ದಾವಣಗೆರೆ: ಉತ್ತರ ಪ್ರದೇಶದ ಬದೌನ್‌ನ ದೇವಸ್ಥಾನದಲ್ಲಿ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಕರ್ನಾಟಕ ಜನಶಕ್ತಿ ಸಂಘಟನೆ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಈಚೆಗೆ ಭಾರತದಲ್ಲಿ ಸರಣಿ ರೂಪದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಬರ್ಬರ ಅತ್ಯಾಚಾರ, ಕೊಲೆ ಖಂಡನೀಯ. ಉತ್ತರ ಪ್ರದೇಶದ ದೇವಾಲಯದ ಅರ್ಚಕ ಮತ್ತು ಸಹಚರರಿಂದ ಭೀಕರವಾದ ಅತ್ಯಾಚಾರ -ಕೊಲೆಗೆ ಗುರಿಯಾದ ಮಹಿಳೆಗೆ ನ್ಯಾಯ ದೊರಕಲೇಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಉತ್ತರಪ್ರದೇಶದ ಸರ್ಕಾರ, ಇಡೀ ಭಾರತಕ್ಕೆ ಅತ್ಯಾಚಾರ ಮತ್ತು ಆರೋಪಿಗಳನ್ನು ರಕ್ಷಿಸುವ ಕೆಟ್ಟ ಮಾದರಿಯನ್ನು ಸೃಷ್ಟಿಸುತ್ತಿದೆ. ಕಾನೂನು ಸುವ್ಯವಸ್ಥೆಯ ಪಾಲನೆ ಹಾಗೂ ಮಹಿಳೆಯರ ರಕ್ಷಣೆಯ ಸಂವಿಧಾನಬದ್ಧ ಕರ್ತವ್ಯ ಪಾಲಿಸಲು ಪದೇ ಪದೇ ವಿಫಲವಾಗುತ್ತಿರುವ ಕಾರಣಕ್ಕೆ ಸರ್ಕಾರವನ್ನು ವಜಾಗೊಳಿಸಬೇಕು.
ಇದನ್ನೂ ಓದಿ:ಹಣದ ಹಿಂದೆ ಬೆನ್ನತ್ತಿದವನ ಬಾಳು ಹಾಳು; ಡಾ| ಸೋಮನಾಥ
ಬದೌನ್‌ನ ದೇವಾಲಯದಲ್ಲಿ ಅರ್ಚಕ ಮತ್ತಿತರರು ಸೇರಿ 50 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರದ ಕ್ರೌರ್ಯ ಎಷ್ಟಿತ್ತೆಂದರೆ ದೆಹಲಿಯ ನಿರ್ಭಯ ಪ್ರಕರಣದ ರೀತಿಯಲ್ಲೇ ಇತ್ತು ಎಂದು ದೂರಿದರು. ಸಂಘಟನೆಯ ಸತೀಶ್ ಅರವಿಂದ್, ಪವಿತ್ರಾ, ಆದಿಲ್ ಖಾನ್ ಇತರರು ಇದ್ದರು.