Advertisement
ಬೆಂಗಳೂರಲ್ಲಿ, ಮೈಸೂರಲ್ಲಿ ಚಿತ್ರೋತ್ಸವ ಆರಂಭವಾಗಿದೆ. ಚಿತ್ರರಸಿಕರ ಪಾಲಿಗೆ ಅಂತಾರಾಷ್ಟ್ರೀಯ ಚಿತ್ರೋತ್ಸವಗಳೆಂದರೆ ಸಂಭ್ರಮ. ಚಿತ್ರೋತ್ಸವ ನಡೆಯುತ್ತಿರುವಷ್ಟೂ ದಿನ ಅವರ ದಿನಚರಿ, ಬೆಳಗ್ಗೆ ಎದ್ದು, ಆವತ್ತಿನ ಸಿನಿಮಾಗಳಲ್ಲಿ ಯಾವುದು ಚೆನ್ನಾಗಿದೆ ಅಂತ ನೋಡಿಕೊಂಡು, ಉದ್ದದ ಸಾಲಲ್ಲಿ ಕ್ಯೂ ನಿಂತು, ಮಧ್ಯಾಹ್ನದ ಊಟವನ್ನೂ ಲೆಕ್ಕಿಸದೇ ಸಿನಿಮಾ ನೋಡುವುದಷ್ಟೇ ಆಗಿರುತ್ತದೆ. ಮತ್ತೂಂದು ತಿಂಗಳು ಚಿತ್ರಾಸಕ್ತರ ಜಗತ್ತಿನಲ್ಲಿ ಆ ಸಿನಿಮಾಗಳದ್ದೇ ಮಾತು. ಚಿತ್ರೋತ್ಸವ ಹೀಗೆ ವಸಂತ ಕಾಲ ಕಾಲಿಡುವುದಕ್ಕೆ ಮೊದಲೇ ಮನಸ್ಸನ್ನು ಚಿಗುರಿಸುತ್ತದೆ.
Related Articles
Advertisement
ಸಿನಿಮಾಕ್ಕಿಂತ ಯಾರೂ ದೊಡ್ಡವರಲ್ಲ, ಯಾರ ಕಾಲ ಬುಡಕ್ಕೂ ಚಿತ್ರೋತ್ಸವವನ್ನು ಕೊಂಡೊಯ್ಯುವ ಅಗತ್ಯವೂ ಇಲ್ಲ.ಮೈಸೂರಿಗೆ ಚಿತ್ರೋತ್ಸವವನ್ನು ವಿಸ್ತರಿಸಿದ್ದು ಕೂಡ ಒಳ್ಳೆಯ ನಿರ್ಧಾರವೇ. ಸಿನಿಮಾ ಅನ್ನುವುದು ಕೇವಲ ಮನರಂಜನೆ ಅಲ್ಲ. ಅದು ಒಂದು ನಾಡಿನ ಹೆಮ್ಮೆಯ ಸಂಕೇತವೂ ಹೌದು ಅನ್ನುವುದು ಕ್ರಮೇಣ ಎಲ್ಲರಿಗೂ ಅರ್ಥವಾಗುತ್ತಿದೆ. ಪ್ರಮುಖ ರಾಜಕೀಯ ನಿಲುವುಗಳನ್ನೂ ಈ ಮಣ್ಣಿನ ಗುಣವನ್ನೂ ಪ್ರದರ್ಶಿಸುವಂಥ ಸಿನಿಮಾಗಳು ತಯಾರಾಗುತ್ತಿವೆ. “ದಂಗಲ್’ ಸಿನಿಮಾ ಹೆಣ್ಮಕ್ಕಳಲ್ಲಿ ಮೂಡಿಸಿದ ಪುಲಕ, “ಪದ್ಮಾವತಿ’ ಚಿತ್ರ ಎಬ್ಬಿಸಿದ ವಿವಾದ- ಎರಡನ್ನೂ ಕೂಡ ನಾವು ಕುತೂಹಲ ಮತ್ತು ಎಚ್ಚರದಿಂದ ನೋಡಬೇಕು ಅನ್ನುವುದನ್ನು ಚಿತ್ರೋತ್ಸವಗಳು ನೆನಪಿಸುತ್ತವೆ. ಸಾಹಿತ್ಯ, ಸಂಗೀತ ಮತ್ತು ಚಿತ್ರಕತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿಸಿದ ಪರಿಣಾಮವನ್ನು ಸಿನಿಮಾಗಳೂ ಮೂಡಿಸುವ ಮೂಲಕ ಒಂದು ಪ್ರದೇಶದ ಅಸ್ಮಿತೆಯ ಭಾಗವಾಗುವ ಕೆಲಸವನ್ನು ಚಿತ್ರಗಳು ಮಾಡಿಕೊಂಡು ಬಂದಿವೆ. ಅದನ್ನು ಮುಂದುವರಿಸುವ ಕೆಲಸವನ್ನು ಈ ಕಾಲದ ನಿರ್ದೇಶಕರು ಮಾಡುತ್ತಿರುವುದು ಚಿತ್ರರಂಗಕ್ಕೂ ಹೆಮ್ಮೆಯ ಸಂಗತಿಯಾಗಬೇಕು. ಅದಕ್ಕೆ ಪೂರಕವಾಗಿ ಚಿತ್ರೋತ್ಸವಗಳೂ ಕೆಲಸ ಮಾಡಬೇಕಾಗಿದೆ. ಇವತ್ತು ಸಾಮಾಜಿಕ ಮತ್ತು ಸೈದ್ಧಾಂತಿಕ ನೆಲೆಯಲ್ಲಿ ಗಂಭೀರವಾದ ಹೇಳಿಕೆಗಳನ್ನು ನೀಡುವ ಕೆಲಸವನ್ನು ಸಿನಿಮಾಗಳೇ ಮಾಡಬೇಕು. ಟೀವಿ ವಾಹಿನಿಗಳು ಕೇವಲ ಮನರಂಜನೆ ಮತ್ತು ಸುದ್ದಿಗಷ್ಟೇ ಸೀಮಿತವಾಗಿದೆ. ಅರ್ಥಪೂರ್ಣ ಸಿನಿಮಾಗಳನ್ನು ತೋರಿಸುತ್ತಿದ್ದ ದೂರದರ್ಶನ ಹಿನ್ನೆಲೆಗೆ ಸರಿದಿದೆ. ಒಂದು ನೆಲದ ಅತ್ಯುತ್ತಮ ಕತೆಗಳು ಇವತ್ತು ಪ್ರಸಾರ ಆಗುತ್ತಿಲ್ಲ. ಒಂದು ಸಮುದಾಯದ ನೋವು ನಲಿವುಗಳನ್ನು ದಾಖಲಿಸುವಲ್ಲಿ ಕಿರುತೆರೆ ಸಕ್ರಿಯವಾಗಿಲ್ಲ. ಅದನ್ನು ಕೂಡ ಸಿನಿಮಾಗಳೇ ಮಾಡಬೇಕಿದ್ದರೆ, ಆ ನಿಟ್ಟಿನಲ್ಲಿ ಯೋಚಿಸುವಂಥ ನಿರ್ದೇಶಕರಿಗೆ ಅವಕಾಶಗಳು ಸಿಗಬೇಕು. ಅಂಥ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗಬೇಕು. ಇದು ಸಾಮಾಜಿಕ ಜಾಲತಾಣಗಳು ಸಕ್ರಿಯವಾಗಿರುವ ಸಂದರ್ಭವಾದ್ದರಿಂದ, ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ಚಿತ್ರಗಳ ನೋಡಿದವರು ಬರೆಯುತ್ತಾರೆ. ಆ ಚಿತ್ರಗಳ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗುತ್ತದೆ. ಹೀಗಾಗಿ ಚಿತ್ರೋತ್ಸವಗಳು ಒಂದು ಚಿತ್ರರಂಗದ ಮಾಪಕಗಳಾಗಿಯೂ ಕೆಲಸ ಮಾಡುತ್ತವೆ. ಇಂಥ ಚಿತ್ರೋತ್ಸವಗಳಲ್ಲಿ ಸೂಪರ್‌ಸ್ಟಾರುಗಳು ಮಾತ್ರ ನಾಪತ್ತೆಯಾಗಿರುತ್ತಾರೆ. ಅವರನ್ನು ಯಾಕೆ ಚಿತ್ರೋತ್ಸವ ಸೆಳೆಯುವುದಿಲ್ಲವೋ ಗೊತ್ತಿಲ್ಲ. ಅವರು ತಾವು ಚಿತ್ರೋತ್ಸವಗಳನ್ನು ಮೀರಿದವರು ಎಂದು ಭಾವಿಸುತ್ತಾರೋ ಏನೋ? ಆದರೆ, ಸ್ಟಾರು ಕೇವಲ ಲೋಕಲ್, ಕನ್ನಡ ಚಿತ್ರರಂಗ ಗ್ಲೋಬಲ್ ಅನ್ನುವುದನ್ನು ಅರ್ಥಮಾಡಿಕೊಂಡರೆ, ಚಿತ್ರೋತ್ಸವ ಸಿನಿಮಾಗಳನ್ನು ನೋಡುವ ವಿನಯ ಮತ್ತು ಸದ್ಭಾವನೆ ಅವರಲ್ಲಿ ಮೂಡಬಹುದೋ ಏನೋ? ಈ ಚಿತ್ರೋತ್ಸವದ ಸಂಭ್ರಮ ನಿಮ್ಮನ್ನು ಮುದಗೊಳಿಸಲಿ ಎಂಬುದು ನಮ್ಮ ಆಶಯ. – ಜೋಗಿ