Advertisement

ಉದ್ಯಮಿಗಳ ಜತೆ ನಿಲ್ಲಲು ಹೆದರಲ್ಲ: ಪ್ರಧಾನಿ ಮೋದಿ

05:10 AM Jul 30, 2018 | Team Udayavani |

ಲಕ್ನೋ: ಉದ್ಯಮಿಗಳೊಂದಿಗಿನ ತಮ್ಮ ಸ್ನೇಹದ ಕುರಿತು ಅಣಕವಾಡುವ ವಿಪಕ್ಷಗಳಿಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಕೈಗಾರಿಕೋದ್ಯಮಿಗಳ ಜತೆ ಗುರುತಿಸಿಕೊಳ್ಳಲು ತಾವು ಹೆದರುವುದಿಲ್ಲ, ನನ್ನ ಪ್ರಜ್ಞೆ ಸ್ಪಷ್ಟವಾಗಿದೆ ಎಂದಿದ್ದಾರೆ. ರೈತರು, ಕಾರ್ಮಿಕರು, ಬ್ಯಾಂಕರ್‌ ಗಳು ಹಾಗೂ ಸರ್ಕಾರಿ ನೌಕರರಂತೆ ದೇಶದ ಅಭಿವೃದ್ಧಿಯಲ್ಲಿ ಉದ್ಯಮಿಗಳ ಪಾಲೂ ಇದೆ. ಉತ್ತಮ ಹಾಗೂ ಸ್ಪಷ್ಟ ಉದ್ದೇಶ ಹೊಂದಿರುವ ಯಾರೊಂದಿಗಾದರೂ ಗುರುತಿಸಿಕೊಳ್ಳಲು ಸಿದ್ಧ ಎಂದರು. ಇದಕ್ಕೆ ಗಾಂಧೀಜಿಯ ಉದಾಹರಣೆ ನೀಡಿದ ಮೋದಿ, ಗಾಂಧೀಜಿ ಅವರ ಉದ್ದೇಶ ಶುದ್ಧವಾಗಿತ್ತು, ಹಾಗಾಗಿ ಬಿರ್ಲಾ ಕುಟುಂಬದೊಂದಿಗೆ ಗುರುತಿಸಿಕೊಳ್ಳಲು ಹಿಂಜರಿಯುತ್ತಿರಲಿಲ್ಲ ಎಂದು ನೆನಪಿಸಿದರು.

Advertisement

ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿ ರವಿವಾರ ನಡೆದ 81 ಹೂಡಿಕೆ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಬಯಸದರು ತೆರೆಮರೆಯಲ್ಲಷ್ಟೇ ಭೇಟಿ ಮಾಡುತ್ತಾರೆ, ಅವರು ಹೆದರುತ್ತಿರುತ್ತಾರೆ ಎಂದು ವಿಪಕ್ಷಗಳನ್ನು ಜರೆದರು. ದೇಶದ ಅಭಿವೃದ್ಧಿಯ ಪಾಲುದಾರರಾಗಿರುವ ಉದ್ಯಮಿಗಳಿಗೆ ಲೂಟಿಕೋರರೆಂದು ಹಣೆಪಟ್ಟಿ ಕಟ್ಟಲಾಗುತ್ತಿದೆ. ಇದೇನಿದು? ಯಾರು ತಪ್ಪು ಮಾಡುತ್ತಾರೋ ಅವರು ದೇಶ ತೊರೆಯುತ್ತಾರೆ ಅಥವಾ ಜೈಲಲ್ಲಿ ಜೀವನ ಕಳೆಯುತ್ತಾರೆ. ಆದರೆ ಹಿಂದೆಲ್ಲಾ ಇದೆಲ್ಲಾ ಆಗುತ್ತಿರಲಿಲ್ಲ, ಯಾಕೆಂದರೆ ತೆರೆಯ ಹಿಂದೆ ಎಲ್ಲವೂ ನಡೆಯುತ್ತಿತ್ತು. ಯಾರ ವಿಮಾನದಲ್ಲಿ ಅವರು ಪ್ರಯಾಣಿಸುತ್ತಿದ್ದರು ಎಂಬುದು ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸುವ ಮೂಲಕ ಹೆಸರೆತ್ತದೆಯೇ ಮಲ್ಯ-ಕಾಂಗ್ರೆಸ್‌ ನಾಯಕರ ಸಂಬಂಧವನ್ನು ಮೋದಿ ವ್ಯಂಗ್ಯವಾಡಿದರು. ನಾನು ಕೇವಲ 4 ವರ್ಷಗಳಿಂದ ಅಧಿಕಾರದಲ್ಲಿದ್ದೇನೆ. 70 ವರ್ಷಗಳಿಂದ ದೇಶ ಎದುರಿಸುತ್ತಿರುವ ಸಮಸ್ಯೆಗೆ ನೀವೇ ಹೊಣೆ ಎಂದು ಕಾಂಗ್ರೆಸ್‌ ಅನ್ನು ಕುಟುಕಿದರು.

ಉತ್ತರಪ್ರದೇಶದಲ್ಲಿ, ಇಷ್ಟೊಂದು ಕಡಿಮೆ ಸಮಯದಲ್ಲಿ ಹಳೆ ವಿಧಾನಗಳು ಬದಲಾಗಿವೆ ಹಾಗೂ ಉದ್ಯಮಿಗಳ ವಿಶ್ವಾಸ ಗಳಿಸಲಾಗಿದೆ. ದಾಖಲೆಯ ಈ ಹೂಡಿಕೆಯು ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ಕಾರ್ಯ ಸಂಸ್ಕೃತಿ ಬದಲಾಗಿರುವುದನ್ನು ತೋರಿಸುತ್ತದೆ ಎಂದು ಮೋದಿ ಶ್ಲಾಘಿಸಿದರು. ಕುಮಾರ ಮಂಗಲಂ ಬಿರ್ಲಾ, ಗೌತಮ್‌ ಅದಾನಿ, ಎಸ್ಸೆಲ್‌ ಗ್ರೂಪ್‌ ನ ಸುಭಾಷ್‌ ಚಂದ್ರ ಹಾಗೂ ಐಟಿಸಿಯ ಸಂಜೀವ್‌ ಪುರಿ ಸಹಿತ 80 ಪ್ರಮುಖ ಉದ್ಯಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

2.1 ಲಕ್ಷ ಉದ್ಯೋಗ ಸೃಷ್ಟಿ
ಉತ್ತರಪ್ರದೇಶದ ಕೈಗಾರಿಕೀಕರಣಕ್ಕೆ ಭಾರೀ ಉತ್ತೇಜನ ನೀಡುವ ದಾಖಲೆಯ 81 ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಿದರು. ಇವುಗಳ ಒಟ್ಟಾರೆ ಮೌಲ್ಯ 60 ಸಾವಿರ ಕೋಟಿ ರೂ. ಆಗಿದೆ. ಕಳೆದ ಫೆಬ್ರವರಿಯಲ್ಲಿ ನಡೆದ ಹೂಡಿಕೆದಾರರ ಸಮಾವೇಶದ ಫ‌ಲವಾಗಿ ಈ ಹೂಡಿಕೆಗಳು ಹರಿದು ಬಂದಿವೆ. ಈ ಯೋಜನೆಗಳಿಂದ 2.1 ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಉ.ಪ್ರ. ಸಿಎಂ ಯೋಗಿ ಹೇಳಿದ್ದಾರೆ.

ಮೊದಲ ಎಂ.ಒ.ಎಕ್ಸ್‌.ಗೆ ಶಂಕುಸ್ಥಾಪನೆ 
ನೋಯ್ಡಾದ ಡಬ್ಲ್ಯೂಟಿಒದಲ್ಲಿ ದೇಶದ ಮೊದಲ ಮೊಬೈಲ್‌ ಓಪನ್‌ ಎಕ್ಸ್‌ಚೇಂಜ್‌ ಝೋನ್‌ (ಎಂಒಎಕ್ಸ್‌)ಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಮೊಬೈಲ್‌ ಉತ್ಪಾದಕ, ಸಂಶೋಧಕ ಸಂಸ್ಥೆಗಳಿಗೆ ಈ ಎಂಒಎಕ್ಸ್‌ ಟೆಕ್‌ ಝೋನ್‌ ಸಮಗ್ರ ವೇದಿಕೆ ಒದಗಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next