Advertisement

ಆಡಳಿತಾತ್ಮಕವಾಗಿ ಎರಡಾಗಲಿ ಉತ್ತರ ಕನ್ನಡ ಜಿಲ್ಲೆ

05:50 PM Feb 10, 2021 | Team Udayavani |

ಹೊನ್ನಾವರ: ಶಿರಸಿಯನ್ನೊಳಗೊಂಡ ಘಟ್ಟದ ಮೇಲಿನ 6 ತಾಲೂಕುಗಳು ಸೇರಿ ಒಂದು ಜಿಲ್ಲೆಯಾಗಬೇಕು ಎಂಬ ಧ್ವನಿಗೆ ಬಲಬರುತ್ತಿದೆ. ಹೋರಾಟ ಸಮಿತಿ ರಾಜಕಾರಣಿಗಳನ್ನು ಭೇಟಿ ಮಾಡಿ ಬೆಂಬಲ ಕೇಳಿದೆ.

Advertisement

ಶಿರಸಿ ಬಂದ್‌ ಆಚರಿಸಿ ಬಲ ಪ್ರದರ್ಶನಕ್ಕೆ ಹೊರಟಿದೆ. ಆಡಳಿತಾತ್ಮಕವಾಗಿ ಜಿಲ್ಲೆ ಎರಡಾಗಿ ಭಾವನಾತ್ಮಕವಾಗಿ ಒಂದೇ ಉಳಿಯುವಂತಾದರೆ ಚೆಂದ ಅಲ್ಲವೇ? ಸ್ವಾತಂತ್ರ್ಯನಂತರ ರಾಜ್ಯ, ಜಿಲ್ಲೆ, ತಾಲೂಕುಗಳ ಪುನರ್ವಿಂಗಡನೆ ನಡೆಯಿತು. ನಂತರವೂ ಕೂಡ ಆಡಳಿತಾತ್ಮಕವಾಗಿ ಪಂಜಾಬ-ಹರಿಯಾಣ,ಆಂಧ್ರ-ತೆಲಂಗಾಣ ಹೀಗೆ ರಾಜ್ಯಗಳುವಿಭಜನೆಗೊಂಡವು. ಕರ್ನಾಟಕದಲ್ಲಿ ಹಲವುಜಿಲ್ಲೆ, ತಾಲೂಕುಗಳ ವಿಭಜನೆಯಾಗಿದೆ. 9 ತಾಲೂಕುಗಳುಳ್ಳ ದಕ್ಷಿಣ ಕನ್ನಡವಿಭಜನೆಯಾಯಿತು. ಇತ್ತೀಚಿನ ವರ್ಷದಲ್ಲಿಗದಗ, ರಾಮನಗರ ಜಿಲ್ಲೆಗಳಾದವು. ಮೊನ್ನೆವಿಜಯನಗರ ಜಿಲ್ಲೆ ರಚನೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ವಿಭಜನೆಯಾಗಲು ಅಂದಿನ ಸಚಿವ ಡಾ| ವಿ.ಎಸ್‌. ಆಚಾರ್ಯ ಮಂಚೂಣಿಯಲ್ಲಿದ್ದರು.

ಹ್ಯಾಗೆ, ಯಾಕೆ ಒಂದೇ ಧ್ವನಿಯಾಗಿ ಜಿಲ್ಲೆಯನ್ನು ವಿಭಜಿಸಿಕೊಂಡಿರಿ ಡಾಕ್ಟ್ರೇ ಎಂದು ಕೇಳಿದಾಗ, ದಕ್ಷಿಣ ಕನ್ನಡ ಜಿಲ್ಲೆಯ ಜನ ಭಾವನಾತ್ಮಕವಾಗಿ ಒಂದಾಗಿಯೇ ಇದ್ದೇವೆ, ಆಡಳಿತಾತ್ಮಕವಾಗಿ ವಿಭಜನೆಗೊಂಡಿದ್ದೇವೆ. ಇದರಿಂದ ಎರಡು ಜಿಲ್ಲಾಕೇಂದ್ರಗಳ ಜಿಲ್ಲಾಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಮತ್ತು ಇತರ ಎಲ್ಲ ಇಲಾಖೆಗಳ ಕಾರ್ಯಾಲಯಗಳ ಭೌಗೋಳಿಕ ವ್ಯಾಪ್ತಿ ಕಿರಿದಾಗಿ ಪರಿಣಾಮಕಾರಿ ಆಡಳಿತ ಸಾಧ್ಯವಾಗುತ್ತದೆ. ಜಿಲ್ಲಾವಾರು ಹೆಚ್ಚು ಹಣಕಾಸು ಬರುತ್ತದೆ.ಮಂತ್ರಿಸ್ಥಾನವೂ ಹೆಚ್ಚಾಗುತ್ತದೆ. ಜನರಿಗೂಆಡಳಿತಯಂತ್ರ ಕೈಗೆಟಕುವಂತಿರುತ್ತದೆ. ರಾಜಕೀಯ ಏನೇ ಇದ್ದರೂ ಅಭಿವೃದ್ಧಿಗೆ ನಾವೆಲ್ಲರೂ ಒಂದು ಎಂದಿದ್ದರು.

ಅಂತಹ ತಿಳಿವಳಿಕೆ ಇದ್ದಿದ್ದರೆ ಉತ್ತರಕನ್ನಡ ಜಿಲ್ಲೆ ಎಂದೋ ಅಭಿವೃದ್ಧಿ ಆಗುತ್ತಿತ್ತು. ಉ.ಕ. ಭಾವನಾತ್ಮಕವಾಗಿ ಒಂದಲ್ಲ, ಕೇವಲ ಆಡಳಿತಾತ್ಮಕವಾಗಿ ಒಂದಾಗಿದೆ. 11 ತಾಲೂಕುಗಳುಳ್ಳ ಉತ್ತರ ಕನ್ನಡ ರಾಜ್ಯದ 10ನೇ ದೊಡ್ಡ ಜಿಲ್ಲೆಯಾಗಿದೆ. 144 ಕಿಮೀ ಕರಾವಳಿಯಿದೆ. ಜಿಲ್ಲೆಯ ಭೌಗೋಳಿಕ ಪ್ರದೇಶ 10,24,679ಹೆಕ್ಟೇರ್‌ ಆಗಿದ್ದು, ಇದರಲ್ಲಿ 8,15,202 ಹೆಕ್ಟೇರ್‌ ಅರಣ್ಯ ಇಲಾಖೆಗೆ ಸೇರಿದ ಭೂಮಿಯಾಗಿದೆ.ಗ್ರಾಮೀಣ ಜನಸಂಖ್ಯೆ 9 ಲಕ್ಷ, ನಗರದಲ್ಲಿ 4ಲಕ್ಷ ದಷ್ಟಿದೆ. ಜಿಲ್ಲೆಯ ಭಟ್ಕಳದಿಂದ ಜೊಯಿಡಾಕ್ಕೆಹೋಗಲು 10 ತಾಸು ಬೇಕು, 200 ಕಿಮೀ ದೂರ. ಆಡಳಿತಾತ್ಮಕವಾಗಿ ಸಮಗ್ರ ಜಿಲ್ಲೆಯನ್ನು ಪರಿಚಯ ಮಾಡಿಕೊಡಲು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಒಂದು ವರ್ಷ ಬೇಕು. ಒಬ್ಬ ಜಿಲ್ಲಾಧಿಕಾರಿ, ಒಬ್ಬ ಪೊಲೀಸ್‌ ವರಿಷ್ಠ ಜಿಲ್ಲೆಯ ನಾಡಿ ಹಿಡಿಯುವಷ್ಟರಲ್ಲಿ ವರ್ಗವಾಗಿ ಹೋಗುತ್ತಾರೆ. ಭೌಗೋಳಿಕವಾಗಿ, ನಕಾಶೆ ನೋಡಿದರೆ ಉ.ಕ. ಒಂದು ಜಿಲ್ಲೆ. ಕರಾವಳಿಯ ಸಮುದ್ರ, ಅರಮಲೆನಾಡು, ಕಾಡು, ಬಯಲುಸೀಮೆಯನ್ನೊಳಗೊಂಡ 400 ಮಿಮೀಯಿಂದ 4000ಮಿಮೀ ಮಳೆ ಸುರಿಯುವ ಬೆಟ್ಟ, ಘಟ್ಟ, ಕರಾವಳಿ, ಈ ಮೂರು ಅಂತಸ್ಥಿನ ಮಹಡಿಯಂತಿದೆ ಉತ್ತರಕನ್ನಡ ಜಿಲ್ಲೆ. ಕಲೆ, ಸಂಸ್ಕೃತಿ, ಜನಜೀವನ, ಊಟೋಪಚಾರ, ಉದ್ಯೋಗ,ಎಲ್ಲವೂ ಭಿನ್ನ. ಸಾಮಾನ್ಯವಾಗಿ ಕೃಷಿಕರು, ಮೀನುಗಾರರು ಎಂದು ವಿಭಜಿಸಬಹುದು. ಕೈಗಾರಿಕೆಗಳು ತೀರ ಕಡಿಮೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆ ಎರಡಾದರೆ ಅಭಿವೃದ್ಧಿಗೆ ಅನುಕೂಲ, ಮನಸ್ಸು ಕೂಡ ಹೆಚ್ಚು ಅಭಿಮಾನಪಡುವಂತೆ ಆಗುವ ಸಾಧ್ಯತೆ ಇದೆ.

ಇಂತಹ ಚಿಂತನೆಗಳಲ್ಲಿ ಸದಾ ಮುಂದಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತನ್ನಆಡಳಿತಕ್ಕಾಗಿ ಕರಾವಳಿ, ಘಟ್ಟದ ಮೇಲೆ ಎಂದು ವಿಭಜಿಸಿಕೊಂಡ ಮೇಲೆ ಹೆಚ್ಚು ವೇಗ ಪಡೆದುಕೊಂಡಿದೆ. ಕಾಗೇರಿಯವರು ಸಚಿವರಾಗಿದ್ದಾಗ ಎರಡು ಶೈಕ್ಷಣಿಕ ಜಿಲ್ಲೆ ಮಾಡಿದ ಕಾರಣ ಎರಡೂ ಜಿಲ್ಲೆ ಶೈಕ್ಷಣಿಕವಾಗಿ ಹೆಚ್ಚು ಸಾಧಿಸಲು ಸಾಧ್ಯವಾಗಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಇಬ್ಬರೂ ಜಿಲ್ಲೆಯ ಒಟ್ಟಾಭಿಪ್ರಾಯವಿದ್ದರೆ ವಿಭಜಿಸಿಕೊಡಲು ತೊಂದರೆಯೇನಿಲ್ಲ ಎಂದಿದ್ದರು. ವಿಧಾನಸಭಾಪತಿ ಕಾಗೇರಿ, ಸಂಸದ

Advertisement

ಅನಂತಕುಮಾರ ಈ ಕುರಿತು ಜಾಣಮೌನ ವಹಿಸಿದ್ದಾರೆ. ದೂರದರ್ಶಿತ್ವದ ನಾಯಕ ರಾಮಕೃಷ್ಣಹೆಗಡೆ ಆ ಕಾಲದಲ್ಲೇ ಸಾರಿಗೆ, ತೋಟಗಾರಿಕೆ, ವಿದ್ಯುತ್‌ ಜಿಲ್ಲಾಮುಖ್ಯಾಲಯಗಳನ್ನು ಶಿರಸಿಯಲ್ಲಿಆರಂಭಿಸಿದ್ದರು. ವಿಭಜನೆಗೊಂಡ ಜಿಲ್ಲೆಗಳು ಪ್ರಗತಿಸಾಧಿಸಿದ್ದು ಕಣ್ಣಮುಂದಿದೆ. ಹೀಗಿರುವಾಗ ಜಿಲ್ಲಾ ವಿಭಜನೆಯಾದರೆ ಚೆಂದವಲ್ಲವೇ?ಕರಾವಳಿಯ ತಾಲೂಕಿಗೆ ಹಾನಿಯಿಲ್ಲ ಎಂದು ಮೌನವಾಗಿದ್ದು ವಿಭಜನೆಯನ್ನು ಬೆಂಬಲಿಸಿದಂತಿದೆ.ವಸ್ತುನಿಷ್ಠವಾಗಿ ಆಲೋಚಿಸುವಂತಾಗಲಿ.

 

-ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next