Advertisement

Uttara Kannada: ಅರ್ಜಿ ತಿರಸ್ಕಾರವಾದ 73,732 ಕುಟುಂಬಗಳಿಗೆ ಒಕ್ಕಲೆಬ್ಬಿಸುವ ಆತಂಕ

06:54 PM Oct 11, 2023 | Team Udayavani |

ಶಿರಸಿ: ಜಿಲ್ಲೆಯಲ್ಲಿ ವಾಸ್ತವ್ಯ ಮತ್ತು ಸಾಗುವಳಿಗಾಗಿ ಅತಿಕ್ರಮಿಸಿರುವ ಕಂದಾಯ ಭೂಮಿ ಅರ್ಜಿ ಸಲ್ಲಿಸಿದವರಲ್ಲಿ 73 ಸಾವಿರಕ್ಕೂ ಮಿಕ್ಕಿ ಸಾಗುವಳಿದಾರರ ಅರ್ಜಿ ತಿರಸ್ಕಾರಗೊಂಡು, ಕಾನೂನು ಅಡಿಯಲ್ಲಿ ಒಕ್ಕಲೆಬ್ಬಿಸುವ ಪ್ರಕ್ರಿಯೆಯಿಂದ ನಿರಾಶ್ರಿತರಾಗುವ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದು ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಹೇಳಿದ್ದಾರೆ.

Advertisement

ವಾಸ್ತವ್ಯ ಮತ್ತು ಸಾಗುವಳಿಗಾಗಿ ಕಾಲಕಾಲಕ್ಕೆ ರಾಜ್ಯ ಸರಕಾರ ಭೂ ಕಂದಾಯ ತಿದ್ದುಪಡಿ ಮಾಡಿ, ಕಂದಾಯ ಅತಿಕ್ರಮಣದಾರರಿಗೆ ಭೂಮಿ ಹಕ್ಕು ನೀಡುವ ಉದ್ದೇಶದಿಂದ, ಕಂದಾಯ ಅತಿಕ್ರಮಣದಾರರಿಂದ ವಿವಿಧ ಉದ್ದೇಶದ ಅಡಿಯಲ್ಲಿ 82,135 ಅರ್ಜಿ ಸ್ವೀಕರಿಸಿದ್ದು, ಅವುಗಳಲ್ಲಿ ಕಂದಾಯ ಅತಿಕ್ರಮಣದಾರರ 73,732 ಅರ್ಜಿಗಳು ತಿರಸ್ಕಾರವಾಗಿದ್ದು, ಕೇವಲ 6,489 ಕಂದಾಯ ಅತಿಕ್ರಮಣದಾರರಿಗೆ ಮಾತ್ರ ಸಕ್ರಮಗೊಳಿಸಿ ಮಂಜೂರಿ ನೀಡಲಾಗಿದೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರು ಡಿಸೆಂಬರ್, 2021 ರಂದು ಪ್ರಕಟಿಸಿದ ಅಂಕೆ ಸಂಖ್ಯೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಭೂ ಕಂದಾಯ ಕಾಯಿದೆ ಅಡಿಯಲ್ಲಿ ವಿವಿಧ ನಮೂನೆಯ ನಂಬರಿನ ಅರ್ಜಿಯನ್ನು ನಗರ, ಗ್ರಾಮೀಣ, ಕಂದಾಯ ಭೂಮಿ ಅತಿಕ್ರಮಣದಾರರು ವಾಸ್ತವ್ಯ ಮತ್ತು ಸಾಗುವಳಿಯ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸಿದ್ದರು ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಕಂದಾಯ ಅತಿಕ್ರಮಣದಾರರ ಭೂಮಿ ಮಂಜೂರಿಗೆ ಸಂಬಂಧ ಪಟ್ಟಂತೆ, ಬಂದಂತಹ ಅರ್ಜಿಗಳಲ್ಲಿ ಕೇವಲ 6,489 ಕಂದಾಯ ಅತಿಕ್ರಮಣದಾರರಿಗೆ ಭೂಮಿ ಹಕ್ಕು ದೊರಕಿದ್ದು, ಶೇ 89.8 ರಷ್ಟು ಕಂದಾಯ ಅತಿಕ್ರಮಣದಾರರ ಅರ್ಜಿ ತಿರಸ್ಕಾರವಾಗಿ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಒಳಗಾಗುವ ಭೀತಿಯಲ್ಲಿದ್ದಾರೆ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಅರ್ಜಿ ನಮೂನೆ  ಸ್ವೀಕರಿಸಿದ ಅರ್ಜಿ  ಸಕ್ರಮ ಅರ್ಜಿ   ತಿರಸ್ಕೃತ ಅರ್ಜಿ
94 ಎ (ನಮೂನೆ -50) 39,016   1,661   37,355
94 ಸಿಸಿ(ನಗರ)(ನಮೂನೆ-50) 5,368   1,520    3,771
94-ಎ (4)(ನಮೂನೆ-57)1,842   0       5
94(ಸಿ)(ಗ್ರಾಮೀಣ) 9,651    2,508     7,143
94-ಬಿ(ನಮೂನೆ-53) 26,258   800     25,458
ಒಟ್ಟು 82,135    6,489       73,732
ಮಂಜೂರಿ ಶೇಕಡವಾರು  ಶೇಕಡವಾರು  ತಿರಸ್ಕೃತ ಒಟ್ಟು
7.9%   89.8%   97.7%
Advertisement

Udayavani is now on Telegram. Click here to join our channel and stay updated with the latest news.

Next