ಕಾರವಾರ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಶೇಕಡಾವಾರು 101.92ರಷ್ಟು ರೈತರನ್ನು ನೋಂದಾಯಿಸುವ ಮೂಲಕ ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.
ಪಿಎಂ ಕಿಸಾನ್ ಯೋಜನೆಯಡಿ ರೈತರನ್ನು ನೋಂದಾಯಿಸುವ ಸಂಬಂಧ ರಾಜ್ಯಾದ್ಯಂತ ಗುರಿ ನೀಡಲಾಗಿತ್ತು. ಅದರಂತೆ ಜು.15 ರ ವರದಿಯಂತೆ ರಾಜ್ಯದ 30 ಜಿಲ್ಲೆಗಳ ಪೈಕಿ ಉತ್ತರ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಡಿಸಿ ಡಾ| ಹರೀಶ್‌ಕುಮಾರ್ ಕೆ. ತಿಳಿಸಿದ್ದಾರೆ.
2015-16ರ ಕೃಷಿ ಗಣತಿಯಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 1,99,241 ಹಿಡುವಳಿದಾರರಿದ್ದು ಈ ಪೈಕಿ 54,278 ಹಿಡುವಳಿದಾರರನ್ನು ಅನರ್ಹರೆಂದು ಗುರುತಿಸಲಾಗಿದೆ. 1,44,963 ಪರಿಷ್ಕೃತ ಗುರಿ ಇದ್ದು ಇದರಲ್ಲಿ 1,47,751 ರೈತರನ್ನು ಪಿ.ಎಂ. ಕಿಸಾನ್ ಯೋಜನೆಯಡಿ ನಮೂದಿಸಲಾಗಿದ್ದು ಪರಿಷ್ಕೃತ ಗುರಿಗೆ ಹೋಲಿಸಿದೆ. ಶೇ.101.92 ರಷ್ಟು ನೋಂದಣಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಎಲ್ಲ ಉಪ ವಿಭಾಗಗಳ ಸಹಾಯಕ ಕಮಿಷನರ್‌ಗಳು, ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಪರಿಶ್ರಮದಿಂದ ಪ್ರಥಮ ಸ್ಥಾನ ಉತ್ತರ ಕನ್ನಡ ಜಿಲ್ಲೆಗೆ ಪ್ರಾಪ್ತವಾಗಿದೆ. ಈ ಮೂಲಕ ಜಿಲ್ಲೆಯ ಎಲ್ಲ ರೈತರೂ ಈ ಯೋಜನೆ ವ್ಯಾಪ್ತಿಗೊಳಪಟ್ಟಿದ್ದಾರೆ. ಈ ಸಾಧನೆಗೆ ಶ್ರಮಿಸಿದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಭಿನಂದಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಿಂದ ಹೊರಗಿರುವ ರೈತರು ಆನ್‌ಲೈನ್‌ನಲ್ಲೂ ಪಿ.ಎಂ. ಕಿಸಾನ್ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪಗೌಡ ತಿಳಿಸಿದರು.
ರೈತರ ಅನುಕೂಲಕ್ಕಾಗಿಯೇ ಹೊಸದಾಗಿ ಪ್ರತ್ಯೇಕ ಪೋರ್ಟನ್ ಒಂದನ್ನು ಪರಿಚಯಿಸಿದ್ದು ಹೊರಭಾಗದಲ್ಲಿರುವ ರೈತರು ಅಲ್ಲಿಂದಲೇ ನೋಂದಣಿ ಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಿಂದ ಹೊರಗಿರುವ ರೈತರೂ ಈ ಯೋಜನೆಯ ಸದುಪ ಯೋಗ ಪಡೆದುಕೊಳ್ಳಬಹುದಾಗಿದೆ ಎಂದರು.
ಸರ್ವೇ ನಂಬರಿನ ಆಧಾರದ ಮೇಲೆ ರೈತರನ್ನು ಸ್ವಯಂ ಘೋಷಣೆ ನೋಂದಣಿ ಮಾಡಲು ನಮಗೆ ಪರಿಷ್ಕೃತ ಗುರಿ ನೀಡಲಾಗಿತ್ತು. ಕೆಲವೆಡೆ ಜಂಟಿ ಖಾತೆಗಳೂ ಇರುವುದರಿಂದ ಶೇ.101.92 ಸಾಧನೆ ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಅಟಲ್ಜಿ, ಬಾಪೂಜಿ ಸೇವಾ ಕೇಂದ್ರಗಳು ನೋಂದಣಿಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಅವರು ತಿಳಿಸಿದರು.