Advertisement

ಯೋಗಿ 2.0 ಸಂಪುಟಕ್ಕೆ ಯಾರು? ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿಂದು ಸಮಾಲೋಚನೆ

09:26 PM Mar 20, 2022 | Team Udayavani |

ಲಕ್ನೋ/ಇಂಫಾಲ/ಪಣಜಿ: ಉತ್ತರ ಪ್ರದೇಶದಲ್ಲಿ ದಾಖಲೆಯ ಎರಡನೇ ಬಾರಿಗೆ ಅಧಿಕಾರ ಉಳಿಸಿಕೊಂಡಿರುವ ಬಿಜೆಪಿ ಸರ್ಕಾರದ ಹೊಸ ಸಚಿವ ಸಂಪುಟ ಹೇಗೆ ಇರಲಿದೆ? ಈ ಪ್ರಶ್ನೆ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

Advertisement

2024ರ ಲೋಕಸಭೆ ಚುನಾವಣೆ, ವಿಧಾನಪರಿಷತ್‌ ಸದಸ್ಯರು, ಇತ್ತೀಚಿನ ಚುನಾವಣೆಯಲ್ಲಿ ಗೆದ್ದವರು, ಪ್ರಾದೇಶಿಕವಾರು ಪ್ರಾಬಲ್ಯ, ಜಾತಿ, ಸಮಾಜದ ವಿವಿಧ ವರ್ಗಗಳನ್ನು ಪ್ರತಿನಿಧಿಸುವಂತೆ ಸಂಪುಟ ಸದಸ್ಯರನ್ನು ಆಯ್ಕೆ ಮಾಡುವ ಬಗ್ಗೆ ಚಿಂತನ ಮಂಥನ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೋಮವಾರ ಲಕ್ನೋಗೆ ವೀಕ್ಷಕರಾಗಿ ಆಗಮಿಸಲಿದ್ದಾರೆ.

ಬಿಜೆಪಿ ನಾಯಕರಾಗಿರುವ ಸ್ವತಂತ್ರ ದೇವ್‌ ಸಿಂಗ್‌, ಬೃಜೇಶ್‌ ಪಾಠಕ್‌, ಶ್ರೀಕಾಂತ್‌ ಶರ್ಮಾ, ಕುನ್ವರ್‌ ಬೃಜೇಶ್‌ ಸಿಂಗ್‌, ಅದಿತಿ ಸಿಂಗ್‌, ಆಸಿಮ್‌ ಅರುಣ್‌ ಮತ್ತು ರಾಜೇಶ್ವರ್‌ ಸಿಂಗ್‌ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇರುವವರ ಪೈಕಿ ಪ್ರಮುಖರು ಎಂದು ಹೇಳಲಾಗುತ್ತಿದೆ.

ಇದೇ ವೇಳೆ, ಗುರುವಾರ (ಮಾ.24) ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಯೋಗಿ ಆದಿತ್ಯನಾಥ್‌ ಅವರನ್ನೇ ಅಧಿಕೃತವಾಗಿ ನಾಯಕನನ್ನಾಗಿ ಆಯ್ಕೆ ಮಾಡಲಾಗುತ್ತದೆ. ಶುಕ್ರವಾರ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಪ್ರಮುಖರು ಭಾಗವಹಿಸುವ ಸಾಧ್ಯತೆ ಇದೆ.

ಇಂದು ಹಕ್ಕು ಮಂಡನೆ:
ಗೋವಾದಲ್ಲಿ 20 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಸೋಮವಾರ (ಮಾ.21) ರಾಜ್ಯಪಾಲ ಪಿ.ಎಸ್‌.ಶ್ರೀಧರನ್‌ ಪಿಳ್ಳೆ ಅವರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಲಿದೆ.

Advertisement

ಬಿಜೆಪಿಗೆ ಮಹಾರಾಷ್ಟ್ರವಾದಿ ಗೋಮಂತಕ್‌ ಪಾರ್ಟಿ (ಎಂಜಿಪಿ) ಇಬ್ಬರು ಮತ್ತು ಮೂವರು ಪಕ್ಷೇತರ ಶಾಸಕರ ಬೆಂಬಲ ಇದೆ. ಇದರ ಜತೆಗೆ ಪಕ್ಷದ ಶಾಸಕಾಂಗ ಸಭೆ ಕೂಡ ಅದೇ ದಿನ ನಡೆಯಲಿದೆ. ಅದರಲ್ಲಿ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಸದ್ಯ ಗೊತ್ತಾಗಿರುವ ಮಾಹಿತಿ ಪ್ರಕಾರ ಹಾಲಿ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರೇ ಮುಂದುವರಿಯುವ ಸಾಧ್ಯತೆ ಅಧಿಕ.

ಮಾ.23-25ರ ಒಳಗೆ ನೂತನ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮವು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಹಿರಿಯ ಸಚಿವರು ಭಾಗವಹಿಸುವ ಸಾಧ್ಯತೆಗಳು ಇವೆ.

ಇಂದು ನಾಯಕನ ಆಯ್ಕೆ
ಉತ್ತರಾಖಂಡದಲ್ಲಿ ಸೋಮವಾರ (ಮಾ.21) ನೂತನವಾಗಿ ಆಯ್ಕೆಯಾಗಿರುವ ಬಿಜೆಪಿಯ ಶಾಸಕರು ಡೆಹ್ರಾಡೂನ್‌ನಲ್ಲಿ ಸಭೆ ಸೇರಲಿದ್ದಾರೆ. ಈ ಸಂದರ್ಭದಲ್ಲಿ ನೂತನ ಶಾಸಕಾಂಗ ಪಕ್ಷ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಹಾಲಿ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಮಿ ಚುನಾವಣೆಯಲ್ಲಿ ಸೋತಿದ್ದಾರೆ. ಅವರನ್ನೇ ಮುಂದುವರಿಸಲಾಗುತ್ತದೆಯೋ ಅಥವಾ ಹೊಸಬರನ್ನು ಆಯ್ಕೆ ಮಾಡಲಾಗುತ್ತದೆಯೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ವಿದೇಶಾಂಗ ಖಾತೆ ಸಹಾಯಕ ಸಚಿವೆ ಮೀನಾಕ್ಷಿ ಲೇಖಿ ವೀಕ್ಷಕರಾಗಿ ಆಗಮಿಸಲಿದ್ದಾರೆ. ದಿನದ ಆರಂಭದಲ್ಲಿ ನೂತನವಾಗಿ ಆಯ್ಕೆಯಾಗಿರುವ ಶಾಸಕರು ವಿಧಾನಸಭೆಯಲ್ಲಿ ಶಾಸಕರಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ಹಾಲಿ ಸಿಎಂ ಧಮಿ ಜತೆಗೆ ಶಾಸಕರಾಗಿರುವ ಸತ್ಪಾಲ್‌ ಮಹಾರಾಜ್‌, ಧನ್‌ ಸಿಂಗ್‌ ರಾವಲ್‌ ಮತ್ತು ರಾಜ್ಯಸಭೆಯ ಸದಸ್ಯ ಅನಿಲ್‌ ಬಲುನಿ ಹೆಸರುಗಳು ಮುಖ್ಯಮಂತ್ರಿ ಹುದ್ದೆಗೆ ಕೇಳಿಬರುತ್ತಿವೆ.

ಮಣಿಪುರಕ್ಕೆ ಬಿರೇನ್‌ ಸಿಂಗ್‌ ಅವರೇ ಸಿಎಂ 
ಬಿಜೆಪಿ ಬಹುಮತದೊಂದಿಗೆ ಗೆದ್ದಿರುವ ಮಣಿಪುರದಲ್ಲಿ ಯಾರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಪ್ರಶ್ನೆಗೆ ಕೊನೆಗೂ ತೆರೆಬಿದ್ದಿದೆ. ಚುನಾವಣಾ ಫ‌ಲಿತಾಂಶ ಹೊರಬಿದ್ದು 10 ದಿನಗಳ ನಂತರ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಬಿರೇನ್‌ ಸಿಂಗ್‌ರನ್ನೇ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ.

ಮುಖ್ಯಮಂತ್ರಿ ಪಟ್ಟಕ್ಕಾಗಿ ಬಿರೇನ್‌ ಸಿಂಗ್‌ ಜೊತೆ, ಬಿಜೆಪಿ ಮುಖಂಡರಾದ ಬಿಸ್ವಜಿತ್‌ ಸಿಂಗ್‌ ಮತ್ತು ಯುಮ್ನಾಮ್‌ ಖೇಮ್‌ಚಂದ್‌ ಸ್ಪರ್ಧೆಯಲ್ಲಿದ್ದರು. ಅವರೆಲ್ಲರೂ ಶನಿವಾರ ನವದೆಹಲಿಯಲ್ಲಿ ಹೈಕಮಾಂಡ್‌ ಜೊತೆ ಚರ್ಚೆ ನಡೆಸಿದ್ದರು. ಭಾನುವಾರ ಕೇಂದ್ರ ವಿತ್ತ ಸಚಿವೆ ಸೀತಾರಾಮನ್‌ ಮತ್ತು ಕಾನೂನು ಮತ್ತು ನ್ಯಾಯ ಸಚಿವ ಕಿರಣ್‌ ರಿಜಿಜು ನೇತೃತ್ವದಲ್ಲಿ ಭಾನುವಾರ ಇಂಫಾಲ್‌ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿರೇನ್‌ ಸಿಂಗ್‌ ಹೆಸರನ್ನೇ ಆಯ್ಕೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next