Advertisement

ಹೋಲಿ ಕುರ್‌ಆನ್‌ ಅವಾರ್ಡ್‌: ಖಾದರ್‌ ಪುತ್ರಿ ಹವ್ವಾ ನಸೀಮಾ ಆಯ್ಕೆ

09:27 AM Nov 01, 2018 | Team Udayavani |

ಮಂಗಳೂರು: ದುಬಾೖಯಲ್ಲಿ ನ. 4ರಿಂದ 16ರ ವರೆಗೆ ನಡೆಯಲಿರುವ ಶೈಖಾ ಫಾತಿಮಾ ಬಿನ್‌ ಮುಬಾರಕ್‌ ಹೆಸರಿನ “ಅಂತಾರಾಷ್ಟ್ರೀಯ ದುಬಾೖ ಹೋಲಿ ಕುರ್‌ಆನ್‌ ಅವಾರ್ಡ್‌’ ಸ್ಪರ್ಧೆಗೆ ಭಾರತದ ಏಕೈಕ ಪ್ರತಿನಿಧಿಯಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಮತ್ತು ಲಾಮಿಸ್‌ ದಂಪತಿಯ ಪುತ್ರಿ ಹಾಫಿಝಾ ಹವ್ವಾ ನಸೀಮಾ ಆಯ್ಕೆಯಾಗಿದ್ದಾರೆ.

Advertisement

ದುಬಾೖಯ ಅಲ್‌ ಮಮಾರ್‌ ಸೈಂಟಿಫಿಕ್‌ “ಕಲ್ಚರಲ್‌ ಅಸೋಸಿಯೇಶನ್‌’ನಲ್ಲಿ ಸ್ಪರ್ಧೆ ನಡೆಯಲಿದೆ. ಆರು ತಿಂಗಳ ಪ್ರಕ್ರಿಯೆಗಳ ಬಳಿಕ ವಿಶ್ವದ 63 ಸ್ಪರ್ಧಾಳುಗಳ ಜತೆಗೆ ಹವ್ವಾ ಅವರನ್ನು ಯುಎಇ ಸರಕಾರ ಆಯ್ಕೆ ಮಾಡಿದೆ.
ಶೈಖಾ ಫಾತಿಮಾ ಬಿನ್‌ ಮುಬಾರಕ್‌ ಅವರು ಯುಎಇಯ ಸ್ಥಾಪಕ ಅಧ್ಯಕ್ಷ ಶೈಖ್‌ ಝಾಯೆದ್‌ ಬಿನ್‌ ಸುಲ್ತಾನ್‌ ಅಲ್‌ ನಹ್ಯಾನ್‌ ಅವರ ಪತ್ನಿ. “ಮದರ್‌ ಆಫ್‌ ಯುಎಇ’ ಎಂಬ ಖ್ಯಾತಿ ಅವರಿಗಿದೆ. 2016 ನವಂಬರ್‌ನಲ್ಲಿ ಪ್ರಾರಂಭವಾದ ಹೋಲಿ ಕುರ್‌ಆನ್‌ ಅವಾರ್ಡ್‌ಗೆ ಪವಿತ್ರ ಕುರ್‌ಆನ್‌ ಕಂಠಪಾಠ ಮಾಡಿರುವ 25 ವರ್ಷದೊಳಗಿನ ಮಹಿಳಾ ಸ್ಪರ್ಧಿಗಳು ಭಾಗವಹಿಸುತ್ತಾರೆ.

ಪ್ರಥಮ ಬಹುಮಾನವಾಗಿ 2.50 ಲಕ್ಷ ದಿರ್ಹಮ್‌ (50 ಲಕ್ಷ ರೂ.) ಮತ್ತು ಹೋಲಿ ಕುರ್‌ಆನ್‌ ಪ್ರಶಸ್ತಿಯನ್ನು ಯುಎಇ ಸರಕಾರ ನೀಡುತ್ತದೆ. ಈ ವರ್ಷ 3ನೇ ಆವೃತ್ತಿ ಆಗಿದ್ದು, ಸುಮಾರು 70 ರಾಷ್ಟ್ರಗಳ ಸ್ಪರ್ಧಾಳುಗಳಿದ್ದಾರೆ.

ಮಕ್ಕಾದಲ್ಲಿ  ಕಾಣೆಯಾಗಿದ್ದ  ಹವ್ವಾ
ಕೆಲ ವರ್ಷಗಳ ಹಿಂದೆ ಯು.ಟಿ. ಖಾದರ್‌ ದಂಪತಿ ಪವಿತ್ರ ಮಕ್ಕಾ ಯಾತ್ರೆ ತೆರಳಿದ್ದಾಗ ಹವ್ವಾ ನಸೀಮಾ ಜನಜಂಗುಳಿ ಕೈತಪ್ಪಿ ಹೋಗಿದ್ದಳು. ಎಷ್ಟು ಹುಡುಕಿದರೂ ಸಿಗಲಿಲ್ಲ. ಖಾದರ್‌ ದಂಪತಿ ಕಅಬಾಲಯದಲ್ಲಿ ಪ್ರಾರ್ಥಿಸುತ್ತಾ ಮಗಳು ಸಿಕ್ಕರೆ ಕುರ್‌ಆನ್‌ ಕಂಠಪಾಠ ಮಾಡಿಸುತ್ತೇವೆ ಎಂದು ಹರಕೆ ಹೊತ್ತಿದ್ದರು. ಹವ್ವಾ ಪತ್ತೆಯಾದಳು. ಬಳಿಕ ಹವ್ವಾ ನಸೀಮಾ ಕುರ್‌ಆನ್‌ ಅಧ್ಯಯನ ಆರಂಭಿಸಿದರು.

ಎರಡು ವರ್ಷಗಳಿಂದ ಕೇರಳ ಮಲಪ್ಪುರಂನಲ್ಲಿರುವ ಕಡಲುಂಡಿಯ ಮಅದಿನ್‌ ಕ್ಯೂಲ್ಯಾಂಡ್‌ ಸಂಸ್ಥೆಯಲ್ಲಿ ಉನ್ನತ ಧಾರ್ಮಿಕ ಶಿಕ್ಷಣ ಪಡೆಯುತ್ತಿರುವ ಹವ್ವಾ ಇದೇ ವೇಳೆ ಮಕ್ಕಳಿಗೆ ಕುರ್‌ಆನ್‌ ಪಾಠವನ್ನೂ ಕಲಿಸುತ್ತಿದ್ದಾರೆ. ಜತೆಗೆ ಮಲಪ್ಪುರಂ ಮಂಜೇರಿ ಸರಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ  ಲೌಕಿಕ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next