ಸಿದ್ದಾಪುರ: ಅರೆಂದೂರು ಹೊಳೆಯಿಂದ ಸಿದ್ದಾಪುರ ಪಟ್ಟಣಕ್ಕೆ ನೀರು ಒಯ್ಯುವ ಕಾರಣ ತಮ್ಮ ಗ್ರಾಮದಲ್ಲಿ ಕೃಷಿ, ಬೆಳೆಗೆ, ಜಾನುವಾರುಗಳಿಗೆ, ಜನರಿಗೆ ನೀರಿನ ತೊಂದರೆ ಆಗುತ್ತಿರುವುದಲ್ಲದೇ ಪಟ್ಟಣ ಪಂಚಾಯತ ದೌರ್ಜನ್ಯ, ಅಧಿಕಾರಿಗಳ ನಿರ್ಲಕ್ಷ ಪ್ರತಿಭಟಿಸಿ ಅರೆಂದೂರು ಮತದಾನ ಕೇಂದ್ರ 250ರ ಮತದಾರರು ಮತದಾನದಿಂದ ದೂರವುಳಿದಿದ್ದಾರೆ.
ಅಲ್ಲಿನ ಮತ ಕೇಂದ್ರದಲ್ಲಿ 666 ಮತದಾರರಿದ್ದು ಮಧ್ಯಾಹ್ನ 12ರ ಸುಮಾರಿಗೆ ಉದಯವಾಣಿ ಭೇಟಿ ನೀಡಿದಾಗ ಕೇವಲ 7 ಮತದಾರರು ಮತ ಚಲಾಯಿಸಿದ್ದು, ಮತದಾನ ಕೇಂದ್ರದ 6 ಸಿಬ್ಬಂದಿ ಮತ ಚಲಾಯಿಸಿದ್ದು ಸೇರಿ ಒಟ್ಟು 13 ಮತಗಳು ಮತಪೆಟ್ಟಿಗೆಗೆ ಬಿದ್ದಿವೆ.
ಮತದಾನದಿಂದ ದೂರವುಳಿದಿರುವುದಕ್ಕೆ ಕಾರಣ ನೀಡಿದ ಗ್ರಾಮ ಸಮಿತಿ ಅಧ್ಯಕ್ಷ ರಾಮಕೃಷ್ಣ ಶೇಟ್, ಗ್ರಾಮಸ್ಥರಾದ ರಾಜಶೇಖರ ಅರೆಂದೂರು ಮುಂತಾದವರು ತಮ್ಮ ಅಳಲನ್ನು ತೋಡಿಕೊಂಡರು. ಗ್ರಾಮದಲ್ಲಿ ಮಳೆಗಾಲದಲ್ಲಿ ಜಮೀನುಗಳು ನೆರೆ ನೀರಿನಲ್ಲಿ ಮುಚ್ಚಿಹೋಗುವ ಕಾರಣ ಬೇಸಿಗೆ ಬೆಳೆ ಅವಲಂಬಿಸಿಕೊಂಡಿದ್ದೇವೆ. ಬೇಸಿಗೆಯಲ್ಲಿ ಹೊಳೆಪಕ್ಕದ ಜಮೀನಿನಲ್ಲಿ ಭತ್ತ, ಕಬ್ಬು, ಜೋಳ ಮುಂತಾಗಿ ಅನೇಕ ಬೆಳೆಗಳನ್ನು ಬೆಳೆಯುತ್ತೇವೆ. ಆದರೆ ಪಪಂದವರು ಸಾಗರ ರಸ್ತೆ ಪಕ್ಕ ನಿರ್ಮಿಸಿದ ಜಲಾಗಾರದಿಂದ ಪಟ್ಟಣಕ್ಕೆ ನೀರು ಒಯ್ಯುವ ಕಾರಣ ನಮ್ಮ ಗ್ರಾಮಕ್ಕೆ ನೀರು ದೊರೆಯುವುದಿಲ್ಲ. ಈ ಬಾರಿಯೂ ಕೃಷಿಕರು ನಿರ್ಮಿಸಿಕೊಂಡ ಒಡ್ಡನ್ನು ಒಡೆದು ನೀರು ಒಯ್ದಿದ್ದಾರೆ. ರೈತರು ಪಂಪ್ ಹಾಕಲು ಅಡ್ಡಿ ಮಾಡುತ್ತಾರೆ. ವಿದ್ಯುತ್ ಸಂಪರ್ಕ ಕಿತ್ತು ಹಾಕುತ್ತಾರೆ. ಈ ವರ್ಷ ಸುಮಾರು 120 ಎಕರೆ ಜಮೀನಿನಲ್ಲಿ ಜೋಳ, ಭತ್ತ ಮುಂತಾದ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ. ಪಪಂ ಮುಖ್ಯಾಧಿಕಾರಿಯವರು ಗ್ರಾಮದವರ ಮೇಲೆ ದೌರ್ಜನ್ಯ ಮಾಡುತ್ತಾರೆ. ಪೊಲೀಸರನ್ನು ಕರೆತಂದು ಬೆದರಿಸುತ್ತಾರೆ. ನಮ್ಮ ಸಮಸ್ಯೆ, ಕಷ್ಟವನ್ನು ಯಾವ ಅಧಿಕಾರಿಗಳು ಕೇಳುತ್ತಿಲ್ಲ. ನಮಗಾಗುತ್ತಿರುವ ತೊಂದರೆಯಿಂದ ಮತದಾನದಿಂದ ದೂರವುಳಿದಿದ್ದೇವೆ. ಹೊರ ಊರಿನಲ್ಲಿರುವ ಕೆಲವರು ಗೊತ್ತಿಲ್ಲದೇ ಮತ ಹಾಕಿದ್ದಾರೆ ಎಂದರು.
ಮಧ್ಯಾಹ್ನದ ನಂತರ ಮತದಾನ ಆರಂಭ: ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಅರೆಂದೂರಿನ ಮತಗಟ್ಟೆಗೆ ಭೇಟಿ ನೀಡಿದ ತಹಶೀಲ್ದಾರ್ ಸಿ.ಜಿ. ಗೀತಾ ಅಲ್ಲಿನ ಮತದಾರರ ಸಮಸ್ಯೆಗಳ ಕುರಿತು ಚರ್ಚಿಸಿದರು. ಗ್ರಾಮಸ್ಥರು ತಮ್ಮಲ್ಲಿನ ನೀರಿನ ಸಮಸ್ಯೆಗಳ ಬಗ್ಗೆ ಹೇಳಿದಾಗ ಬೆಳೆಗಳಿಗೆ ವಾರದಲ್ಲಿ ಎರಡು ದಿನ ನೀರು ಬಳಸಿಕೊಳ್ಳುವ ಬಗ್ಗೆ ವ್ಯವಸ್ಥೆ ಮಾಡಲಾಗುವುದು. ಪಂಪ್‌ಗ್ಳಿಗೆ ವಿದ್ಯುತ್ ಸಂಪರ್ಕಕ್ಕೆ ಅಡ್ಡಿಪಡಿಸದಿರುವುದು ಮತ್ತು ನೀರು ಪೂರೈಕೆಯಾಗದ ಗ್ರಾಮದ ಹಲವು ಮನೆಗಳಿಗೆ ನೀರು ಒದಗಿಸಲಾಗುವುದು ಎಂದು ತಹಶೀಲ್ದಾರ್ ಭರವಸೆ ನೀಡಿದರು. ಅವರ ಮಾತಿಗೆ ಮನ್ನಣೆ ನೀಡಿ ನಂತರದಲ್ಲಿ ಮತದಾನದಲ್ಲಿ ಪಾಲ್ಗೊಂಡಿದ್ದೇವೆ. ಈಗಾಗಲೇ ಬಹುಪಾಲು ಮತದಾನ ನಡೆದಿದೆ ಎಂದು ಗ್ರಾಮಸ್ಥ ರಾಜಶೇಖರ ಅರೆಂದೂರು ದೂರವಾಣಿಯಲ್ಲಿ ತಿಳಿಸಿದರು.