ಕಾರವಾರ: ಜಿಲ್ಲೆಯಲ್ಲಿ ಹಾಲಿ ಬಿಜೆಪಿ ಶಾಸಕರು ಮತ್ತೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರೆ. ಐದು ಜನ ಶಾಸಕರು, ಅದರಲ್ಲಿ ಒಬ್ಬರು ಸಚಿವರು ಮತ್ತೆ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಲು ಅಣಿಯಾಗಿದ್ದಾರೆ. ಬಿಜೆಪಿ ವರಿಷ್ಠರು ದೆಹಲಿಯಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ತನ್ನ ಹುರಿಯಾಳುಗಳ ಹೆಸರು ಪ್ರಕಟಿಸಿದ್ದು, ಜಿಲ್ಲೆಯ ಆರು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಹೆಸರು ಬಹಿರಂಗವಾಗಿದೆ. ಹೊಸ ಮುಖ ಕಾಣಲಿವೆ ಎಂದು ಆಸೆ ಇಟ್ಟುಕೊಂಡಿದ್ದ ಪಕ್ಷದಲ್ಲಿನ ಕೆಲವರಿಗೆ ನಿರಾಶೆಯಾಗಿದ್ದರೆ, ಹಲವರಿಗೆ ಖುಷಿಯಾಗಿದೆ. ಕೆಲವು ಕಡೆ ಕಾಂಗ್ರೆಸ್ ಬೆಚ್ಚಿ ಬಿದ್ದಿದೆ.
ಶಿರಸಿ ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆಗೆ ಟಿಕೆಟ್ ತಪ್ಪಿಸಲಾಗುತ್ತಿದೆ. ಅವರಿಗೆ ಲೋಕಸಭೆಗೆ ಕಳಿಸುವ ವಿಚಾರ ನಡೆಸಿದೆ ಎಂಬ ಊಹೆಗಳಿಗೆ ಇದೀಗ ಕಡಿವಾಣ ಬಿದ್ದಿದೆ. ಆರು ಸಲ ಗೆದ್ದಿರುವ ಕಾಗೇರಿ ಅವರು ಏಳನೇ ಸಲ ವಿಧನಸಭೆ ಪ್ರವೇಶಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕೆ ಬೇಕಾದ ತಯಾರಿ ಸಹ ನಡೆದಿದೆ. ಹಾಗೆ ಸಚಿವ ಶಿವರಾಮ ಹೆಬ್ಟಾರ ವಲಸೆ ಬಂದವರು. ಈ ಸಲ ಟಿಕೆಟ್ ಏನಾಗುತ್ತದೆಯೋ ಎಂಬ ಮಾತಿತ್ತು. ಆದರೆ ಅದು ಸಹ ಸುಳ್ಳಾಗಿದ್ದು, ಶಿವರಾಂ ಹೆಬ್ಟಾರ್ ಯಲ್ಲಾಪುರ ಕ್ಷೇತ್ರದಿಂದ ಅಭ್ಯರ್ಥಿಯಾಗಿದ್ದಾರೆ. ಕಾರವಾರ ಹೆಚ್ಚು ವಿವಾದ ಊಹಾಪೋಹ ಹುಟ್ಟಿಸಿದ್ದ ಕ್ಷೇತ್ರ. ಇಲ್ಲಿ ಹಾಲಿ ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಪಕ್ಷದ ಕೆಲ ಮೂಲ ಕಾರ್ಯಕರ್ತರು ರೂಪಾಲಿ ನಾಯ್ಕ ಗೆಲ್ಲುವುದಿಲ್ಲ.
ಹಾಗಾಗಿ ಹೊಸ ಮುಖಕ್ಕೆ ಟಿಕೆಟ್ ಕೊಡಿ. ಇಲ್ಲದಿದ್ದರೆ ಸೈಲ್‌ಗೆ ಮತ ಹಾಕುತ್ತೇವೆ ಎಂಬಮಟ್ಟಿಗೆ ಮಾತಾಡುತ್ತಿದ್ದರು. ಈ ಸಲ ರೂಪಾಲಿ ನಾಯ್ಕಗೆ ಟಿಕೆಟ್ ಇಲ್ಲ ಎಂದು ಸುಳ್ಳು ವದಂತಿ ಸಹ ಹಬ್ಬಿತ್ತು. ಕಾಂಗ್ರೆಸ್ ಪಕ್ಷದ ಸುತ್ತ ಇರುವ ಸ್ಥಾಪಿತ ಹಿತಾಸಕ್ತಿಗಳು, ರೂಪಾಲಿ ನಾಯ್ಕ ಜನರ ಕೈಗೆ ಸಿಗಲ್ಲ ಎಂಬ ವದಂತಿಯನ್ನು ಜೋರಾಗಿ ಮಾಡಿದ್ದವು. ಆ ಎಲ್ಲ ಕುಶಕ್ತಿಗಳನ್ನು ಹಿಂದಿಕ್ಕಿ, ಪಕ್ಷಕ್ಕೆ ತನ್ನ ಶ್ರದ್ಧೆ ಹಾಗೂ ನಿಷ್ಟೆ ಪ್ರದರ್ಶನ ಮಾಡಿದ್ದ ಹಾಲಿ ಶಾಸಕಿ ರೂಪಾಲಿ ನಾಯ್ಕ, ಪಕ್ಷದ ವರಿಷ್ಟರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲದೆ ಟಿಕೆಟ್ ಪಡೆದು ಬೀಗಿದ್ದು, ಗೆಲುವಿನ ಹೊಸ್ತಿಲಲ್ಲಿ ನಗೆ ಬೀರಲು ಸಜ್ಜಾಗಿ ನಿಂತಿದ್ದಾರೆ. ಕಾಂಗ್ರೆಸ್ ತನ್ನ ಸಿದ್ಧತೆ ಮಾಡಿಕೊಂಡಿಲ್ಲ. ಜೆಡಿಎಸ್ ಅಭ್ಯರ್ಥಿ ಯಾರೆಂದು ಖಚಿತವಾಗಿಲ್ಲ. ಅಸ್ನೋಟಿಕರ್, ಚೈತ್ರಾ ಕೋಠಾರಕರ್ ಪಕ್ಷೇತರ ಅಭ್ಯರ್ಥಿ ಗಳೆಂದು ಹೇಳಿಕೊಳ್ಳುತ್ತಿದ್ದು, ಇಡೀ ಕ್ಷೇತ್ರ ಕವರ್ ಮಾಡಿಲ್ಲ. ಸಂಘಟನೆ ಹಾಗೂ ಪ್ರಚಾರದಲ್ಲಿ ಬಿಜೆಪಿ ಮುಂದಿದ್ದು ಕಾರವಾರದಲ್ಲಿ ರೂಪಾಲಿ ನಾಯಕ್ ಮುಂದಿದ್ದಾರೆ.
ಸುನೀಲ್ ಹೆಗಡೆ ಕಳೆದ ಚುನಾವಣೆಯಲ್ಲಿ 5 ಸಾವಿರ ಮತಗಳಿಂದ ಸೋತರು ಬಿಜೆಪಿ ಹವಾವನ್ನು 5 ವರ್ಷದಿಂದ ಮೆಂಟೇನ್ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಘೋಕ್ಲೃಕರ್ ಉದ್ಭವ ಮಾತ್ರ ಬಿಜೆಪಿ ಕಾಂಗ್ರೆಸ್‌ಗೆ ತೊಡಕಾಗಿದೆ. ಕುಮಟಾ ಮತ್ತು ಭಟ್ಕಳ ಕ್ಷೇತ್ರದಲ್ಲಿ ಹಾಲಿ ಶಾಸಕರ ಬದಲಾವಣೆಯ ಮಾತು ಜೋರಾಗಿತ್ತು. ಭಟ್ಕಳದಲ್ಲಿ ಸುನೀಲ್ ನಾಯ್ಕ ಗುಪ್ತ ಸಭೆ ಸಹ ನಡೆಸಿದ್ದರು . ಆದರೆ ಬಿಜೆಪಿ ಪಕ್ಷದೊಳಗಿನ ಎಲ್ಲಾ ಕುತಂತ್ರ ಮತ್ತು ಅಪಪ್ರಚಾರ ಗಮನಿಸಿತು. ಅಲ್ಲದೆ ಪರ್ಯಾಯವಾಗಿ ಹಾಲಿ ಶಾಸಕರಿಗಿಂತ ಪ್ರಬಲರು ಪಕ್ಷದಲ್ಲಿ ಇಲ್ಲ ಎಂಬುದ ಅರಿತು ಹಾಲಿ ಶಾಸಕರಿಗೆ ಮಣೆ ಹಾಕಿದೆ. ಎಲ್ಲಾ ಹಾಲಿ ಶಾಸಕರು ಈಗ ಖುಷಿಯಾಗಿದ್ದು, ಪ್ರಚಾರಕ್ಕೆ ಅಣಿಯಾಗುತ್ತಿದ್ದಾರೆ.
ಪಕ್ಷದಲ್ಲಿ ಇದ್ದೇ ಮೆಣಸು ಅರೆದವರಿಗೆ ಈಗ ಮದ್ದು ಅರೆಯುವ ಕೆಲಸವನ್ನು ಹಾಲಿ ಶಾಸಕರಾದ ರೂಪಾಲಿ ನಾಯ್ಕ, ಸುನೀಲ್ ನಾಯ್ಕ, ದಿನಕರ ಶೆಟ್ಟಿ, ಘಟ್ಟದ ಮೇಲೆ ಕಾಗೇರಿ ಮಾಡೇ ಮಾಡುತ್ತಾರೆ. ಹಾಗೆ ರೂಪಾಲಿ ನಾಯ್ಕ, ಸುನೀಲ್ ನಾಯ್ಕ, ಕಾಗೇರಿ, ದಿನಕರ ಶೆಟ್ಟಿ ಅವರನ್ನು ವಿರೋಧಿಸಿದವರು ಪಕ್ಷದಿಂದ ಹೊರ ನಡೆಯುವರೇ ಎಂಬುದು ಸಹ ಕುತೂಹಲಕಾರಿ ನಡೆಯಾಗಿದೆ. ಈ ಕುತೂಹಲ ಇನ್ನೆರಡು ದಿನಗಳಲ್ಲಿ ಹೊರ ಬೀಳಲಿದೆ. ಪಕ್ಷ ನಿಷ್ಠೆ ಎಂಬುದು ಸಹ ಈಗ ಬಹಿರಂಗ ಪರೀಕ್ಷೆಗೆ ಒರೆ ಹಚ್ಚುವ ಸಂದರ್ಭಸೃಷ್ಟಿಯಾಗಿದೆ. ಬಿಜೆಪಿಯ ಭಿನ್ನಮತವನ್ನು ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಗಳು ಬಳಸಿಕೊಳ್ಳುವರೆ ಎಂಬುದನ್ನು ಕಾಲವೇ ನಿರ್ಣಯಿಸಬೇಕಿದೆ.
ಬೆಂಬಲಿಗರಲ್ಲಿ ಮೂಡಿದ ಹರ್ಷ
ಶಾಸಕಿಗೆ ಟಿಕೆಟ್ ತಪ್ಪಲಿದೆ ಎಂದು ಪ್ರಬಲವಾಗಿ ನಂಬಿದ್ದ ಗುಂಪು ಹತಾಶರಾಗಿ ಕುಳಿತಿದ್ದರೆ, ಶಾಸಕಿ ರೂಪಾಲಿ ನಾಯ್ಕ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಬಿಜೆಪಿಯಲ್ಲಿ ಹರ್ಷ ಮನೆ ಮಾಡಿದ್ದು, ಸಿಹಿ ಹಂಚಿಕೆ ಸಹ ಆಪ್ತರ ನಡುವೆ ನಡೆದಿದೆ. ಟಿಕೆಟ್ ಪಡೆದ ಬಿಜೆಪಿ ಹಾಲಿ ಶಾಸಕರ ಬೆಂಬಲಿಗರು ಹರ್ಷ ವಿನಿಮಯ ಮಾಡಿಕೊಂಡಿದ್ದಾರೆ.
*ನಾಗರಾಜ್ ಹರಪನಹಳ್ಳಿ