ಬೆಂಗಳೂರು: ಹಾಲಿ ಸಂಸದ ಅನಂತಕುಮಾರ್ ಹೆಗಡೆಗೆ ಮತ್ತೆ ಟಿಕೆಟ್ ನೀಡಲು ಬಿಜೆಪಿ ವರಿಷ್ಠರಿಗೆ ಇಷ್ಟವಿಲ್ಲ. ಆದರೆ ಬೇರೆಯವರಿಗೆ ಕೊಟ್ಟರೆ ಕ್ಷೇತ್ರದಲ್ಲಿ ಗೆಲ್ಲುವುದು ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಟಿಕೆಟ್ ವಿವಾದ ಇತ್ಯರ್ಥಗೊಳಿಸುವುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.
ಟಿಕೆಟ್ ಅಂತಿಮಗೊಳಿಸುವುದಕ್ಕೂ ಮುನ್ನ ಮತ್ತೊಮ್ಮೆ ತಳಮಟ್ಟದ ವರದಿ ಪಡೆಯಲು ವರಿಷ್ಠರು ಮುಂದಾಗಿದ್ದಾರೆ. ಎಲ್ಲ ಮೂಲಗಳಿಂದ ವಾಸ್ತವ ಸ್ಥಿತಿಗತಿಗಳ ಬಗ್ಗೆ ಮಾಹಿತಿ ತರಿಸಿಕೊಳ್ಳಲಾಗುತ್ತಿದೆ. ವರಿಷ್ಠರ ವಿರೋಧದ ಮಧ್ಯೆಯೂ ಸಂಘ-ಪರಿವಾರದಿಂದ ಹೆಗಡೆ ಪರ ಬ್ಯಾಟಿಂಗ್ ಮುಂದುವರಿದಿದೆ.
ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜ್ಯ ಚುನಾವಣ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಅವರು ಚುನಾವಣ ಸಂಚಾಲಕ ಹಾಗೂ ಉತ್ತರ ಕನ್ನಡ ಪ್ರಭಾರಿ ವಿ.ಸುನಿಲ್ ಕುಮಾರ್ ಅವರ ಜತೆಗೆ ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ನೀಡಲು ವರಿಷ್ಠರು ಬಹುತೇಕ ನಿರ್ಧರಿಸಿದ್ದಾರೆ. ಆದರೆ ಹಿಂದುತ್ವದ ಮೂಲ ಕಾರ್ಯಕರ್ತರು ಬೇಸರಗೊಂಡು ಚುನಾವಣ ಕಾರ್ಯದಿಂದ ದೂರವುಳಿದರೆ ಕಷ್ಟ ಎಂಬ ಕಾರಣಕ್ಕೆ ಹಿಂದುತ್ವವಾದಿ ಮುಖಂಡರನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು ಒಂದು ತಿಂಗಳು ಕಾಲ ಚುನಾವಣ ಕೆಲಸಕ್ಕೆ ನಿಯೋಜಿಸುವುದಕ್ಕೂ ಪಕ್ಷ ಚಿಂತಿಸಿದೆ. ರಾಧಾ ಮೋಹನ್ ಅಗರ್ವಾಲ್ ಅವರೇ ಉತ್ತರ ಕನ್ನಡದಲ್ಲಿ ಠಿಕಾಣಿ ಹೂಡುವ ಸಾಧ್ಯತೆಯೂ ಇದೆ.