Advertisement

Ranji match: ಉತ್ತರಪ್ರದೇಶ ಬೃಹತ್‌ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ

11:35 PM Nov 15, 2024 | Team Udayavani |

ಲಕ್ನೋ: ರಣಜಿ ಪಂದ್ಯದ 3ನೇ ದಿನ ಪ್ರವಾಸಿ ಕರ್ನಾಟಕದ ವಿರುದ್ಧ ಉತ್ತರಪ್ರದೇಶ 2ನೇ ಇನಿಂಗ್ಸ್‌ನಲ್ಲಿ 5 ವಿಕೆಟ್‌ ನಷ್ಟಕ್ಕೆ 325 ರನ್‌ ಗಳಿಸಿದೆ. ಒಟ್ಟಾರೆ 139 ರನ್‌ ಮುನ್ನಡೆ ಗಳಿಸಿದೆ. ಶನಿವಾರ ಪಂದ್ಯದ ಕೊನೆಯ ದಿನವಾಗಿದ್ದು, ಇಲ್ಲಿ ಇತ್ತಂಡಗಳು ನೀಡುವ ಪ್ರದರ್ಶನದ ಆಧಾರದ ಮೇಲೆ ಫ‌ಲಿತಾಂಶ ನಿರ್ಧಾರವಾಗಲಿದೆ.

Advertisement

ಒಂದು ವೇಳೆ ಉತ್ತರಪ್ರದೇಶ ಶನಿವಾರ ಬೇಗ ಆಲೌಟಾದರೆ, ರಾಜ್ಯಕ್ಕೆ ಗೆಲ್ಲುವ ಅವಕಾಶವಿದೆ. ಗೆದ್ದರೆ ರಾಜ್ಯಕ್ಕೆ 6 ಅಂಕ ಸಿಗಲಿದ್ದು ಕ್ವಾರ್ಟರ್‌ ಫೈನಲ್‌ಗೇರುವ ಆಸೆ ಉಳಿಯಲಿದೆ. ಒಂದು ವೇಳೆ ಡ್ರಾ ಆದರೆ ಇನ್ನಿಂಗ್ಸ್‌ ಮುನ್ನಡೆ ಆಧಾರದ ಮೇಲೆ 3 ಅಂಕ ಸಿಗಲಿದೆ. ಇದರಿಂದ ಹೆಚ್ಚಿನ ಪ್ರಯೋಜನವಿಲ್ಲ. ಗೆಲ್ಲುವ ಯತ್ನದಲ್ಲಿ ಸೋಲು ಎದುರಾಗದಂತೆ ನೋಡಿಕೊಳ್ಳುವುದು ಕೂಡ ಮೇಲಿರುವ ಹೊಣೆಗಾರಿಕೆಯಾಗಿದೆ.

ಗುರುವಾರ 2ನೇ ಇನಿಂಗ್ಸ್‌ನಲ್ಲಿ 78ಕ್ಕೆ ಒಂದು ವಿಕೆಟ್‌ ಕಳೆದುಕೊಂಡಿದ್ದ ಉತ್ತರಪ್ರದೇಶ, ಶುಕ್ರವಾರ 325ರ ವರೆಗೆ ಬೆಳೆಯಿತು. ತಂಡದ ಪರ ಮಾಧವ್‌ ಕೌಶಿಕ್‌ (134), ನಾಯಕ ಆರ್ಯನ್‌ ಜುಯಲ್‌ (109) ಶತಕ ಬಾರಿಸಿ ಮೊತ್ತವನ್ನು ವಿಸ್ತರಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಪೂರ್ಣ ಯಶಸ್ವಿಯಾಗಿದ್ದ ರಾಜ್ಯದ ಬೌಲಿಂಗ್‌ ಪಡೆ, ಇಲ್ಲಿ ಹಿಡಿತ ಕಳೆದುಕೊಂಡಿತು.

ಉತ್ತರಪ್ರದೇಶ ಮೊದಲ ಇನ್ನಿಂಗ್ಸ್‌ನಲ್ಲಿ ಬರೀ 89 ರನ್‌ಗೆ ಆಲೌಟಾಗಿತ್ತು. ಇದಕ್ಕೆ ಉತ್ತರ ವಾಗಿ ಕರ್ನಾಟಕ 275 ರನ್‌ ಗಳಿಸಿತ್ತು. ಆ ಹಂತದಲ್ಲಿ ರಾಜ್ಯಕ್ಕೆ ಜಯದ ಆಸೆ ಮೂಡಿತ್ತು. ಇದೀಗ ಇತ್ತಂಡಗಳಿಗೆ ಸಮಾನ ಅವಕಾಶ ಲಭಿಸಿದ್ದು, ತೀವ್ರ ಸ್ಪರ್ಧೆ ಎದುರಾಗಿದೆ.

ಸಂಕ್ಷಿಪ್ತ ಸ್ಕೋರ್‌: ಉತ್ತರಪ್ರದೇಶ-89 ಮತ್ತು 5 ವಿಕೆಟಿಗೆ 5 ವಿಕೆಟಿಗೆ 325 (ಮಾಧವ್‌ ಕೌಶಿಕ್‌ 134, ಆರ್ಯನ್‌ ಜುಯಲ್‌ 109, ಮೊಹ್ಸಿನ್‌ ಖಾನ್‌ 70ಕ್ಕೆ 2, ಶ್ರೇಯಸ್‌ ಗೋಪಾಲ್‌ 83ಕ್ಕೆ 2). ಕರ್ನಾಟಕ-275.

Advertisement

ಮುಂಬಯಿಗೆ ಸುಲಭ ಸವಾಲು
ಹೊಸದಿಲ್ಲಿ: ಸರ್ವೀಸಸ್‌ ವಿರುದ್ಧದ ಎಲೈಟ್‌ ಗ್ರೂಪ್‌ “ಎ’ ರಣಜಿ ಪಂದ್ಯದಲ್ಲಿ ಮುಂಬಯಿ 135 ರನ್ನುಗಳ ಸುಲಭ ಗುರಿ ಪಡೆದಿದೆ. 3ನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟಿಗೆ 24 ರನ್‌ ಗಳಿಸಿದೆ. ಗೆಲುವಿಗೆ ಇನ್ನು 111 ರನ್‌ ಮಾಡಿದರೆ ಸಾಕು.

48 ರನ್‌ ಹಿನ್ನಡೆಗೆ ಸಿಲುಕಿದ ಸರ್ವೀಸಸ್‌, ತನ್ನ ದ್ವಿತೀಯ ಸರದಿಯಲ್ಲಿ 182ಕ್ಕೆ ಆಲೌಟ್‌ ಆಯಿತು. ಮೋಹಿತ್‌ ಅವಸ್ತಿ 4, ಶಾದೂìಲ್‌ ಠಾಕೂರ್‌ 3 ವಿಕೆಟ್‌ ಉರುಳಿಸಿ ಮುಂಬಯಿಗೆ ಮೇಲುಗೈ ಒದಗಿಸಿದರು. ಸರ್ವೀಸಸ್‌ ಪರ ಅರ್ಜುನ್‌ ಶರ್ಮ ಸರ್ವಾಧಿಕ 39, ಪುಳಕಿತ್‌ ನಾರಂಗ್‌ 35, ಮೋಹಿತ್‌ ಅಹ್ಲಾವತ್‌ 31 ರನ್‌ ಮಾಡಿದರು.

ಚೇಸಿಂಗ್‌ ವೇಳೆ ಮುಂಬಯಿ ಆಯುಷ್‌ ಮ್ಹಾತ್ರೆ (4) ಅವರ ವಿಕೆಟ್‌ ಕಳೆದುಕೊಂಡಿದೆ. ಅಂಗ್‌ಕೃಶ್‌ ರಘುವಂಶಿ (13) ಮತ್ತು ಸಿದ್ದೇಶ್‌ ಲಾಡ್‌ (7) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next