ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ಇಂದು ಎರಡನೇ ಬಾರಿ 1420 ಕೋಟಿ ರೂಪಾಯಿಗಳ ಪೂರಕ ಧನ ವಿನಿಯೋಗಕ್ಕೆ ಸದನದ ಅನುಮತಿ ಕೋರಿದೆ. ತನ್ನ ಮಹತ್ವಾಕಾಂಕ್ಷಿ ಎಕ್ಸ್ ಪ್ರೆಸ್ ಹೆದ್ದಾರಿ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ಈ ಪೂರಕ ಧನ ವಿನಿಯೋಗ ಮಾಡಲು ಸರಕಾರ ಬಯಸಿದೆ ಎಂದು ತಿಳಿದುಬಂದಿದೆ.
ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಖನ್ನಾ ಅವರು ಈ ಹೆಚ್ಚುವರಿ ಧನ ವಿನಿಯೋಗಕ್ಕೆ ಸದನದ ಅನುಮತಿ ಕೋರಿದ್ದಾರೆ. ಇದರಲ್ಲಿ 960 ಕೋಟಿ ರೂಪಾಯಿಗಳನ್ನು ಪೂರ್ವಾಂಚಲ ಎಕ್ಸ್ ಪ್ರೆಸ್ ಹೆದ್ದಾರಿ ಯೋಜನೆಯ ಸಾಲ ಮರುಪಾವತಿಗಾಗಿ ಬಳಸಿಕೊಳ್ಳಲಾಗುವುದು ಹಾಗೂ 86 ಕೋಟಿ ರೂಪಾಯಿಗಳನ್ನು 2020ರಲ್ಲಿ ನಡೆಯುವ ಡಿಫೆನ್ಸ್ ಎಕ್ಸ್ ಪೋಗೆ ಬಳಸಿಕೊಳ್ಳುವ ಉದ್ದೇಶವಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಸದನಕ್ಕೆ ಮಾಹಿತಿ ನೀಡಿದ್ದಾರೆ.
ಇನ್ನು 500 ಕೋಟಿ ರೂಪಾಯಿಗಳನ್ನು ಪೂರ್ವಾಂಚಲ ಎಕ್ಸ್ ಪ್ರೆಸ್ ಹೆದ್ದಾರಿಗೆ ಮತ್ತು 200 ಕೋಟಿ ರೂಪಾಯಿಗಳನ್ನು ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ಹೆದ್ದಾರಿಗೆ ಮೀಸಲಿಡುವ ಪ್ರಸ್ತಾವನೆಯನ್ನೂ ಸಹ ಯೋಗಿ ಸರಕಾರ ಮಾಡಿದೆ. ರಾಷ್ಟ್ರೀಯ ರಾಜಧಾನಿ ವ್ಯಾಪ್ತಿಯಲ್ಲಿ ಬರುವ ರಾಜ್ಯದ ಪ್ರದೇಶಗಳಲ್ಲಿ ಕಳೆ ಸುಡುವಿಕೆಯ ನಿರ್ವಹಣೆಗಾಗಿ 25 ಕೋಟಿ ರೂಪಾಯಿಗಳ ಮೊತ್ತವನ್ನು ನಿಗದಿಪಡಿಸಿದೆ.
ರಾಜ್ಯದ 13 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಈ ಭಾಗದ ಜಿಲ್ಲಾಸ್ಪತ್ರೆಗಳನ್ನು ಉನ್ನತೀಕರಿಸುವ ಉದ್ದೇಶಕಕ್ಕಾಗಿ 260 ಕೋಟಿ ರೂಪಾಯಿಗಳನ್ನು ಮೀಸಲಿಡುವ ಪ್ರಸ್ತಾವನೆ ಸರಕಾರದಿಂದ ಹೊರಬಿದ್ದಿದೆ. ಇನ್ನು 18 ಕೋಟಿ ರೂಪಾಯಿಗಳನ್ನು 23ನೇ ರಾಷ್ಟ್ರೀಯ ಯುವ ಸಮಾವೇಶಕ್ಕಾಗಿ ಮೀಸಲಿಡುವ ಉದ್ದೇಶ ಸರಕಾರದ್ದಾಗಿದೆ. ಮತ್ತು 30 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಗೋರಖ್ ಪುರದಲ್ಲಿ ಮೃಗಾಲಯ ಸ್ಥಾಪಿಸುವ ಉದ್ದೇಶ ಸರಕಾರದ್ದಾಗಿದೆ.