ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲಿ ಎಸ್‌ಟಿಪಿ- ಟಿಎಸ್‌ಪಿ ಯೋಜನೆಯಡಿ ನವೆಂಬರ್ ಅಂತ್ಯ ದವರೆಗೆ ಶೇ.38ರಷ್ಟು ಅನುದಾನ ಬಳಕೆಯಾಗಿದೆ. ಬಳಕೆ ಸಾಧ್ಯವಾಗದ ಅನುದಾನ ಮೊತ್ತದ ಬಗ್ಗೆ ಎರಡು ದಿನದಲ್ಲಿ ಮಾಹಿತಿ ನೀಡುವಂತೆ ಎಲ್ಲ ಇಲಾಖೆಗಳಿಗೂ ಸೂಚಿಸಲಾಗಿದ್ದು, ಬಳಿಕ ಅನುದಾನ ಮರು ಹೊಂದಾಣಿಕೆ ಮಾಡಿ ಉಪಯುಕ್ತ ಕಾರ್ಯಗಳಿಗೆ ಬಳಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ವಿಕಾಸಸೌಧದಲ್ಲಿ ಸೋಮವಾರ 2019-2020ನೇ ಸಾಲಿನಲ್ಲಿ ಎಸ್‌ಸಿಪಿ- ಟಿಎಸ್‌ಪಿ ಯೋಜನೆಯಡಿ ಅನುದಾನ ಬಳಕೆ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ/ ಪಂಗಡದವರ ಕಲ್ಯಾಣಕ್ಕಾಗಿ 2019- 2020ನೇ ಸಾಲಿನಲ್ಲಿ ಎಸ್‌ಟಿಪಿ- ಟಿಎಸ್‌ಪಿ ಯೋಜನೆ ಯಡಿ 30,445 ಕೋಟಿ ರೂ. ಕಾಯ್ದಿರಿಸಲಾಗಿದೆ. ನವೆಂಬರ್ ಅಂತ್ಯದವರೆಗೆ 11,861 ಕೋಟಿ ರೂ. ವೆಚ್ಚವಾಗಿದೆ. ಎಸ್‌ಸಿಪಿ ಅನುದಾನ ಶೇ.38 ಹಾಗೂ ಟಿಎಸ್‌ಪಿ ಅನುದಾನ ಶೇ.39 ಬಳಕೆಯಾಗಿದ್ದು, ಸರಾಸರಿ ಶೇ.38 ಪ್ರಗತಿಯಾಗಿದೆ ಎಂದು ತಿಳಿಸಿದರು.
ಹಿಂದಿನ ಸರ್ಕಾರ ರಾಜ್ಯ ಪರಿಷತ್ ಸಭೆ ನಡೆಸಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿರಲಿಲ್ಲ. ಬಳಿಕ ನಮ್ಮ ಸರ್ಕಾರ ರಾಜ್ಯ ಪರಿಷತ್ ಸಭೆ ನಡೆಸಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿತ್ತು. “ಇ-ಪ್ರೊಕ್ಯೂರ್ಮೆಂಟ್’ ವ್ಯವಸ್ಥೆಯಲ್ಲಿನ ದೋಷದಿಂದ 3 ತಿಂಗಳ ಕಾಲ ಟೆಂಡರ್ ಆಹ್ವಾನಿಸಲು ಸಾಧ್ಯವಾಗಿರ ಲಿಲ್ಲ. ಹಾಗೆಯೇ ನೆರೆಯಿಂದಾಗಿಯೂ ಹಿನ್ನಡೆ ಯಾಗಿತ್ತು. ಮುಂದಿನ ಮಾರ್ಚ್ 31ರೊಳಗೆ ಅನುದಾನ ಬಳಕೆಯಲ್ಲಿ ಭೌತಿಕ- ಆರ್ಥಿಕ ಗುರಿ ತಲುಪುವ ವಿಶ್ವಾಸವಿದೆ. ಅನುದಾನ ಬಳಕೆಯ ಮೌಲ್ಯಮಾಪನ ನಡೆಸಲಾಗುವುದು ಎಂದರು.
ರಸ್ತೆಗಿಂತ ಶಿಕ್ಷಣಕ್ಕೆ ಒತ್ತು: ಮುಂದಿನ ಹಣಕಾಸು ವರ್ಷದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಿಂತ ಶಾಲೆ, ವಸತಿ ಶಾಲೆ ನಿರ್ಮಾಣ ಸೇರಿ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡ ಬೇಕು. ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು. ಪರಿಶಿಷ್ಟ ಜಾತಿ, ಪಂಗಡದವರು ಮೇಕೆ, ಕುರಿ ಸಾಕಣೆಗೆ ಹೆಚ್ಚಿನ ಪ್ರೋತ್ಸಾಹ, ಅಗತ್ಯವಿರುವ ಕೃಷಿ ಉಪಕರಣ ವಿತರಣೆಗೆ ಆದ್ಯತೆ ನೀಡಿ ಹೆಚ್ಚು ಅನುದಾನ ಕಾಯ್ದಿರಿ ಸುವಂತೆ ಸೂಚಿಸಲಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಈ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯ ರಾಗುವಂತೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಗೋವಿಂದ ಕಾರಜೋಳ ಹೇಳಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ 870 ಎಂಜಿನಿಯರ್‌ಗಳನ್ನು ನೇರ ನೇಮಕಾತಿ ಮಾಡಿಕೊಳ್ಳುವ ಪ್ರಯತ್ನ ನಡೆದಿತ್ತು. ಇಲಾಖೆಯ ಮುಖ್ಯ ಎಂಜಿನಿಯರ್ ಅವರನ್ನೇ ಅಧ್ಯಕ್ಷರನ್ನಾಗಿ ನೇಮಿಸಿ ಅರ್ಜಿ ಆಹ್ವಾನಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು ಮುಂದಾಗಿತ್ತು. ಈ ಬಗ್ಗೆ ಸಾಕಷ್ಟು ದೂರುಗಳ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಪಾರದರ್ಶಕವಾಗಿ ನೇಮಕ ಮಾಡಿಕೊಳ್ಳಲು ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ.
-ಗೋವಿಂದ ಕಾರಜೋಳ, ಡಿಸಿಎಂ