ಕಥೆ ಹೆಣೆದಿದ್ದಾರೆ. ಪೋಲಂಕಿ ರಾಮಮೂರ್ತಿಯವರೂ ಬೇರೆ ತೆರನಾಗಿ ಬರೆದರು. ಇದೇ ರೀತಿ ಕವಿ ಮುದ್ದಣನೂ ಮನೋರಮೆ ಮೂಲಕ
ಚಿತ್ರೀಕರಿಸಿದ್ದ. ನನಗೆ ಕಾದಂಬರಿ ಇಷ್ಟವಾಗಲಿಲ್ಲ ಎಂದು ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ| ಮಹೇಶ್ವರಿ ಅಭಿಪ್ರಾಯಪಟ್ಟರು.
ಸೀತೆ ಭೂಮಿ ಪುತ್ರಿಯಾದ ಕಾರಣ ಕೃಷಿ ಕಾಯಕದಲ್ಲಿ ತೊಡಗಿರುವುದು, ರಾಮನಿಗೆ ವಚನಪಾಲನೆ, ಧರ್ಮ ಮಾರ್ಗವೇ ತನಗಿಂತ ಹೆಚ್ಚು ಇಷ್ಟ ಎಂದು ಸೀತೆ ಹೇಳುವುದು, ಶಬರಿ-ಗುಹನಂತಹವರಿಗೆ ಆದರ್ಶವಾದ ರಾಮ ತನಗೆ ಮಾತ್ರ ನ್ಯಾಯ ಕೊಡಲಿಲ್ಲ ಎಂಬ ಮಾತುಗಳನ್ನು ಭೈರಪ್ಪ ಹೆಣೆದಿದ್ದಾರೆ ಎಂದರು. ಇಷ್ಟವಾದ ಕಾದಂಬರಿ “ಕವಲು’ ಕಾದಂಬರಿ ಬಳಿಕ ಭೈರಪ್ಪರ ಕಾದಂಬರಿಯನ್ನು ಓದಲೇ ಬಾರದೆಂದುಕೊಂಡಿದ್ದೆ. ಆದರೆ ಇದನ್ನು ಓದಿದ ಬಳಿಕ ನನಗೆ ಈ ಕಾದಂಬರಿ ಬಹಳ ಇಷ್ಟವಾಗಿದೆ. ಸ್ತ್ರೀ ಅಂತಃಕರಣವನ್ನು ಚೆನ್ನಾಗಿ ನಿರೂಪಿಸಿದ್ದಾರೆ ಎಂದು ತೆಂಕನಿಡಿಯೂರು ಕಾಲೇಜಿನ ಪ್ರಾಧ್ಯಾಪಕಿ ಡಾ| ನಿಕೇತನ ಹೇಳಿದರು. ರಥಬೀದಿ ಗೆಳೆಯರು ಅಧ್ಯಕ್ಷ ಪ್ರೊ| ಮುರಳೀಧರ ಉಪಾಧ್ಯ ಸ್ವಾಗತಿಸಿ ಪ್ರೊ| ಸುಬ್ರಹ್ಮಣ್ಯ ಜೋಷಿ ವಂದಿಸಿದರು. ಜಿ.ಪಿ. ಪ್ರಭಾಕರ ಕಾರ್ಯಕ್ರಮ ನಿರ್ವಹಿಸಿದರು.