Advertisement

Uttara Kannada: ಕವಿತೆ ತಾಯಿ ಇದ್ದ ಹಾಗೆ: ವೀರಲಿಂಗನಗೌಡ

06:47 PM Sep 13, 2023 | Team Udayavani |

ಸಿದ್ದಾಪುರ: ಕವಿತೆ ರಚನೆ ಸರಳ ದಾರಿಯಲ್ಲ. ಅದು ದಕ್ಕಬೇಕಾದರೆ ಕಷ್ಟ ಹೆಚ್ಚು. ಇಂಥ ಕಷ್ಟಗಳನ್ನು ಎದುರಿಸಿದಾಗ ಮಾತ್ರ ನಮ್ಮಲ್ಲಿ ಪಕ್ವತೆ ಬರುತ್ತದೆ. ಇಲ್ಲವಾದರೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಕವಿ ಕೆ.ಬಿ. ವೀರಲಿಂಗನಗೌಡ ಹೇಳಿದರು.

Advertisement

ಅವರು ತಾಲೂಕು ಕಸಾಪ ಪಟ್ಟಣದ ಬಾಲಭವನದಲ್ಲಿ ಆಯೋಜಿಸಿದ್ದ ಶ್ರಾವಣ ಕವಿಗೋಷ್ಠಿ ಮತ್ತು ಕವಿತೆ,ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಆಶಯ ಮಾತುಗಳನಾಡಿದರು.

ಸತ್ಯ, ಸಿದ್ಧಾಂತ, ನ್ಯಾಯಪರ, ಸಮಾನತೆಯ ಆಶಯ ಇಟ್ಟುಕೊಂಡು ಬರೆಯಬೇಕು. ಕವಿತೆ ಅಂದರೆ ಕರುಳಿನಲ್ಲಿ ಅರಳುವ ಸರಳ ಹೂಗಳು. ವ್ಯಕ್ತಿ, ಸಮಾಜ, ವ್ಯವಸ್ಥೆಯಿಂದ ಘಾಸಿಗೊಂಡಾಗ ಕಾವ್ಯ ನಮ್ಮನ್ನು ಸಲಹುತ್ತದೆ ಎಂದರು.

ನ್ಯಾಯಾಧೀಶ ತಿಮ್ಮಯ್ಯ ಜಿ. ಮಾತನಾಡಿ ಬರೆಹಗಾರರಿಗೆ ಅಧ್ಯಯನ ಮುಖ್ಯ. ಹೆಚ್ಚು, ಹೆಚ್ಚು ಓದಬೇಕು.ನಮ್ಮ ಭಾಷೆಯ, ಇತರ  ಭಾಷೆಯ ಅನುವಾದಿತ ಕೃತಿಗಳನ್ನು ಓದಿ. ಸಾಹಿತ್ಯಕ್ಕೆ ವಿಶೇಷವಾದ ಶಕ್ತಿ ಇದೆ ಎಂದರು.

ಅತಿಥಿಗಳಾಗಿ ಪಾಲ್ಗೊಂಡ ಸಾಹಿತಿ, ಪತ್ರಕರ್ತ ಗಂಗಾಧರ ಕೊಳಗಿ ಮಾತನಾಡಿ, ಬರೆಹಗಾರನಿಗೆ ಅಧ್ಯಯನ ಮುಖ್ಯ. ಅದರರ್ಥ ಅದನ್ನು ನಕಲು ಮಾಡಬೇಕು ಅಂತಲ್ಲ. ಸಾಹಿತ್ಯದ ಶಿಸ್ತು, ನಮ್ಮ ಮಿತಿಗಳು ಅರಿವಿಗೆ ಬರುತ್ತದೆ. ನಾವು ಬರೆದದ್ದೆಲ್ಲ
ಕವಿತೆಯಾಗುವದಿಲ್ಲ. ಮತ್ತೆ ಮತ್ತೆ ತಿದ್ದಿ ತೀಡಿ ನಮ್ಮೆಲ್ಲ ಭಾವಶಕ್ತಿಯನ್ನು ವೃದ್ಧಿಸಿಕೊಂಡು ಬರೆದಾಗ ನೂರರಲ್ಲಿ ಒಂದೆರಡು ಉತ್ತಮ ಕವಿತೆಗಳಾಗುತ್ತದೆ. ಬಹಳಷ್ಟು ಯುವಕವಿಗಳು ಸಕ್ರಿಯರಾಗಿರುವುದು ಸಾಹಿತ್ಯದ ಸಮೃದ್ಧತೆಯ ಸೂಚನೆ ಎಂದರು.

Advertisement

ಅತಿಥಿ, ಪತ್ರಕರ್ತ ಶಿವಾನಂದ ಹೊನ್ನೆಗುಂಡಿ ಮಾತನಾಡಿ, ಕವಿ ಎದುರಾದ ಸಮಸ್ಯೆಗಳನ್ನು ಮೀರಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಬಾಶಿ ಮಾತನಾಡಿ ನಾಡು, ನುಡಿ, ಕಲೆ, ಸಂಸ್ಕೃತಿಗಳ ಕುರಿತು ಯುವ
ಮನಸ್ಸುಗಳಿಗೆ ಪ್ರೇರಣೆ ನೀಡುವ ಉದ್ದೇಶ ಈ ಕಾರ್ಯಕ್ರಮದ ಹಿಂದಿದೆ ಎಂದರು.

ಶ್ರಾವಣ ಕವಿಗೋಷ್ಠಿ ಪ್ರಯುಕ್ತ ಹಲವು ಕವಿಗಳು ಸ್ವರಚಿತ ಕವಿತೆ ವಾಚಿಸಿದರು. ತಾಲೂಕು ಕಸಾಪ ಖಜಾಂಚಿ ಪಿ.ಬಿ. ಹೊಸೂರ ಉಪಸ್ಥಿತರಿದ್ದರು ಗಾಯಕಿ ಸುಮಿತ್ರಾ ಶೇಟ್‌ ಕವಿತೆ ಹಾಡಿದರು. ಬರಹಗಾರ ಪ್ರೊ| ರತ್ನಾಕರ ನಾಯ್ಕ ಸ್ವಾಗತಿಸಿದರು. ಕಸಾಪ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಶಿರಳಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next