ಫಿರೋಜಾಬಾದ್: ಉತ್ತರಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ಜ್ವರ ಮತ್ತು ಡೆಂಗ್ಯುವಿನಿಂದ ಸಾವನ್ನಪ್ಪಿರುವವರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಶನಿವಾರ (ಸೆಪ್ಟೆಂಬರ್ 25) ತಿಳಿಸಿದ್ದಾರೆ.
ಇದನ್ನೂ ಓದಿ:27ರ ಬಂದ್‌ಗೆ ವ್ಯಾಪಕ ಬೆಂಬಲ ;ಶಿವಮೊಗ್ಗ ಯಶಸ್ವಿಗೊಳಿಸಲು ನಿರ್ಧಾರ
ಶುಕ್ರವಾರ ರಾತ್ರಿ 12ವರ್ಷದ ಬಾಲಕಿಯೊಬ್ಬಳು ಮೆಡಿಕಲ್ ಕಾಲೇಜಿನಲ್ಲಿ ಡೆಂಗ್ಯು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ವಿವರಿಸಿದೆ.
ಕಳೆದ 24ಗಂಟೆಗಳಲ್ಲಿ 154ಕ್ಕೂ ಅಧಿಕ ರೋಗಿಗಳು ಆಸ್ಪತ್ರೆಗೆ ದಾಖಲಾಗಿರುವುದಾಗಿ ಡಾ.ಸಂಗೀತಾ ಅನೇಜಾ ತಿಳಿಸಿದ್ದಾರೆ. ಪ್ರಸ್ತುತ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿನ ವಿವಿಧ ವಾರ್ಡ್ ಗಳಲ್ಲಿ 255 ರೋಗಿಗಳು ದಾಖಲಾಗಿದ್ದಾರೆ. ಶನಿವಾರ ಚಿಕಿತ್ಸೆ ನಂತರ ಗುಣಮುಖರಾದ 153 ಮಂದಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿರುವುದಾಗಿ ವರದಿ ತಿಳಿಸಿದೆ.
ಏತನ್ಮಧ್ಯೆ ಆಸ್ಪತ್ರೆಯ ಸಿಬಂದಿಗಳ ನಿರ್ಲಕ್ಷ್ಯದಿಂದ ತನ್ನ ಸಹೋದರಿ ಸಾವನ್ನಪ್ಪಿರುವುದಾಗಿ ಮೃತ ಬಾಲಕಿಯ ಸಹೋದರ ದೀಪಕ್ ಸುದ್ದಿಗಾರರ ಜತೆ ಮಾತನಾಡುತ್ತ ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬಂದಿ ಮತ್ತು ಕುಟುಂಬದ ಸದಸ್ಯರ ನಡುವೆ ಜಗಳ ನಡೆದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಠಾಣಾಧಿಕಾರಿ ಆನಂದ್ ಕುಮಾರ್ ತಿಳಿಸಿದ್ದಾರೆ.