ಲಕ್ನೋ: ಉತ್ತರಪ್ರದೇಶದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಮಂಗಳವಾರ ಮತ್ತೆ 12 ಮಂದಿ ಮಳೆ ಸಂಬಂಧಿ ಅನಾಹುತಗಳಿಗೆ ಬಲಿಯಾಗಿದ್ದಾರೆ. ಈ ಮೂಲಕ ಒಟ್ಟಾರೆ ಮೃತರ ಸಂಖ್ಯೆ 92ಕ್ಕೇರಿಕೆಯಾಗಿದೆ. ಗಾಯಗೊಂಡವರ ಸಂಖ್ಯೆ 91ಕ್ಕೇರಿದೆ.
ಮಂಗಳವಾರ ಕಾನ್ಪುರ ದೇಹಾತ್‌ನಲ್ಲಿ ಮೂವರು, ಹತ್ರಾಸ್‌ನಲ್ಲಿ ಇಬ್ಬರು, ಚಿತ್ರಕೂಟ, ಅಲಹಾಬಾದ್, ಔರೆಯಾ, ಉನ್ನಾವ್, ಅಮೇಠಿ, ಜೌನ್‌ಪುರ ಮತ್ತು ಫತೇಪುರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಮಳೆ ಸಂಬಂಧಿ ದುರಂತಗಳಿಂದಾಗಿ ಕಳೆದ ವಾರದಿಂದ ಒಟ್ಟಾರೆ 59 ಜಾನುವಾರುಗಳು ಅಸುನೀಗಿದ್ದರೆ, 600ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಭಾರೀ ಮಳೆ: ಇದೇ ವೇಳೆ, ನೈಋತ್ಯ ಮಾರುತವು ಉತ್ತರ ಪ್ರದೇಶದಲ್ಲಿ ಸಕ್ರಿಯವಾಗಿರುವ ಕಾರಣ ಸಿಡಿಲಿನಿಂದ ಕೂಡಿದ ಮಳೆಯಾಗುತ್ತಿದೆ. ಬುಧವಾರವೂ ಇಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೇರಳದಲ್ಲಿ ಮೃತರ ಸಂಖ್ಯೆ 141ಕ್ಕೇರಿಕೆ: ಏತನ್ಮಧ್ಯೆ, ಕೇರಳದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಇಡುಕ್ಕಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಅಪಾಯದ ಹಂತ ತಲುಪುತ್ತಿದ್ದು, ಅಲರ್ಟ್ ಆಗಿರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಂಗಳ ವಾರ ಮುರಿದುಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ 74ರ ವೃದ್ಧರೊಬ್ಬರು ಮೃತಪಟ್ಟರೆ, ಮಲಪ್ಪುರಂನಲ್ಲಿ ಮತ್ತೂಬ್ಬ ವ್ಯಕ್ತಿ ಸಾವಿ ಗೀಡಾಗಿದ್ದಾರೆ. ಈ ಮೂಲಕ ಕಳೆದ 2 ತಿಂಗಳಲ್ಲಿ ಮಳೆ ಸಂಬಂಧಿ ದುರಂತಗಳಿಗೆ ಬಲಿಯಾದವರ ಸಂಖ್ಯೆ 141ಕ್ಕೇರಿಕೆಯಾಗಿದೆ.
ಯಮುನೆಯ ಗುಣಮಟ್ಟ ಸುಧಾರಣೆ: ಯಮುನಾ ನದಿಯಲ್ಲಿ ಪ್ರವಾಹ ಕಾಣಿಸಿ ಕೊಂಡಿರುವ ಹಿನ್ನೆಲೆಯಲ್ಲಿ ನದಿಯಲ್ಲಿನ ಕೊಳಚೆಗಳೆಲ್ಲ ಕೊಚ್ಚಿಹೋಗಿದ್ದು, ನೀರಿನ ಗುಣಮಟ್ಟ ಸುಧಾರಿಸಿದೆ ಎಂದು ತಜ್ಞರು ಹೇಳಿದ್ದಾರೆ. ನೀರಿನಲ್ಲಿನ ಆಮ್ಲಜನಕದ ಪ್ರಮಾಣ ಹೆಚ್ಚಾಗಿದ್ದು, ಅದು ನೀರನ್ನು ಸ್ವತ್ಛಗೊಳಿಸಿ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಹೀಗಾಗಿ, ಪ್ರಸ್ತುತ ಯಮುನೆಯು ಆರೋಗ್ಯಕರವಾಗಿದ್ದಾಳೆ ಎಂದೂ ಅವರು ತಿಳಿಸಿದ್ದಾರೆ.