Advertisement

ಗರ್ಭಕೋಶ ಜಾರುವಿಕೆ ನಾವು ಎಚ್ಚರಗೊಳ್ಳುವುದು ಯಾವಾಗ?

05:18 PM Feb 05, 2022 | Team Udayavani |

ಇವತ್ತು ನನಗೆ ಬಹಳ ಆಘಾತವಾಯಿತು, ಹತಾಶೆ ಉಂಟಾಯಿತು ಮತ್ತು ಬಹಳ ದುಃಖಿತನಾದೆ.
ನಾನು 20 ವರ್ಷಗಳಿಂದ ಸ್ತ್ರೀರೋಗ ಶಾಸ್ತ್ರ ವಿಭಾಗದಲ್ಲಿ ವೃತ್ತಿಪರ ಳಾಗಿದ್ದೇನೆ, ಆದರೆ ಮಹಿಳೆಯ ಆರೋಗ್ಯದ ವಿಚಾರಕ್ಕೆ ಬಂದರೆ ಏನೂ ಬದಲಾಗಿಲ್ಲ ಎಂದನ್ನಿಸುತ್ತದೆ. ಅನಾದಿ ಕಾಲದಿಂದ ಸ್ತ್ರೀಯ ಆರೋಗ್ಯವನ್ನು ಕಡೆಗಣಿಸುತ್ತ ಬರಲಾಗಿದೆ; ಆದರೆ ಪ್ರಸ್ತುತ 21ನೇ ಶತಮಾನದಲ್ಲಿ ಆಕೆ ಶಿಕ್ಷಣ, ಉದ್ಯೋಗಾವಕಾಶಗಳು, ರಾಜಕೀಯ, ಆಲೋಚನೆಗಳ ಅಭಿವ್ಯಕ್ತಿ – ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಪುರುಷನಿಗೆ ಸರಿಸಮಾನಳಾಗಿ ಮುನ್ನಡೆಯುತ್ತಿದ್ದಾಳೆ. ಹಾಗಾದರೆ ಆಕೆಯ ಆರೋಗ್ಯ ಮತ್ತು ಆಕೆಯನ್ನು ಕಾಡುವ ಅನಾರೋಗ್ಯಗಳ ವಿಚಾರದಲ್ಲಿಯೂ ಇದೇ ರೀತಿಯ ಪರಿಗಣನೆ ಬೇಡವೇ? ಮಹಿಳೆಯರ ಆರೋಗ್ಯದ ಬಗ್ಗೆ ಸಮಾಜದಲ್ಲಿ ಜಾಗೃತಿಯನ್ನು ಉಂಟುಮಾಡುವುದಕ್ಕಾಗಿ ಲೇಖನಗಳು, ಪುಸ್ತಕಗಳು ಪ್ರಕಟವಾಗುತ್ತವೆ. ಅಂತರ್ಜಾಲ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವಾಗಿ ಕ್ರಿಯಾತ್ಮಕ ವಿಚಾರಗಳನ್ನು ಪ್ರಕಟಿಸುವುದಕ್ಕೆ ಅಸಾಧಾರಣವಾಗಿ ಶ್ರಮಿಸಲಾಗುತ್ತಿದೆ. ಮಹಿಳೆಯರ ಆರೋಗ್ಯ ಮತ್ತಿತರ ವಿಚಾರಗಳ ಬಗ್ಗೆ ನಾಚಿಕೆಪಟ್ಟುಕೊಳ್ಳಬಾರದು ಎಂಬ ಅರಿವನ್ನು ಸಮಾಜದಲ್ಲಿ ಮೂಡಿಸುವುದಕ್ಕಾಗಿ ಸಿನೆಮಾಗಳನ್ನು ತಯಾರಿಸಿ ಥಿಯೇಟರ್‌ಗಳಲ್ಲಿ ಪ್ರದರ್ಶಿಸಲಾಗುತ್ತದೆ.

Advertisement

ದುರದೃಷ್ಟವಶಾತ್‌, ನಾವೆಲ್ಲರೂ ನಮ್ಮ ಪ್ರಯತ್ನಗಳನ್ನು ಒಗ್ಗೂಡಿಸಿ ಮಹಿಳೆಯರ ಋತುಚಕ್ರದ ಬಗ್ಗೆ ಇರುವ ಮೂಢನಂಬಿಕೆಗಳು, ಗರ್ಭಧಾರಣೆ ಮತ್ತು ಶಿಶು ಜನನಕ್ಕೆ ಸಂಬಂಧಿಸಿದ ತಪ್ಪುಕಲ್ಪನೆಗಳನ್ನು ದೂರ ಮಾಡುವ ಹೋರಾಟದಲ್ಲಿ ಜಯ ಸಾಧಿಸಿದ್ದೇವೆ ಎಂದುಕೊಳ್ಳು ವಾಗಲೇ ಅಜ್ಞಾನದ ಪಿಶಾಚಿ ಮತ್ತೆ ಗವಾಕ್ಷಿಯಲ್ಲಿ ಇಣುಕುತ್ತಾ, “ನಾನು ಇಲ್ಲೇ ಇದ್ದೇನೆ…’ ಎನ್ನುತ್ತದೆ.

ಇವತ್ತು ಅಂಥ ಒಂದು ದಿನ. 57 ವರ್ಷ ವಯಸ್ಸಿನ ರತ್ನಾ ಎನ್ನುವ ಮಹಿಳೆ ನಮ್ಮ ಹೊರರೋಗಿ ವಿಭಾಗಕ್ಕೆ ಬಂದರು. ಅವರನ್ನು ವೈದ್ಯ ರೊಬ್ಬರು ಪ್ರಾಥಮಿಕವಾಗಿ ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ನಮ್ಮಲ್ಲಿಗೆ ಕಳುಹಿಸಿದ್ದರು. ಆಕೆಗೆ 20 ವರ್ಷಗಳಿಂದ ನಾಲ್ಕನೆಯ ಹಂತದ ಗರ್ಭಕೋಶ ಜಾರಿದ ಸಮಸ್ಯೆಯಿದ್ದು, ಅದೀಗ ಕ್ಯಾನ್ಸರ್‌ ಆಗಿ ಪರಿವರ್ತನೆ ಹೊಂದಿತ್ತು. ಆದರೂ ಆಕೆಗೆ ಅದರ ಬಗ್ಗೆ ಚಿಂತೆಯೇ ಇರಲಿಲ್ಲ. ಅದರ ಬಗ್ಗೆ ಯಾರ ಬಳಿ ಯಾದರೂ ಹೇಳಿಕೊಳ್ಳಬೇಕು ಎಂದೂ ಆಕೆಗೆ ಅನಿಸುತ್ತಿರಲಿಲ್ಲ. ತನ್ನ ತೊಡೆಯ ಒಳಭಾಗದಲ್ಲಿ 2 ಸೆಂ.ಮೀ. ಗಾತ್ರದ ಸಣ್ಣ ಗಡ್ಡೆ ಎದ್ದಿದ್ದು, ಅದನ್ನಾಕೆ ತನ್ನ ಮಗಳಿಗೆ ತೋರಿಸಿದ್ದರು; ಇದು ಕ್ಯಾನ್ಸರ್‌ ಇರಬಹುದು ಎಂಬುದಾಗಿ ಆಕೆಯ ಕುಟುಂಬದವರು ಹೆದರಿದ್ದರಿಂದಾಗಿ ಆಕೆ ವೈದ್ಯರ ಬಳಿಗೆ ಬಂದಿದ್ದರು. ಗಡ್ಡೆ ಅಥವಾ “ಲೈಪೊಮಾ’ ಕೊಬ್ಬು ಸಹಿತ ಅಂಗಾಂಶಗಳ ಅಪಾಯರಹಿತ ಸ್ಥಿತಿಯಾಗಿದ್ದು, ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು.

ಆಕೆಯ ತೊಡೆಯ ಮೇಲೆ ಎದ್ದಿರುವ ಸಣ್ಣ ಗಡ್ಡೆ ಅಥವಾ ಊತವನ್ನು ತಪಾಸಣೆ ಮಾಡುತ್ತಿರುವಾಗ ವೈದ್ಯರಿಗೆ ಆಕೆಯ ಜನನಾಂಗದ ಹೊರಗೆ ಜೋತಾಡುತ್ತಿರುವ 10 ಸೆಂ.ಮೀ. ಅಥವಾ ಅದಕ್ಕಿಂತ ದೊಡ್ಡ ಮಾಂಸದ ಮುದ್ದೆ ಗಮನಕ್ಕೆ ಬಂದಿತ್ತು. ಆ ಬಗ್ಗೆ ವೈದ್ಯರು ಕೇಳಿದಾಗ, 20 ವರ್ಷಗಳ ಹಿಂದೆಯೇ ಗರ್ಭಕೋಶ ಜಾರುವಿಕೆ ಆರಂಭವಾಗಿದ್ದಾಗಿಯೂ, ಕಾಲಕ್ರಮೇಣ ಈ ಗಾತ್ರ ಮುಟ್ಟಿರುವುದಾಗಿಯೂ ಆಕೆ ತಿಳಿಸಿದ್ದರು. ಕಳೆದ ಮೂರು ತಿಂಗಳುಗಳಿಂದ ಸ್ವಲ್ಪ ಪ್ರಮಾಣದ ರಕ್ತಸ್ರಾವ ಆಗುತ್ತಿರುವುದಾಗಿಯೂ ಆಕೆ ತಿಳಿಸಿದ್ದರು. ತನ್ನ ನಾಲ್ಕನೆಯ ಮಗು ಜನಿಸಿದ ಬಳಿಕ ಈ ಬೆಳವಣಿಗೆ ಆರಂಭವಾದ್ದರಿಂದ ಇದು ಹೆರಿಗೆಯ ಭಾಗವಾಗಿರಬಹುದು ಎಂಬು ದಾಗಿ ಭಾವಿಸಿದ್ದಾಗಿ ರತ್ನಾ ಹೇಳಿದ್ದರು. ಗರ್ಭಕೋಶದ ಜಾರುವಿಕೆ ನಿಧಾನವಾಗಿ ಹೆಚ್ಚುತ್ತ ಬಂದು ಈಗ ನಡೆದಾಡುವುದಕ್ಕೆ, ಮೂತ್ರ ವಿಸರ್ಜನೆಗೂ ತೊಂದರೆ ಉಂಟುಮಾಡುತ್ತಿತ್ತು. ಇದರ ಬಗ್ಗೆ ಮಕ್ಕಳಿಗೆ ಯಾಕೆ ಹೇಳಲಿಲ್ಲ ಕೇಳಿದರೆ (ಅವರೆಲ್ಲರೂ ವಿದ್ಯಾವಂತರು ಮತ್ತು ತಾಯಿಯ ಬಗ್ಗೆ ಕಾಳಜಿ ಉಳ್ಳವರು), “ಅದು ನಾಚಿಕೆ, ಮುಜುಗರದ ವಿಷಯವಲ್ಲವೆ’ ಎಂದಿದ್ದರು ಆಕೆ.

ಆಕೆಯ ಕತೆಯನ್ನು ಕೇಳಿ ನಾನು ಸ್ತಂಭೀಭೂತನಾದೆ. ಆದರೆ ಮೌನವಾಗಿಯೇ ಹೀಗೆ ನೋವು ನುಂಗಿಕೊಂಡು ಬದುಕುತ್ತಿರುವವರು ರತ್ನಾ ಮಾತ್ರವೇ ಅಲ್ಲ. ನಮ್ಮ ಯೂರೋಗೈನಕಾಲಜಿ ವಿಭಾಗಕ್ಕೆ ಬಂದರೆ ನೀವು ದಿನಕ್ಕೆ ಹಲವು ಮಂದಿ ಇಂತಹ ಮಹಿಳೆಯರನ್ನು ಕಾಣಬಹುದು. ಅವರಲ್ಲಿ ಬಹುತೇಕ ಮಂದಿ ಜಾರಿ ಹೊರಬಂದಿರುವ ಮಾಂಸದ ಮುದ್ದೆ ತಮ್ಮ ನಡಿಗೆಗೆ, ಮೂತ್ರ/ಮಲ ವಿಸರ್ಜನೆಗೆ ತೊಂದರೆ ಉಂಟುಮಾಡುತ್ತಿರುವ ದೂರಿನೊಂದಿಗೆ ಬಂದಿರುತ್ತಾರೆ. ಸಂಖ್ಯೆ ಕಡಿಮೆ ಇದ್ದರೂ ಕಳೆದ 2ರಿಂದ 3 ವರ್ಷಗಳಲ್ಲಿ ಗರ್ಭಕೋಶ ಜಾರುವಿಕೆಯು ಮೂತ್ರಾಂಗ ಕ್ಯಾನ್ಸರ್‌, ಗರ್ಭಕಂಠದ ಕ್ಯಾನ್ಸರ್‌ ಮತ್ತು ಮೂತ್ರಪಿಂಡ ವೈಫ‌ಲ್ಯ ದಂತಹ ಪ್ರಾಣಾಪಾಯಕಾರಿ ಸ್ಥಿತಿಗೆ ಉಲ್ಬಣಿಸಿರುವುದನ್ನು ನಾವು ಕಂಡಿದ್ದೇವೆ.

Advertisement

ಪೆಲ್ವಿಕ್‌ ಆರ್ಗನ್‌ಗಳ ಜಾರುವಿಕೆ ಮಹಿಳೆಯರನ್ನು ಬಾಧಿಸುವ ಒಂದು ಸಾಮಾನ್ಯ ಅನಾರೋಗ್ಯ ಸ್ಥಿತಿ. ಸಾಮಾನ್ಯವಾಗಿ ಇದು ಜೀವಾಪಾಯಕ್ಕೆ ಕಾರಣ ವಾಗುವುದಿಲ್ಲವಾದರೂ ಅದು ಜೀವನ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಾಗಿದೆ. ಆರಂಭಿಕ ಹಂತಗಳಲ್ಲಿ ಇದನ್ನು ಪತ್ತೆ ಮಾಡಿದರೆ ತುಂಬಾ ಸರಳವಾಗಿ ಚಿಕಿತ್ಸೆ ನೀಡಬಹುದು. ನಿಮ್ಮ ತಾಯಿಯ ಜತೆ, ನಿಮ್ಮ ಪತ್ನಿಯ ಜತೆಗೆ, ನಿಮ್ಮ ಅಜ್ಜಿಯ ಜತೆಗೆ, ನಿಮ್ಮ ಚಿಕ್ಕಮ್ಮ/ಅತ್ತೆ ಮತ್ತಿತರರ ಜತೆಗೆ ಇಂತಹ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿ, ಅವರು ಹಿಂಜರಿಕೆಯಿಲ್ಲದೆ ಇಂತಹ ವಿಚಾರಗಳನ್ನು ಹಂಚಿಕೊಳ್ಳುವಂತಹ ವಾತಾವರಣವನ್ನು ನಿರ್ಮಿಸಿ.
ಯಾಕೆಂದರೆ, ಆಗಲೇ ಹೇಳಿದಂತಹ ರತ್ನಾ ಅವರಲ್ಲೊಬ್ಬರೂ ಆಗಿರಬಹುದು…

ಮಲ್ಟಿ ಆರ್ಗನ್‌ ಪ್ರೊಲ್ಯಾಪ್ಸ್‌
ಗರ್ಭಕೋಶ, ಮೂತ್ರಕೋಶ, ಮೂತ್ರನಾಳ, ದೊಡ್ಡಕರುಳಿನ ಕೊನೆಯ ಭಾಗ, ಗುದದ್ವಾರ ಇತ್ಯಾದಿ ಬಹು ಅಂಗಗಳು ಒಟ್ಟಾಗಿ ಜಾರುವ ಅನಾರೋಗ್ಯ ಸ್ಥಿತಿಯನ್ನು ಮಲ್ಟಿ ಆರ್ಗನ್‌ ಪ್ರೊಲ್ಯಾಪ್ಸ್‌ ಅಥವಾ ಬಹು ಅಂಗ ಜಾರುವಿಕೆ ಎನ್ನುತ್ತಾರೆ.

ಮುಂದುವರಿದ ಹಂತಗಳಲ್ಲಿ ಪತ್ತೆಯಾದಾಗ ಸಂಕೀರ್ಣ ಸಮಸ್ಯೆಗಳನ್ನು ತಡೆಯಲು ಮತ್ತು ಅಂಗಗಳ ಕಾರ್ಯಚಟುವಟಿಕೆಗಳನ್ನು ಪುನರ್‌ಸ್ಥಾಪಿಸಲು ಮಹಿಳೆಯನ್ನು ತಜ್ಞ ಆರೋಗ್ಯ ಸೌಲಭ್ಯಗಳುಳ್ಳ ಆಸ್ಪತ್ರೆಗಳಿಗೆ ಕಳುಹಿಸಬೇಕು. ಆಧುನಿಕ ಯುರೊಗೈನಕಾಲಜಿಯಲ್ಲಿ ಜಾರುವಿಕೆಗೆ ಚಿಕಿತ್ಸೆಯಾಗಿ ಗರ್ಭಕೋಶವನ್ನೇ ತೆಗೆದುಬಿಡುವ ವಿಧಾನ ಬಹು ಚರ್ಚೆಯಲ್ಲಿದೆ.

ಜಾರುವಿಕೆಯ ರೋಗಶಾಸ್ತ್ರವನ್ನು ಪರಿಗಣಿಸಿ ಹೇಳುವುದಾದರೆ ಗರ್ಭ ಕೋಶವು ಯಾವುದೇ ಪಾತ್ರವಿಲ್ಲದ ಅಂಗವಾಗಿದ್ದು, ಗರ್ಭಕೋಶವನ್ನು ಉಳಿಸಿಕೊಳ್ಳುವುದು ಕಾಯಿಲೆ ಪುನರಾವರ್ತನೆಯಾಗದಂತೆ ತಡೆಯುವಲ್ಲಿ ಸ್ವಲ್ಪ ಮಟ್ಟಿಗೆ ಪಾತ್ರ ವಹಿಸುತ್ತದೆ. ಆಧುನಿಕಗೊಂಡಿರುವ ಯುರೊಗೈನಕಾಲಜಿಯಲ್ಲಿ ಅಂಗಗಳು ಜನನಾಂಗದ ಮೂಲಕ ಜಾರದಂತೆ ತಡೆಯುವುದಕ್ಕೆ ಸಹಾಯ ಮಾಡುವ ಹಲವು ಉಪಕರಣಗಳಿವೆ. ಆದ್ದರಿಂದ ಸಮಸ್ಯೆಯೇನಿದ್ದರೂ ಹಿಂಜರಿಕೆ, ಸಂಕೋಚ ಇಲ್ಲದೆ ನಿಮ್ಮ ವೈದ್ಯರ ಜತೆಗೆ ಮುಕ್ತವಾಗಿ ಹಂಚಿಕೊಳ್ಳಿ.

ಇವೆಲ್ಲಕ್ಕಿಂತಲೂ ಮುಖ್ಯವಾಗಿ, ಗರ್ಭಕೋಶ ಜಾರುವಿಕೆ ಅಥವಾ ಪ್ರೊಲ್ಯಾಪ್ಸ್‌ ಎಂದರೆ ಏನು?
ಗರ್ಭಕೋಶ ಜಾರುವಿಕೆ, ಪ್ರೊಲ್ಯಾಪ್ಸ್‌ ಅಥವಾ ಯುಟೆರೊ ವೆಜೈನಲ್‌ ಪ್ರೊಲ್ಯಾಪ್ಸ್‌ ಅಥವಾ ಪೆಲ್ವಿಕ್‌ ಆರ್ಗನ್‌ ಪ್ರೊಲ್ಯಾಪ್ಸ್‌ – ಇದು ಋತುಚಕ್ರಬಂಧಕ್ಕೆ ಒಳಗಾಗಿರುವ ಅಥವಾ ಆ ಸ್ಥಿತಿ ಯನ್ನು ಮುಟ್ಟುವ ವಯಸ್ಸಿನ ಮಹಿಳೆಯರಲ್ಲಿ ಬಹಳ ಸಾಮಾನ್ಯ ವಾಗಿ ಕಂಡುಬರುವ ಅನಾರೋಗ್ಯ ಸ್ಥಿತಿ. ಜಾಗತಿಕ ಅಂಕಿ ಅಂಶಗಳ ಪ್ರಕಾರ, 50 ವರ್ಷ ವಯಸ್ಸಿಗಿಂತ ಹಿರಿಯರಾದ ಮಹಿಳೆಯರಲ್ಲಿ ಅರ್ಧದಷ್ಟು ಮಂದಿ ಪೆಲ್ವಿಕ್‌ ಆರ್ಗನ್‌ ಪ್ರೊಲ್ಯಾಪ್ಸ್‌ನ ಕೆಲವು ಲಕ್ಷಣಗಳನ್ನು ಹೊಂದಿರುತ್ತಾರೆ ಹಾಗೂ 80 ವರ್ಷ ವಯಸ್ಸಿನ ಹೊತ್ತಿಗೆ ಪ್ರತೀ ಹತ್ತರಲ್ಲಿ ಒಬ್ಬರು ಮಹಿಳೆಗೆ ಗರ್ಭಕೋಶ ಜಾರು ವಿಕೆಯ ಸಮಸ್ಯೆಗೆ ಶಸ್ತ್ರಚಿಕಿತ್ಸೆಯ ಅಗತ್ಯ ಬೀಳುತ್ತದೆ.

ಮುಂದಿನ ವಾರಕ್ಕೆ

-ಡಾ| ದೀಕ್ಷಾ ಪಾಂಡೆ
ಡಾ| ಸುನಯಾ ಪುರಾಣಿಕ್‌
ಡಾ| ವಿವಲ್‌ ವೆನಿಸಾ ಲೊಬೊ
ಡಾ| ಶ್ರೀಪಾದ ಹೆಬ್ಟಾರ್‌
ಪ್ರಸೂತಿಶಾಸ್ತ್ರ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ

 

Advertisement

Udayavani is now on Telegram. Click here to join our channel and stay updated with the latest news.

Next