ಲಕ್ನೋ: ಕೋವಿಡ್ ಸೋಂಕಿಗೆ ತುತ್ತಾಗಿದ್ದ ಉತ್ತರ ಪ್ರದೇಶದ ಸಚಿವೆ ಕಮಲ ರಾಣಿ ಇಂದು ಮುಂಜಾನೆ ಲಕ್ನೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ 62 ವರ್ಷ ವಯಸ್ಸಾಗಿತ್ತು.
ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದಲ್ಲಿ ಕಮಲಾ ರಾಣಿ ವರುಣ್ ತಾಂತ್ರಿಕ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಜುಲೈ 18 ರಂದು ಕೋವಿಡ್ ಪಾಸಿಟಿವ್ ವರದಿ ಬಂದು ರಾಜಧಾನಿ ಕೋವಿಡ್ ಹಾಸ್ಪತ್ರೆಗೆ ದಾಖಲಾಗಿದ್ದರು.
ಕೋವಿಡ್ ಮಾತ್ರವಲ್ಲದೆ ಶ್ವಾಸಕೋಶ ಸೋಂಕು ಆಗಿದ್ದರಿಂದ ಕಳೆದ ಹಲವು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೇ ಹಲವು ಪ್ರಯತ್ನಗಳ ಹೊರತಾಗಿಯೂ ಇಂದು ನಿಧನರಾಗಿದ್ದಾರೆ ಎಂದು ಪಿಐ ನಿರ್ದೇಶಕ ಪ್ರೊ. ರಾಧ ಕೃಷ್ಣ ಧೀಮನ್ ತಿಳಿಸಿದ್ದಾರೆ.
ಸಚಿವೆಯ ನಿಧನಕ್ಕೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ಮಾತ್ರವಲ್ಲದೆ ಆಗಸ್ಟ್ 5 ರಂದು ನಡೆಯುವ ರಾಮಮಂದಿರ ಭೂಮಿಪೂಜೆ ಕಾರ್ಯಕ್ರಮದ ಸಿದ್ದತೆಗಳನ್ನು ಪರಿಶೀಲಿಸಲು ಆಯೋಧ್ಯೆಗೆ ತೆರಳುವ ಯೋಜನೆಯನ್ನು ರದ್ದು ಮಾಡಿದ್ದಾರೆ.
ಕಮಲ ರಾಣಿ ಅವರು ಕಾನ್ಪುರದ ಘಟಂಪುರ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಸಚಿವೆಯಾಗಿದ್ದರು.