ಡೆಹ್ರಾಡೂನ್ : ಹರಿದ ಜೀನ್ಸ್ ಧರಿಸಬೇಡಿ ಎಂದಿದ್ದ ಉತ್ತರಾಖಂಡ್ ಸಿಎಂ ತಿರತ್ ಸಿಂಗ್ ರಾವತ್ ಕೊನೆಗೂ ಕ್ಷಮೆ ಕೋರಿದ್ದಾರೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮೆ ಇರಲಿ ಎಂದಿದ್ದಾರೆ.
ಸಿಎಂ ಅವರು ಇತ್ತೀಚಿಗೆ ಯುವತಿಯರು ಹರಿದ ಜೀನ್ಸ್ ( ಒಂದು ಬಗೆಯ ಫ್ಯಾಶನ್ ಪ್ಯಾಂಟ್) ಧರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇಂದಿನ ದಿನಗಳಲ್ಲಿ ಮಕ್ಕಳು ದುಬಾರಿ ಬೆಲೆಯ ಜೀನ್ಸ್ ಪ್ಯಾಂಟ್ ಕೊಂಡು ತಂದು ಫ್ಯಾಶನ್‍ಗೋಸ್ಕರ್ ಮನೆಯಲ್ಲಿ ತಮಗೆ ಬೇಕಾದ ರೀತಿಯಲ್ಲಿ ಕತ್ತರಿಸುತ್ತಾರೆ. ಯುವತಿಯರು ಶ್ರೀಮಂತರ ಮಕ್ಕಳಂತೆ ಕಾಣಲು ಹರಿದ ಜೀನ್ಸ್ ಧರಿಸಿ ಮೊಣಕಾಲು ತೋರಿಸುತ್ತಾರೆ. ಇದು ಭಾರತೀಯ ಸಂಸ್ಕೃತಿಗೆ ವಿರುದ್ಧವಾದದ್ದು. ಪಾಶ್ಚಾತ್ಯರು ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನ ಗೌರವಿಸಿ ಅದನ್ನು ಶ್ರದ್ಧೆಯಿಂದ ಅನುಸರಿಸುತ್ತಿರುವಾಗ ನಾವು ಪಾಶ್ಚಾತ್ಯರನ್ನು ಅನುಸರಿಸುತ್ತಿದ್ದೇನೆ ಎಂದಿದ್ದರು.
ಮುಖ್ಯಮಂತ್ರಿಗಳ ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ, ನಮ್ಮ ಬಟ್ಟೆ ಶೈಲಿ ಬದಲಿಸುವ ಮುನ್ನ ನಿಮ್ಮ ಮನಃಸ್ಥಿತಿ ಬದಲಿಸಿಕೊಳ್ಳಿ ಎಂದು ತಿರತ್ ಅವರಿಗೆ ತಿರುಗೇಟು ಕೂಡ ನೀಡಿದ್ದರು.
ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಲೆ ಎಚ್ಚೆತ್ತುಕೊಂಡಿರುವ ರಾವತ್, ನಾನು ಹರಿದ ಪ್ಯಾಂಟ್ ತೊಡುವುದರ ಬಗ್ಗೆ ಅಷ್ಟೇ ಆಕ್ಷೇಪಿಸಿದ್ದೆ, ಜೀನ್ಸ್ ಪ್ಯಾಂಟ್ ಧರಿಸುವುದಕ್ಕೆ ನನ್ನ ಅಭ್ಯಂತರ ಇಲ್ಲ. ಅದಾಗ್ಯೂ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವು ಉಂಟಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.
ಇದೇ ವೇಳೆ ತಮ್ಮ ಬಾಲ್ಯ ನೆನಪಿಸಿಕೊಂಡಿರುವ ಅವರು, ಶಾಲಾ ಸಮಯದಲ್ಲಿ ನನ್ನ ಪ್ಯಾಂಟ್ ಕೂಡ ಹರಿದಿತ್ತು. ಶಿಕ್ಷಕರು ನನಗೆ ಬೈಯುತ್ತಾರೆ ಎಂದು ತುಂಬಾ ಹೆದರಿದ್ದೆ. ಅಂದು ಶಿಸ್ತು ಹಾಗೂ ಮೌಲ್ಯಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದ ಕಾರಣ ಹರಿದ ಪ್ಯಾಂಟ್‍ಗೆ ತೇಪೆ ಹಚ್ಚುತ್ತಿದ್ದೇವು ಎಂದಿದ್ದಾರೆ.