Advertisement
ಪಂಚರಾಜ್ಯಗಳಲ್ಲಿ ಕೊರೊನಾ ಹಿನ್ನೆಲೆ ಚುನಾವಣ ಪ್ರಚಾರ, ರ್‍ಯಾಲಿಗಳಿಗೆ ನಿರ್ಬಂಧವಿರುವ ಕಾರಣ ಬಹುತೇಕ ಎಲ್ಲ ಪಕ್ಷಗಳೂ ಡಿಜಿಟಲ್ ಪ್ರಚಾರದ ಮೊರೆ ಹೋಗಿವೆ. ಅದರಲ್ಲೂ ದೊಡ್ಡ ರಾಜ್ಯವಾದ ಉ.ಪ್ರದೇಶದಲ್ಲಿ ಎಲೆಕ್ಷನ್ ವಾರ್ ರೂಂಗಳು ಅಕ್ಷರಶಃ “ಸಮರಕಣ’ವಾಗಿ ಬದಲಾಗಿವೆ. ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ, ಕ್ಷಣ ಕ್ಷಣದ ಸುದ್ದಿಗಳನ್ನು ಹೆಕ್ಕಿ, ತಿದ್ದಿ-ತೀಡಿ ತಮ್ಮ ಪಕ್ಷದ ಪರವಾಗಿ ಬದಲಾಯಿಸಿ ಪೋಸ್ಟ್ ಮಾಡುವಲ್ಲಿ ನಿರತರಾಗಿದ್ದಾರೆ.
Related Articles
Advertisement
10 ರೂ.ಗೆ “ಸಮಾಜವಾದಿ ಥಾಲಿ’: ಎಸ್‌ಪಿ ಅಧಿಕಾರಕ್ಕೆ ಬಂದರೆ 10 ರೂ.ಗೆ “ಸಮಾಜವಾದಿ ಥಾಲಿ’ ನೀಡಲಾಗುತ್ತದೆ,ಸಮಾಜವಾದಿ ಕ್ಯಾಂಟೀನ್, ಸಮಾಜವಾದಿ ಕಿರಾಣಿ ಅಂಗಡಿಯನ್ನೂ ತೆರೆಯಲಾಗುತ್ತದೆ ಎಂದು ಅಖಿಲೇಶ್ ಯಾದವ್ ಘೋಷಿಸಿದ್ದಾರೆ.
ಅಲ್ಲಿ ಖೇಲಾ ಹೋಬೆ, ಇಲ್ಲಿ ಖದೇಡಾ ಹೋಬೆ!: ಪಶ್ಚಿಮ ಬಂಗಾಲ ಚುನಾವಣೆ ವೇಳೆ ಟಿಎಂಸಿ “ಖೇಲಾ ಹೋಬೆ’ (ಆಟ ಶುರು) ಹಾಡಿನ ಮೂಲಕ ಜನಮನಸ್ಸನ್ನು ತಲುಪಲು ಯತ್ನಿಸಿದ ಮಾದರಿಯನ್ನೇ ಉ.ಪ್ರದೇಶದಲ್ಲಿ ಸಮಾಜವಾದಿ ಪಕ್ಷವೂ ಅನುಸರಿಸಿದೆ. “ಖದೇಡಾ ಹೋಬೆ'(ಅಟ್ಟಾಡಿಸುತ್ತೇವೆ) ಎಂಬ ಹಾಡನ್ನು ಪ್ರಚಾರದಲ್ಲಿ ಬಳಸಲು ಶುರುಮಾಡಿದೆ. ಈ ನಡುವೆ, ಜ.31ರಂದು ಪ್ರಧಾನಿ ಮೋದಿ ಅವರು ಉ.ಪ್ರದೇಶದಲ್ಲಿ ಮೊದಲ ವರ್ಚುವಲ್ ರ್ಯಾಲಿ ನಡೆಸಲಿದ್ದಾರೆ.
ಸಮೀಕ್ಷೆಗೆ ನಿಷೇಧ: ಚುನಾವಣ ಆಯೋಗವು ಉ.ಪ್ರದೇಶದಲ್ಲಿ ಫೆ.10ರ ಬೆಳಗ್ಗೆ 7 ಗಂಟೆ ಯಿಂದ ಮಾರ್ಚ್ 7ರ ಸಂಜೆ 6.30ರವರೆಗೆ ಮತಗಟ್ಟೆ ಸಮೀಕ್ಷೆಗೆ ನಿಷೇಧ ಹೇರಿದೆ. ನಿಯಮ ಉಲ್ಲಂ ಸಿದವರಿಗೆ 2 ವರ್ಷ ಜೈಲು ಶಿಕ್ಷೆ ಜತೆ ದಂಡ ವಿಧಿಸಲಾಗುವುದು.
ಸಮಾಜವಾದಿ ಪಕ್ಷದ ಸರಕಾರವು ರಾಜ್ಯದಲ್ಲಿ ಹಜ್‌ಭವನವನ್ನು ನಿರ್ಮಿಸುವಲ್ಲಿ ನಿರತವಾಗಿತ್ತು. ಆದರೆ ಬಿಜೆಪಿ ಸರಕಾರ ಬಂದ ಬಳಿಕ ಮಾನಸ ಸರೋವರ ಭವನ ನಿರ್ಮಾಣವಾಯಿತು. ಎಸ್ಪಿಗೂ ಬಿಜೆಪಿಗೂ ಇರುವ ವ್ಯತ್ಯಾಸ ಇದರಿಂದ ಸ್ಪಷ್ಟವಾಗುತ್ತದೆ.-ಯೋಗಿ ಆದಿತ್ಯನಾಥ್,ಉ.ಪ್ರದೇಶದ ಸಿಎಂ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕ ದಳದ ಮೈತ್ರಿಯು ಮತ ಎಣಿಕೆ ಮುಗಿಯುವವರೆಗೆ ಮಾತ್ರ ಬಾಳಿಕೆ ಬರಲಿದೆ. ಎಸ್ಪಿ ಸರಕಾರ ರಚಿಸಿದರೆ ಆಜಂ ಖಾನ್ ಸಂಪುಟಕ್ಕೆ ಸೇರುತ್ತಾರೆ, ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಔಟ್ ಆಗುತ್ತಾರೆ.
-ಅಮಿತ್ ಶಾ, ಕೇಂದ್ರ ಗೃಹ ಸಚಿವ ಇಬ್ಬರು ಪುತ್ರಿಯರ ಪ್ರತೀಕಾರದ ಹೋರಾಟ
ಉತ್ತರಾಖಂಡದ ಕೋತದ್ವಾರ್ ಮತ್ತು ಹರಿದ್ವಾರ ಕ್ಷೇತ್ರಗಳ ಚುನಾವಣೆಯು ಈ ಬಾರಿ ಎಲ್ಲರ ಗಮನ ಸೆಳೆದಿದೆ. ಏಕೆಂದರೆ ಇಲ್ಲಿ ಕಣಕ್ಕಿಳಿದಿರುವುದು ಮಾಜಿ ಮುಖ್ಯಮಂತ್ರಿಗಳ ಪುತ್ರಿಯರು! ಬಿಜೆಪಿಯು ಮಾಜಿ ಸಿಎಂ ಮೇ| ಜ| ಭುವನ್‌ಚಂದ್ರ ಖಂಡೂರಿ ಅವರ ಪುತ್ರಿ ರಿತು ಖಂಡೂರಿ ಭೂಷಣ್ ಅವರನ್ನು ಕೋತ್‌ದ್ವಾರ್ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ. ಕಾಂಗ್ರೆಸ್ ಮಾಜಿ ಸಿಎಂ ಹರೀಶ್ ರಾವತ್ ಪುತ್ರಿ ಅನುಪಮಾ ರಾವತ್‌ಗೆ ಹರಿದ್ವಾರದ ಟಿಕೆಟ್ ನೀಡಿದೆ. 2012ರ ಚುನಾವಣೆಯಲ್ಲಿ ಕೋತ್‌ದ್ವಾರ್‌ನಲ್ಲಿ ಖಂಡೂರಿ ಸೋತಿದ್ದರೆ, 2017ರಲ್ಲಿ ರಾವತ್ ಹರಿದ್ವಾರದಲ್ಲಿ ಸೋಲುಂಡಿದ್ದರು. ಅಂದು ಅಪ್ಪನನ್ನು ಸೋಲಿಸಿದ ಅಭ್ಯರ್ಥಿಗಳೇ ಈ ಬಾರಿ ಎರಡೂ ಕ್ಷೇತ್ರಗಳಲ್ಲಿ ಮಕ್ಕಳ ವಿರುದ್ಧ ಕಣಕ್ಕಿಳಿದಿದ್ದಾರೆ. ಹೀಗಾಗಿ ಹೆಣ್ಣುಮಕ್ಕಳಿಬ್ಬರೂ ತಮ್ಮ ತಮ್ಮ ಅಪ್ಪನ ಸೋಲಿಗೆ ಪ್ರತೀಕಾರ ತೀರಿಸಲು ಪಣತೊಟ್ಟು, ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮಹಿಳಾ ಮೀಸಲಾತಿ ಆಶ್ವಾಸನೆ
ಗೋವಾದಲ್ಲಿ ಅಧಿಕಾರಕ್ಕೇರಿದರೆ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ನೀಡುತ್ತೇವೆ ಎಂದು ಟಿಎಂಸಿ ಶನಿವಾರ ಘೋಷಿಸಿದೆ. ಇದೇ ವೇಳೆ, ಮಾಜಿ ಬಾಕ್ಸಿಂಗ್ ಕೋಚ್ ಲೆನ್ನಿ ಡಿ ಗಾಮಾ ಶನಿವಾರ ಟಿಎಂಸಿಗೆ ರಾಜೀನಾಮೆ ನೀಡಿದ್ದಾರೆ. ಫೆ.2ರಂದು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಗೋವಾದಲ್ಲಿ ವರ್ಚುವಲ್ ರ್ಯಾಲಿ ನಡೆಸಲಿದ್ದಾರೆ. ರವಿವಾರ ಕೇಂದ್ರ ಸಚಿವ ಅಮಿತ್ ಶಾ ಮೂರು ಒಳಾಂಗಣ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಮತಾಂತರದ ವಿರುದ್ಧ ಕಾನೂನು ಬೇಕು: ಕೇಜ್ರಿವಾಲ್
ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ಜಾರಿ ಮಾಡಬೇಕು. ಆದರೆ ಅದರ ಹೆಸರಲ್ಲಿ ಯಾರ ಮೇಲೆಯೂ ದೌರ್ಜನ್ಯವೆಸಗಬಾರದು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಪಂಜಾಬ್‌ನಲ್ಲಿ ಮಾತನಾಡಿದ ಅವರು, ಧರ್ಮ ಎನ್ನುವುದು ಖಾಸಗಿ ವಿಚಾರ. ಎಲ್ಲರಿಗೂ ದೇವರನ್ನು ಪೂಜಿಸುವ ಹಕ್ಕಿದೆ. ಆದರೆ ಯಾರನ್ನೂ ಭಯಪಡಿಸಿ ಮತಾಂತರ ಮಾಡಬಾರದು ಎಂದಿದ್ದಾರೆ. ಈ ನಡುವೆ, ಶನಿವಾರ ಆಪ್ ಸಿಎಂ ಅಭ್ಯರ್ಥಿ ಭಗವಂತ್ ಸಿಂಗ್ ಮನ್ ಅವರು ಧುರಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.