Advertisement

ಮಾತೋಶ್ರೀ ಬಿಡಲು ಉದ್ಧವ್‌ ಬೆದರಿಕೆ: ರಾಣೆ

12:12 PM May 09, 2019 | Vishnu Das |

ಮುಂಬಯಿ: ಮಹಾರಾಷ್ಟ್ರ ಮಾಜಿ ಸಿಎಂ ನಾರಾಯಣ್‌ ರಾಣೆ ತಮ್ಮ ಆತ್ಮಚರಿತ್ರೆಯಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ವಿರುದ್ಧ ಸಂವೇದನೆಯ ಆರೋಪಗಳನ್ನು ಮಾಡಿದ್ದಾರೆ.

Advertisement

ರಾಣೆ ಅವರನ್ನು ಪಕ್ಷದಿಂದ ಹೊರಹಾಕದಿದ್ದರೆ ನಾನು ನನ್ನ ಪತ್ನಿ ರಶ್ಮಿ ಜತೆಗೆ ಮಾತೋಶ್ರೀ (ಠಾಕ್ರೆ ಅವರ ನಿವಾಸ) ಬಿಟ್ಟು ಹೋಗಲಿದ್ದೇನೆ ಎಂದು ಉದ್ಧವ್‌ ಠಾಕ್ರೆ ಅವರು ತಮ್ಮ ತಂದೆ ಶಿವಸೇನೆ ಪ್ರಮುಖ ಬಾಳಾ ಸಾಹೇಬ್‌ ಠಾಕ್ರೆ ಅವರಿಗೆ ಬೆದರಿಕೆ ಹಾಕಿದ್ದರು ಎಂದು ರಾಣೆ ಅವರು ತಮ್ಮ ಜೀವನಚರಿತ್ರೆ “ನೊ ಹೋಲ್ಡ್ಸ್‌ ಬೇರ್ಡ್‌- ಮೈ ಇಯರ್ಸ್‌ ಇನ್‌ ಪಾಲಿಟಿಕ್ಸ್‌’ನಲ್ಲಿ ಪ್ರತಿಪಾದಿಸಿದ್ದಾರೆ. ಈ ಆತ್ಮಚರಿತ್ರೆಯಲ್ಲಿ ರಾಣೆ ಅವರು ಇನ್ನೂ ಹಲವಾರು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಒಂದು ಕಾಲದಲ್ಲಿ ಶಿವಸೇನೆಯ ಓರ್ವ ಪ್ರಮುಖ ನಾಯಕರಾಗಿದ್ದ ರಾಣೆ ಅವರು ತಮ್ಮ ಮಾಜಿ ಪಕ್ಷದ ಸಹೋದ್ಯೋಗಿ ಮನೋಹರ್‌ ಜೋಶಿ ಅವರನ್ನು ಕೂಡ ತಮ್ಮ ಆತ್ಮಚರಿತ್ರೆಯಲ್ಲಿ ಗುರಿ ಮಾಡಿಕೊಂಡಿದ್ದು, ಜೋಶಿ ಅವರನ್ನು ಓರ್ವ ದುರ್ಬಲ ಮುಖ್ಯಮಂತ್ರಿ ಎಂದು ಬಣ್ಣಿಸಿದ್ದಾರೆ. 1995ರಿಂದ ನಾಲ್ಕು ವರ್ಷಗಳ ಕಾಲ ಆಡಳಿತದಲ್ಲಿದ್ದ ಶಿವಸೇನೆ ನೇತೃತ್ವದ ಸರಕಾರವು ಅದರ ಭರವಸೆಗಳನ್ನು ಈಡೇರಿಸಲು ವಿಫಲವಾಗಿರುವುದಕ್ಕೆ ಜೋಶಿ ಹೊಣೆಯಾಗಿದ್ದಾರೆ ಎಂದು ರಾಣೆ ಆರೋಪಿಸಿದ್ದಾರೆ.

ರಾಜ್‌ ಠಾಕ್ರೆ ಹೊಸ ಪಕ್ಷವನ್ನು ಕಟ್ಟಲು ಬಯಸಿದ್ದರು 2005ರಲ್ಲಿ ರಾಜ್‌ ಠಾಕ್ರೆ ಅವರು ತನ್ನ ಜತೆಗೆ ಸೇರಿಕೊಂಡು ಹೊಸ ಪಕ್ಷವನ್ನು ಕಟ್ಟಲು ಬಯಸಿದ್ದರು. ಶಿವಸೇನೆಯನ್ನು ತೊರೆಯುವುದಕ್ಕೆ ಮೊದಲು ರಾಜ್‌ ಠಾಕ್ರೆ ಅವರೊಂದಿಗೆ ಮಾತುಕತೆ ನಡೆಸಿದ್ದರು. ಉದ್ಧವ್‌ ಅವರ ನಾಯಕತ್ವದಿಂದ ರಾಜ್‌ ಅಸಮಧಾನಗೊಂಡಿದ್ದರು ಎಂದು ರಾಣೆ ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖೀಸಿದ್ದಾರೆ.

ಶಿವಸೇನೆಯಲ್ಲಿ ಮುಖ್ಯಮಂತ್ರಿಯಾಗಿದ್ದ ರಾಣೆ

ಬಾಳಾ ಸಾಹೇಬ್‌ ಠಾಕ್ರೆ ಅವರು ಶಿವಸೇನೆಯ ಚುಕ್ಕಾಣಿಯಲ್ಲಿದ್ದಾಗ ರಾಣೆ ಅವರು ಅದರ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದರು. ಶಿವಸೇನೆಯಲ್ಲಿದ್ದಾಗ ಅವರು ಮಹಾರಾಷ್ಟ್ರದ ಸಿಎಂ ಆಗಿದ್ದರು. ಆದರೆ, ಉದ್ಧವ್‌ ಠಾಕ್ರೆ ಅವರನ್ನು ಸಾರ್ವಜನಿಕವಾಗಿ ಟೀಕಿಸಿದ ಅನಂತರ 2005ರ ಜುಲೈನಲ್ಲಿ ಅವರನ್ನು ಪಕ್ಷದಿಂದ ಹೊರಹಾಕಲಾಯಿತು. ಅನಂತರ ರಾಣೆ ಕಾಂಗ್ರೆಸ್‌ಗೆ ಸೇರಿಕೊಂಡು ರಾಜ್ಯದ ಕಂದಾಯ ಸಚಿವರಾದರು. ಸುಮಾರು ಒಂದು ದಶಕದ ಬಳಿಕ 2017ರ ಸೆಪ್ಟಂಬರ್‌ನಲ್ಲಿ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ತಮ್ಮ ಸ್ವಂತ ಮಹಾರಾಷ್ಟ್ರ ಸ್ವಾಭಿಮಾನ ಪಕ್ಷವನ್ನು ಪ್ರಾರಂಭಿಸಿದರು ಮತ್ತು ಭಾರತೀಯ ಜನತಾ ಪಾರ್ಟಿ ಯೊಂದಿಗೆ ಮೈತ್ರಿಮಾಡಿಕೂಂಡರು. 2018ರಲ್ಲಿ ರಾಣೆ ಮಹಾರಾಷ್ಟ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಆಯ್ಕೆಯಾದರು.

Advertisement

ಮಹಾರಾಷ್ಟ್ರ ಸಿಎಂ ಫಡ್ನವೀಸ್‌ ಅವರ ಉಪಸ್ಥಿತಿಯಲ್ಲಿ ರಾಣೆ ಅವರು ತಮ್ಮ ಆತ್ಮಚರಿತ್ರೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆದರೆ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಮತ್ತು ಶಿವಸೇನೆಯು ನಿಕಟ ಸಂಬಂಧವನ್ನು ಹೊಂದಿರುವ ಹಿನ್ನೆಲೆಯಲ್ಲಿ ಫಡ್ನವೀಸ್‌ ಅವರು ಈ ಪುಸಕ್ತ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿರುವರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next