Advertisement
ರಾಜನಾಥ್ ಸಿಂಗ್ ಎರಡನೇಯವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಎರಡನೇ ಅವಧಿಗೂ ಮೋದಿ ಸಂಪುಟದಲ್ಲಿ ನಂ.2ರ ಸ್ಥಾನದಲ್ಲಿಯೇ ಉಳಿಯಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೊನೆಯ ಹಂತದ ವರೆಗೂ ಅಮಿತ್ ಶಾ ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆಯೇ ಎಂಬ ಬಗ್ಗೆ ಕುತೂಹಲ ಉಳಿಸಿಕೊಳ್ಳಲಾಗಿತ್ತು. ಅದೇ ರೀತಿ ವಿದೇಶಾಂಗ ಕಾರ್ಯದರ್ಶಿಯಾಗಿ ನಿವೃತ್ತರಾಗಿರುವ ಸುಬ್ರಹ್ಮಣ್ಯಂ ಜೈಶಂಕರ್ ಸಂಪುಟ ಸೇರ್ಪಡೆಯಾಗುವುದು ಅಚ್ಚರಿಗೆ ಕಾರಣವಾಗಿತ್ತು. ಕಳೆದ ಬಾರಿಯ ಸಂಪುಟದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವರಾಗಿದ್ದ ರಾಧಾಮೋಹನ್ ಸಿಂಗ್‌ಗೆ ಈ ಬಾರಿ ಅವಕಾಶ ನೀಡಲಾಗಿಲ್ಲ. ಮಾಜಿ ಒಲಿಂಪಿಯನ್ ರಾಜ್ಯವರ್ಧನ ಸಿಂಗ್ ರಾಥೋಡ್‌ಗೆ ಈ ಬಾರಿ ಅವಕಾಶ ನೀಡಲಾಗಿಲ್ಲ.
Related Articles
ಈ ಬಾರಿಯ ಮೋದಿ ಸಂಪುಟದಲ್ಲಿ ಆರು ಮಹಿಳೆಯರಿದ್ದಾರೆ. ಕ್ಯಾಬಿನೆಟ್ ದರ್ಜೆಯಲ್ಲಿ ನಿರ್ಮಲಾ ಸೀತಾರಾಮನ್, ಸ್ಮತಿ ಇರಾನಿ, ಹರ್‌ಸಿಮ್ರತ್ ಕೌರ್ ಬಾದಲ್ ಇದ್ದರೆ, ರೇಣುಕಾ ಸಿಂಗ್ ಸರುತ, ದೇಬಶ್ರೀ ಚೌಧರಿ, ಸಾಧ್ವಿ ನಿರಂಜನಾ ಜ್ಯೋತಿ ರಾಜ್ಯ ಸಚಿವೆಯರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನಿರ್ಮಲಾ ಕಳೆದ ಬಾರಿ ರಕ್ಷಣಾ ಖಾತೆಯನ್ನು ನಿರ್ವಹಿಸಿದ್ದರು. ಇನ್ನು ಸ್ಮತಿ ಇರಾನಿ ಮಾನವ ಸಂಪನ್ಮೂಲ ಹಾಗೂ ಜವಳಿ ಖಾತೆಗಳನ್ನು ನಿರ್ವಹಿಸಿದ್ದರು. ಹರ್‌ಸಿಮ್ರತ್ ಕೌರ್ ಆಹಾರ ಸಂಸ್ಕರಣಾ ಖಾತೆ ಸಚಿವೆಯಾಗಿದ್ದರು. ಈ ಮೂವರೂ ಎರಡನೇ ಅವಧಿಗೆ ಮುಂದುವರಿದಿದ್ದರೆ, ಸಹಾಯಕ ದರ್ಜೆ ಸಚಿವರಾಗಿ ಪ್ರಮಾಣ ಸ್ವೀಕರಿಸಿರುವ ಮೂವರು ಸಂಸದೆಯರು ಮೊದಲ ಬಾರಿಗೆ ಸಂಪುಟ ಸೇರುತ್ತಿದ್ದಾರೆ.
Advertisement
ಸಂಪುಟದಲ್ಲಿ ನಿವೃತ್ತ ಅಧಿಕಾರಿಗಳುಮೋದಿ ಸರ್ಕಾರದಲ್ಲಿ ಹಲವಾರು ನಿವೃತ್ತ ಅಧಿಕಾರಿಗಳು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಿದೇಶಾಂಗ ಇಲಾಖೆ ಮಾಜಿ ಕಾರ್ಯದರ್ಶಿ, ಸುಬ್ರಹ್ಮಣ್ಯಂ ಜೈಶಂಕರ್ ಸಚಿವರಾಗಿ ಆಯ್ಕೆಯಾಗಿದ್ದಾರೆ. ಅವರು ರಾಜ್ಯಸಭೆ ಮೂಲಕ ಸಂಸತ್ ಪ್ರವೇಶಿಸಲಿದ್ದಾರೆ. ಭೂಸೇನಾ ನಿವೃತ್ತ ಮುಖ್ಯಸ್ಥ ಜ. ವಿ.ಕೆ.ಸಿಂಗ್ 2ನೇ ಬಾರಿಗೆ ಕೇಂದ್ರಸಚಿವರಾಗಿದ್ದಾರೆ. ಪಂಜಾಬ್ ಮೂಲದ ಅಧಿಕಾರಿ ಹರ್ದೀಪ್ ಸಿಂಗ್ ಪುರಿ 2ನೇ ಬಾರಿಗೆ ಸಚಿವರಾಗಿದ್ದಾರೆ. ಅವರು ವಿದೇಶಾಂಗ ಸಚಿವಾಲಯದ ಮಾಜಿ ಕಾರ್ಯದರ್ಶಿ, ವಿಶ್ವ ಸಂಸ್ಥೆ ಭದ್ರತಾ ಆಯೋಗದ ಅಧ್ಯಕ್ಷರೂ ಆಗಿದ್ದರು. ನಿವೃತ್ತ ಐಎಎಸ್ ಅಧಿಕಾರಿ, ಜಲಂಧರ್‌ನ ನಿವೃತ್ತ ಜಿಲ್ಲಾಧಿಕಾರಿ ಸೋಮ ಪ್ರಕಾಶ್, ಇದೇ ಮೊದಲ ಬಾರಿಗೆ ಸಚಿವ ಸಂಪುಟ ಸೇರಿದ್ದಾರೆ. ಕೇಂದ್ರ ಗೃಹ ಖಾತೆ ನಿವೃತ್ತ ಕಾರ್ಯದರ್ಶಿ ಆರ್.ಕೆ. ಸಿಂಗ್ ಮತ್ತೂಮ್ಮೆ ಕೇಂದ್ರದಲ್ಲಿ ಸಚಿವರಾಗಿದ್ದಾರೆ.
ಆಗ ಕಾರ್ಯದರ್ಶಿ, ಈಗ ಸಚಿವ
ಸುಬ್ರಹ್ಮಣ್ಯಂ ಜೈಶಂಕರ್. ಹೀಗೆಂದರೆ ಗೊತ್ತಾಗಲಾರದು. ಎಸ್.ಜೈಶಂಕರ್ ಎಂದರೆ ಅರಿವಾದೀತು. ಮೋದಿ ನೇತೃತ್ವದ ಎರಡನೇ ಅವಧಿಯ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಐಎಫ್ಎಸ್ ಅಧಿಕಾರಿ. 1979ರಿಂದ 1981ರ ವರೆಗೆ ಸೋವಿಯತ್ ಒಕ್ಕೂಟದ ಭಾರತೀಯ ಮಿಷನ್‌ನಲ್ಲಿಯ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದರು. 2012ರಲ್ಲಿ ಚೀನಾ ಜತೆ ಉಂಟಾದ ಡೋಕ್ಲಾಂ ವಿವಾದ ಪರಿಹರಿಸಿದ ಹೆಗ್ಗಳಿಕೆ ಅವರದ್ದು.
ತಡವರಿಸಿದ ಕಿಶನ್ ರೆಡ್ಡಿ
ಮೋದಿ ಸಂಪುಟದಲ್ಲಿ ಸಹಾಯಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಸಿಕಂದರಾಬಾದ್‌ನ ಸಂಸದ ಜಿ.ಕಿಶನ್ ರೆಡ್ಡಿ, ಪ್ರಮಾಣ ವಚನ ಓದುವಾಗ ತುಸು ಎಡವಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೇ ತಪ್ಪನ್ನು ತಿದ್ದಿ, ಮತ್ತೆ ಓದುವಂತೆ ತಿಳಿಸಿದರು. ನಂತರ ರೆಡ್ಡಿ ಸರಿಯಾಗಿ ಪ್ರಮಾಣ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕರಿಸಿದ ನಂತರ ಭಾರತ್ ಮಾತಾಕಿ ಜೈ ಎಂದಿದ್ದು ಎಲ್ಲರ ಗಮನ ಸೆಳೆದಿದೆ.
ಘಟಾನುಘಟಿಗಳೇ ಸಂಪುಟದಿಂದ ಹೊರಕ್ಕೆ
ಹಾಲಿ ಸಾಲಿನಲ್ಲಿ ಘಟಾನುಘಟಿಗಳೇ ಮೋದಿ ಸಂಪುಟದಿಂದ ಹೊರಗೆ ಉಳಿದಿದ್ದಾರೆ. ಆರೋಗ್ಯದ ಕಾರಣದಿಂದ ಅರುಣ್ ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್ ಹೊರಗುಳಿದಿದ್ದಾರೆ. ಗುರುವಾರ ಪ್ರಮಾಣ ವಚನ ಸ್ವೀಕರಿಸುವ ಸಚಿವರ ಸಂಭಾವ್ಯ ಪಟ್ಟಿಯಲ್ಲಿ ಸುಷ್ಮಾ ಸ್ವರಾಜ್ 2ನೇ ಬಾರಿಗೆ ಸಚಿವರಾಗಲಿದ್ದಾರೆ ಎಂದೇ ವಿಶ್ಲೇಷಿಸಲಾಗಿತ್ತು. ಹಿಂದಿನ ಸಾಲಿನಲ್ಲಿ ಆರೋಗ್ಯ ಸಚಿವರಾಗಿದ್ದ ಜೆ.ಪಿ.ನಡ್ಡಾ ಸಂಪುಟದಲ್ಲಿಲ್ಲ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೇಂದ್ರ ಸಂಪುಟಕ್ಕೆ ಸೇರಿರುವುದರಿಂದ ಪಕ್ಷದ ನೇತೃತ್ವವನ್ನು ನಡ್ಡಾಗೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಉಳಿದಂತೆ ಸುರೇಶ್ ಪ್ರಭು, ಮಹೇಶ್ ಶರ್ಮಾ, ರಾಜ್ಯವರ್ಧನ ಸಿಂಗ್ ಸಿಂಗ್ ರಾಥೋಡ್, ಜಯಂತ್ ಸಿನ್ಹಾ, ಸತ್ಯಪಾಲ್ ಸಿಂಗ್, ಕರ್ನಾಟಕದಿಂದ ಅನಂತಕುಮಾರ್ ಹೆಗಡೆ ಕೂಡ ಸಂಪುಟದಲ್ಲಿ ಸ್ಥಾನ ಪಡೆದಿಲ್ಲ.
ಜಗನ್ ಗೈರು
ಆಂಧ್ರದಲ್ಲಿಯೂ ಗುರುವಾರ ಸರ್ಕಾರ ರಚನೆ ಪ್ರಕ್ರಿಯೆ ನಡೆದಿದ್ದು, ಇದರಿಂದಾಗಿ ನೂತನ ಆಂಧ್ರ ಸಿಎಂ ವೈ. ಎಸ್. ಜಗನ್‌ಮೋಹನ ರೆಡ್ಡಿ ಮತ್ತು ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರೆಡ್ಡಿ ನವದೆಹಲಿಯಲ್ಲಿ ನರೇಂದ್ರ ಮೋದಿ ಪ್ರಮಾಣವಚನ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ಜಗನ್ ಪ್ರಮಾಣ ವಚನ ಸಮಾರಂಭ ದಲ್ಲಿ ಕೆಸಿಆರ್ ಕೂಡ ಭಾಗವಹಿಸಿದ್ದರು. ಈ ವೇಳೆ ಔತಣಕೂಟದಲ್ಲಿ ಭಾಗವಹಿಸಿದ್ದರಿಂದಾಗಿ ಇಬ್ಬರೂ ನಾಯಕರಿಗೆ ನವದೆಹಲಿ ತಲುಪುವುದು ವಿಳಂಬವಾಗಿದೆ.
ಚಿತ್ರೋದ್ಯಮವೂ ಸಾಕ್ಷಿ
ಸಮಾರಂಭದಲ್ಲಿ ಭಾರತೀಯ ಚಿತ್ರೋದ್ಯಮದ ಅಗ್ರಗಣ್ಯ ನಟರು, ನಿರ್ಮಾಪಕರು, ನಿರ್ದೇಶಕರು ಪಾಲ್ಗೊಂಡಿದ್ದರು. ರಜನೀಕಾಂತ್, ಶಾಹೀದ್ ಕಪೂರ್, ಸುಶಾಂತ್ ಸಿಂಗ್ ರಜಪೂತ್, ಸಿದ್ದಾರ್ಥ್ ರೈ ಕಪೂರ್, ಕಂಗನಾ ರನೌತ್, ದಿವ್ಯಾ ಖೋಸ್ಲಾ ಕುಮಾರ್, ಮಂಗೇಶ್ ಹಂಡವಾಲೆ, ಕಾಜಲ್ ಅಗ ರ್ವಾಲ್, ಬೋನಿ ಕಪೂರ್, ಕರಣ್ ಜೋಹರ್, ರಾಜ್‌ಕುಮಾರ್ ಹಿರಾನಿ, ಅಭಿಶೇಕ್ ಕಪೂರ್, ಆನಂದ್ ಎಲ್ ರಾಯ್ ಮುಂತಾದವರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಬೋನಿ ಕಪೂರ್, ಸಮಾರಂಭದಲ್ಲಿ ಪಾಲ್ಗೊಳ್ಳುವ ಅದೃಷ್ಟ ಪಡೆದಿರುವುದಕ್ಕೆ ಖುಷಿಯಾಗಿದೆ ಎಂದರು