Advertisement

ಉತ್ತರ ಪ್ರದೇಶ : ಕೊನೇ ಹಂತದ ಪ್ರಚಾರಕ್ಕೆ ತೆರೆ

12:19 AM Mar 06, 2022 | Team Udayavani |

ಲಕ್ನೋ/ಇಂಫಾಲ: ಏಳು ಹಂತಗಳಲ್ಲಿ ನಡೆಯುತ್ತಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಕೊನೇ ಹಂತದ ಮತದಾನ ಮಾ.7ಕ್ಕೆ ಮುಕ್ತಾಯವಾಗಲಿದೆ.

Advertisement

ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿರುಸಿನ ಬಹಿರಂಗ ಪ್ರಚಾರ ಶನಿವಾರ ಕೊನೆಗೊಂಡಿದೆ. ಆಜಂಗಢ‌, ಮೌ, ಜೌನ್ಪುರ, ಘಾಜಿಪುರ್‌, ಚಂದೌಲಿ, ವಾರಾಣಸಿ, ಮಿರ್ಜಾಪುರ, ಭದೋಯ್‌ ಮತ್ತು ಸೋನಾಭದ್ರಾ ಜಿಲ್ಲೆಗಳ 54 ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಮತದಾನ ನಡೆಯಲಿದೆ. ಒಟ್ಟು 613 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಾ.10ರಂದು ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಮತ ಎಣಿಕೆ ನಡೆಯಲಿದ್ದು, ಫ‌ಲಿತಾಂಶ ಪ್ರಕಟವಾಗಲಿದೆ.

ಆಡಳಿತ ಪರ: ಪ್ರಚಾರದ ಕೊನೇ ದಿನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದಲ್ಲಿನ ಮತದಾನ ಉತ್ತಮ ಆಡಳಿತದ ಪರವಾಗಿ ಇರಲಿದೆ ಎಂದು ಬಣ್ಣಿಸಿದ್ದಾರೆ. ವಾರಾಣಸಿಯ ಖಜುರಿ ಗ್ರಾಮ ದಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿನ ವಿಪಕ್ಷಗಳು ಸ್ವತ್ಛ ಭಾರತ ಮತ್ತು ವೋಕಲ್‌ ಫಾರ್‌ ಲೋಕಲ್‌ ಎಂಬ ಕೇಂದ್ರ ಸರಕಾರದ ಅಭಿಯಾನವನ್ನು ಕೆಲವರು ಲೇವಡಿ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನು ಪಾರು ಮಾಡಿ ಕರೆತರುವ ವಿಚಾರದಲ್ಲಿ ಕೂಡ ವಿಪಕ್ಷಗಳು ಕೊಂಕು ಹುಡುಕುವುದರಲ್ಲಿಯೇ ಕಾಲ ಕಳೆಯುತ್ತಿವೆ ಎಂದು ಆಕ್ಷೇಪ ಮಾಡಿದ್ದಾರೆ. ಕಾಂಗ್ರೆಸ್‌ ಹೆಸರೆತ್ತದೆ ಟೀಕೆ ಮಾಡಿದ ಪ್ರಧಾನಿ, ಖಾದಿ ಹೆಸರು ಹೇಳಿಕೊಂಡು ರಾಜಕೀಯ ಮಾಡಿದ ಪಕ್ಷವೊಂದು ಈಗ ಅದರ ಹೆಸರು ಹೇಳಲು ಕೂಡ ಹಿಂದೇಟು ಹಾಕುತ್ತಿದೆ ಎಂದರು.

ಎಸ್‌ಪಿ ಸೇರ್ಪಡೆ
ಕೊನೇ ಹಂತದ ಮತದಾನಕ್ಕೆ ಮುನ್ನವೇ ಅಲಹಾಬಾದ್‌ ಲೋಕಸಭಾ ಕ್ಷೇತ್ರದ ಸಂಸದೆ, ಬಿಜೆಪಿ ನಾಯಕಿ ರೀಟಾ ಬಹುಗುಣ ಜೋಷಿ ಅವರ ಪುತ್ರ ಮಾಯಂಕ್‌ ಅವರು ಸಮಾಜವಾದಿ ಪಕ್ಷ ಸೇರಿದ್ದಾರೆ. ಆಜಂಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಅಖಿಲೇಶ್ ಯಾದವ್‌ ಬಿಜೆಪಿ ನಾಯಕಿಯ ಪುತ್ರನ ಪಕ್ಷ ಸೇರ್ಪಡೆಯ ವಿಚಾರ ಪ್ರಕಟಿಸಿದರು.

ಮಣಿಪುರ: ಶೇ.76.4 ಮತ
ಮಣಿಪುರದಲ್ಲಿ ಶನಿವಾರ ನಡೆದ ಎರಡನೇ ಹಂತದ ಮತದಾನದಲ್ಲಿ ಶೇ.76.04 ಹಕ್ಕು ಚಲಾವಣೆ ಯಾಗಿದೆ. ಇದರ ಜತೆಗೆ ಸಣ್ಣಪುಟ್ಟ ಹಿಂಸಾಚಾರಗಳೂ ನಡೆದಿವೆ. ಆರು ಜಿಲ್ಲೆಗಳ ಒಟ್ಟು 22 ವಿಧಾನಸಭಾ ಕ್ಷೇತ್ರ ಗಳಲ್ಲಿ ಮತದಾನ ನಡೆದಿತ್ತು. ಸೇನಾಪತಿ ಜಿಲ್ಲೆ ಯಲ್ಲಿ ಶೇ.82.02 ಮತದಾನವಾಗಿದೆ. ಸೇನಾಪತಿ ಜಿಲ್ಲೆಯ ನಗ್ಮಾಜು ಎಂಬ ಮತಗಟ್ಟೆಯಲ್ಲಿ ಬಿಜೆಪಿ ಬೆಂಬಲಿಗನೊಬ್ಬನನ್ನು ಗುಂಡು ಹಾರಿಸಿ ಕೊಲ್ಲಲಾ ಗಿದೆ. ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಬಿಜೆಪಿಯ ಉಚ್ಛಾಟಿತ ಅಭ್ಯರ್ಥಿಯ ಮನೆ ಮುಂಭಾಗದಲ್ಲಿ ಕಚ್ಚಾ ಬಾಂಬ್‌ ಅನ್ನು ಸ್ಫೋಟಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next