ಕಾನ್ಪುರ್: ಕೋವಿಡ್ ನ ಹೊಸ ರೂಪಾಂತರಿ ತಳಿ ಒಮಿಕ್ರಾನ್ ಸೋಂಕಿಗೆ ಹೆದರಿ ಕಾನ್ಪುರ್ ಮೆಡಿಕಲ್ ಕಾಲೇಜಿನ ವಿಧಿವಿಜ್ಞಾನ ಹಿರಿಯ ಪ್ರೊಫೆಸರ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಪರಾರಿಯಾಗಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ಶುಕ್ರವಾರ(ಡಿಸೆಂಬರ್ 03) ನಡೆದಿದೆ.
ಇದನ್ನೂ ಓದಿ:ಟೀಂ ಇಂಡಿಯಾದ ದ.ಆಫ್ರಿಕಾ ಸರಣಿ ಮೊಟಕು: ಕೋವಿಡ್ ಭೀತಿಯಿಂದ ಟಿ20 ಸರಣಿ ಮುಂದೂಡಿಕೆ
ಒಮಿಕ್ರಾನ್ ಗೆ ಹೆದರಿ ಪತ್ನಿ, ಮಕ್ಕಳನ್ನು ಕೊಂದು ಮನೆಯಿಂದ ಪರಾರಿಯಾಗುವ ಮೊದಲು ತನ್ನ ಸಹೋದರನಿಗೆ ವಾಟ್ಸಪ್ ಮೂಲಕ ವಿಷಯ ತಿಳಿಸಿರುವುದಾಗಿ ವರದಿ ವಿವರಿಸಿದೆ. ಘಟನಾ ಸ್ಥಳದಲ್ಲಿ ಸುಮಾರು 10 ಪುಟಗಳ ಸೂಸೈಡ್ ನೋಟ್ ಸಿಕ್ಕಿದ್ದು, ಸಹೋದರನಿಗೆ ಕಳುಹಿಸಿರುವ ವಾಟ್ಸಪ್ ಸಂದೇಶದಲ್ಲಿ ತಮ್ಮ ಕುಟುಂಬ ಗಂಭೀರ ಮಾನಸಿಕ ಒತ್ತಡದಲ್ಲಿರುವುದಾಗಿ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಈ ಸೋಂಕಿನಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ನಾನು ನನ್ನ ಪತ್ನಿ, ಮಕ್ಕಳನ್ನು ಹತ್ಯೆಗೈದಿದ್ದೇನೆ. ಇದಕ್ಕೆ ಬೇರೆ ಯಾರೂ ಹೊಣೆಗಾರರಲ್ಲ ಎಂದು ಪ್ರೊಫೆಸರ್ ಸುಶೀಲ್ ಸಿಂಗ್ ಡೆತ್ ನೋಟ್ ನಲ್ಲಿ ಬರೆದಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸುಶೀಲ್ ಸಿಂಗ್ ಕಾನ್ಪುರ್ ನ ಮಂಧಾನದ ಖಾಸಗಿ ಮೆಡಿಕಲ್ ಕಾಲೇಜಿನ ವಿಧಿವಿಜ್ಞಾನ ಡಿಪಾರ್ಟ್ ಮೆಂಟ್ ನ ಮುಖ್ಯಸ್ಥರಾಗಿದ್ದರು ಎಂದು ವರದಿ ತಿಳಿಸಿದೆ. ಘಟನೆ ನಡೆದ ಕಲ್ಯಾಣ್ ಪುರ್ ಡಿವಿನಿಟಿ ಹೋಮ್ ಅಪಾರ್ಟ್ ಮೆಂಟ್ ನ ಐದನೇ ಅಂತಸ್ತಿಗೆ ಪೊಲೀಸರು ಭೇಟಿ ನೀಡಿದ ನಂತರ ಬಾಗಿಲನ್ನು ಒಡೆದಾಗ, ಪ್ರೊಫೆಸರ್ ಪತ್ನಿ ಚಂದ್ರಪ್ರಭಾ (50ವರ್ಷ), ಪುತ್ರ ಶಿಖರ್ ಸಿಂಗ್ (21ವರ್ಷ), ಪುತ್ರಿ ಖುಷಿ ಸಿಂಗ್ (16ವರ್ಷ) ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು.
ಆರೋಪಿ ಪ್ರೊಫೆಸರ್ ಸಿಂಗ್ ನಾಪತ್ತೆಯಾಗಿದ್ದು, ಆತ ಎಲ್ಲಿ ಅಡಗಿರಬಹುದು ಅಥವಾ ಬೇರೆ ಎಲ್ಲಿಯಾದರೂ ಆತ್ಮಹತ್ಯೆಗೆ ಶರಣಾಗಿರಬಹುದೇ ಎಂಬುದು ಶಂಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ, ಆರೋಪಿಯನ್ನು ಬಂಧಿಸಲು ಮೂರು ತಂಡವನ್ನು ರಚಿಸಲಾಗಿದೆ ಎಂದು ಕಮಿಷನರ್ ಅಸೀಮ್ ಅರುಣ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.