Advertisement

ರಕ್ಷಣಾ ಇಲಾಖೆ ಉದ್ಯೋಗ ಅವಕಾಶ ಬಳಸಿಕೊಳ್ಳಿ

05:38 PM Nov 09, 2021 | Team Udayavani |

ಬೀದರ: ಕಲ್ಯಾಣ ಕರ್ನಾಟಕ ಭಾಗದ ಯುವಕರು ರಕ್ಷಣಾ ಇಲಾಖೆಯಲ್ಲಿರುವ ಅವಕಾಶ ಬಳಸಿಕೊಳ್ಳಬೇಕು ಎಂದು ಕೇಂದ್ರದ ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಸಲಹೆ ನೀಡಿದರು.

Advertisement

ನಗರದ ಗ್ಲೋಬಲ್‌ ಸೈನಿಕ ಅಕಾಡೆಮಿಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ನಡೆಯುತ್ತಿರುವ ಸೇನಾ ಪೂರ್ವ ತರಬೇತಿ ಶಿಬಿರಕ್ಕೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು.

ಸೇನಾ ಪೂರ್ವ ತರಬೇತಿಯಿಂದ ಸೇನೆಯ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಲು ನೆರವಾಗಲಿದೆ. ಶಿಸ್ತು, ಸಂಯಮ, ಸಮಯ ಪ್ರಜ್ಞೆಯೊಂದಿಗೆ ಒಳ್ಳೆಯ ಜೀವನ ರೂಪಿಸಿಕೊಳ್ಳಲು ಸಹ ಸಾಧ್ಯವಾಗಲಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗದ 250 ಅಭ್ಯರ್ಥಿಗಳನ್ನು ಸೇನೆಗೆ ಸೇರಿಸುವ ಸಂಕಲ್ಪದೊಂದಿಗೆ ಸೇನಾ ಪೂರ್ವ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ನಿವೃತ್ತ ಕರ್ನಲ್‌ ಶರಣಪ್ಪ ಸಿಕೇನಪುರ ಶ್ರಮ ಫಲ ಕೊಡಲಿದೆ. ಕಲ್ಯಾಣ ಕರ್ನಾಟಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ 2025ರ ವೇಳೆಗೆ ಈ ಭಾಗ ಮಾದರಿಯನ್ನಾಗಿ ಮಾಡುವ ದಿಸೆಯಲ್ಲಿ ವಿವಿಧ ಕಾರ್ಯ ಕೈಗೊಳ್ಳುತ್ತಿದ್ದಾರೆ. ಎಲ್ಲ ಕ್ಷೇತ್ರಗಳ ಪ್ರಗತಿಗೂ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಈ ಭಾಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಬೇಕು ಎನ್ನುವುದೇ ಸಂಘದ ಅಪೇಕ್ಷೆ. ಸಂಘದಿಂದ ರಕ್ಷಣೆ, ಕೃಷಿ, ಶಿಕ್ಷಣ, ಮಹಿಳಾ ಸ್ವಾವಲಂಬನೆ, ಯುವಕರ ಸಬಲೀಕರಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ಹಲವು ಕಾರ್ಯಗಳು ನಡೆದಿದೆ ಎಂದರು.

Advertisement

ಗ್ಲೋಬಲ್‌ ಸೈನಿಕ ಅಕಾಡೆಮಿ ಅಧ್ಯಕ್ಷ, ನಿವೃತ್ತ ಕರ್ನಲ್‌ ಶರಣಪ್ಪ ಸಿಕೇನಪುರ ಮಾತನಾಡಿ, ಸೇನೆಗೆ ಸೇರುವ ಜಿಲ್ಲೆಯ ಅಭ್ಯರ್ಥಿಗಳ ಕನಸು ನನಸಾಗಿಸಲು ನಿವೃತ್ತಿ ನಂತರ ಗ್ಲೋಬಲ್‌ ಸೈನಿಕ ಅಕಾಡೆಮಿ ಶುರು ಮಾಡಿದ್ದೇನೆ. ಸೇನಾ ಪೂರ್ವ ತರಬೇತಿಯಿಂದ ಈ ಭಾಗದ ಅಧಿಕ ಅಭ್ಯರ್ಥಿಗಳು ಸೇನೆಯ ವಿವಿಧ ಹುದ್ದೆಗಳಿಗೆ ಆಯ್ಕೆಯಾಗುವ ವಿಶ್ವಾಸವಿದೆ ಎಂದರು.

ಇದಕ್ಕೂ ಮುನ್ನ ಶಿಬಿರಾರ್ಥಿಗಳಿಂದ ಪಥ ಸಂಚಲನ ನಡೆಯಿತು. ದೇಶಕ್ಕಾಗಿ ಪ್ರಾಣ ತೆತ್ತ ಯೋಧರ ಗೌರವಾರ್ಥ ಎರಡು ನಿಮಿಷ ಮೌನ ಆಚರಿಸಲಾಯಿತು. ಈ ವೇಳೆ ವಿಮಲಾ ಸಿಕೇನಪುರ, ಬುಡಾ ಅಧ್ಯಕ್ಷ ಬಾಬು ವಾಲಿ, ಅಕಾಡೆಮಿ ನಿರ್ದೇಶಕರಾದ ಡಾ| ರಘು ಕೃಷ್ಣಮೂರ್ತಿ, ಆರ್‌.ಜಿ. ಹಿರೇಮಠ, ಸುಮಿತ್‌ ಸಿಂದೋಲ್‌, ಪ್ರಕಾಶ ಟೊಣ್ಣೆ, ನಾಗರಾಜ ಕರ್ಪೂರ ಇದ್ದರು. ಅಕಾಡೆಮಿ ಪ್ರಾಚಾರ್ಯೆ ಕಾರಂಜಾ ನಿರೂಪಿಸಿದರು. ಶಿಕ್ಷಕ ಬಸವರಾಜ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next